ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಮಹತ್ವದ ಹಿನ್ನಡೆಯಾಗಿದ್ದು, ನಟ ದರ್ಶನ್ ಗ್ಯಾಂಗ್‌ಗೆ ಸೇರಿದ ಐವರು ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್, ವಿನಯ್ ಹಾಗೂ ಧನರಾಜ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಐವರು ಆರೋಪಿಗಳಿಗೆ ಕೆಳಹಂತದ ನ್ಯಾಯಾಲಯ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ವಿಶೇಷ ಸರ್ಕಾರಿ ಅಭಿಯೋಜಕರು (SPP) ಹೈಕೋರ್ಟ್ ಮೆಟ್ಟಿಲೇರಿದ್ದರು. ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಆದರೆ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಚಯ್ಯ ಅವರ ಏಕಸದಸ್ಯ ಪೀಠವು ಎರಡೂ ಪಕ್ಷಗಳ ವಾದ ಆಲಿಸಿ, ಜಾಮೀನು ರದ್ದುಪಡಿಸಲು ಸಮರ್ಪಕ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪರಿಣಾಮವಾಗಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಆರೋಪಿಗಳ ಜಾಮೀನನ್ನು ಮುಂದುವರಿಸಲು ಆದೇಶಿಸಿದೆ.ಆರೋಪಿಗಳಾದ ರಾಘವೇಂದ್ರ, ಧನರಾಜ್ ಹಾಗೂ ವಿನಯ್ ಪರ ಹಿರಿಯ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿ, ತನಿಖೆ ಪೂರ್ಣಗೊಂಡಿದ್ದು ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಜಾಮೀನು ರದ್ದುಪಡಿಸಲು ಯಾವುದೇ ಬಲವಾದ ಆಧಾರಗಳಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಿದ್ದು, ಇವರಲ್ಲಿ ಕೆಲವರಿಗೆ ಈಗಾಗಲೇ ಜಾಮೀನು ದೊರೆತಿದೆ. ದರ್ಶನ್ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದತಿಗೆ ಪ್ರಾಸಿಕ್ಯೂಷನ್ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ಐವರು ಆರೋಪಿಗಳ ಪರವಾಗಿ ಹೈಕೋರ್ಟ್ ತೀರ್ಪು ನೀಡಿರುವುದು ತನಿಖಾ ಸಂಸ್ಥೆಗೆ ಹಿನ್ನಡೆಯಾಗಿ ಪರಿಣಮಿಸಿದೆ.ಈ ಆದೇಶದೊಂದಿಗೆ ಜಾಮೀನಿನ ಮೇಲೆ ಹೊರಗಿರುವ ಐವರು ಆರೋಪಿಗಳು ಸದ್ಯ ನಿರಾಳರಾಗಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.






