Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೊಸ ಕಂಟಕ: OTP ಕದಿಯುವ ‘ಮ್ಯಾಂಟೆಕ್ಸ್ ಒಟಾಕ್ಸ್’ ಮಾಲ್ವೇರ್ ಪತ್ತೆ!

---Advertisement---

ಸುದ್ದಿಒನ್.ಸೆಪ್ಟೆಂಬರ್.13:  ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಕದಿಯುವ ‘ಮ್ಯಾಂಟೆಕ್ಸ್ ಒಟಾಕ್ಸ್’ (Mantex Otax) ಎಂಬ ಹೊಸ ಅಪಾಯಕಾರಿ ಮಾಲ್ವೇರ್ ಪತ್ತೆಯಾಗಿದ್ದು, ಸೈಬರ್ ಭದ್ರತಾ ತಜ್ಞರು ತೀವ್ರ ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಮೊಬೈಲ್ ಸೆಕ್ಯುರಿಟಿ ಸಂಸ್ಥೆ ‘ಜಿಂಪೀರಿಯಂ’ (Zimperium) ಸಂಶೋಧಕರು ಈ ಅಪಾಯಕಾರಿ ಸಾಫ್ಟ್‌ವೇರ್ ಅನ್ನು ಪತ್ತೆಹಚ್ಚಿದ್ದಾರೆ.

ವರದಿಗಳ ಪ್ರಕಾರ, ಈ ಮಾಲ್ವೇರ್ ಗೂಗಲ್ ಪ್ಲೇ ಸ್ಟೋರ್‌ನಿಂದ ಹೊರತಾದ ಥರ್ಡ್ ಪಾರ್ಟಿ ಮೂಲಗಳಿಂದ ಡೌನ್‌ಲೋಡ್ ಮಾಡಿಕೊಳ್ಳುವ APK ಫೈಲ್‌ಗಳ ಮೂಲಕ ಹರಡುತ್ತಿದೆ. ಪರಿಚಯವಿಲ್ಲದ ಅಥವಾ ಸಂಶಯಾಸ್ಪದ ವೆಬ್‌ಸೈಟ್‌ಗಳಿಂದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಆಂಡ್ರಾಯ್ಡ್ ಬಳಕೆದಾರರೇ ಇದರ ಮುಖ್ಯ ಗುರಿಯಾಗಿದ್ದಾರೆ.

ಬ್ಯಾಂಕಿಂಗ್ OTP ಮತ್ತು ಖಾಸಗಿ ಚಾಟ್‌ಗಳಿಗೆ ಕನ್ನ

ಸ್ಮಾರ್ಟ್‌ಫೋನ್‌ಗೆ ಒಮ್ಮೆ ಈ ಮಾಲ್ವೇರ್ ನುಸುಳಿದರೆ ಸಾಕು, ಬಳಕೆದಾರರ SMS ಸಂದೇಶಗಳನ್ನು ಓದುವ ಅನುಮತಿ ಪಡೆದುಕೊಳ್ಳುತ್ತದೆ. ಇದರಿಂದ ಬ್ಯಾಂಕಿಂಗ್ ವ್ಯವಹಾರಗಳು ಹಾಗೂ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಬರುವ ಗೌಪ್ಯ OTP (One-Time Password) ಗಳನ್ನು ಇದು ಕ್ಷಣಾರ್ಧದಲ್ಲಿ ಕದಿಯಬಲ್ಲದು. ಇದು ಬಳಕೆದಾರರಿಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡುವ ಸಾಧ್ಯತೆ ಇದೆ.

ಇದರ ಜೊತೆಗೆ, ಕರೆಗಳ ಪಟ್ಟಿ (Call logs), ಕಾಂಟ್ಯಾಕ್ಟ್‌ಗಳು, ಬ್ರೌಸಿಂಗ್ ಹಿಸ್ಟರಿ ಹಾಗೂ ಲೊಕೇಶನ್ ಮಾಹಿತಿಯನ್ನೂ ಇದು ಕದಿಯುತ್ತದೆ. ಇಷ್ಟೇ ಅಲ್ಲದೆ, ಆಂಡ್ರಾಯ್ಡ್‌ನ ‘Accessibility’ ಫೀಚರ್ ಅನ್ನು ದುರುಪಯೋಗಪಡಿಸಿಕೊಂಡು ವಾಟ್ಸಾಪ್ (WhatsApp) ಮತ್ತು ಟೆಲಿಗ್ರಾಂ (Telegram) ಖಾತೆಗಳಿಗೂ ಲಗ್ಗೆ ಇಡುತ್ತದೆ. ಬಳಕೆದಾರರ ಖಾಸಗಿ ಸಂದೇಶಗಳು, ಪ್ರೊಫೈಲ್ ವಿವರಗಳು ಮತ್ತು ಡಿಜಿಟಲ್ ಚಟುವಟಿಕೆಗಳ ಮೇಲೂ ಇದು ಕಣ್ಣಿಡುತ್ತದೆ.

ಪೋನ್ ಲಾಕ್ ಮಾಡಿ ಕಿರುಕುಳ

ಮಾಹಿತಿ ಕದಿಯುವುದಷ್ಟೇ ಅಲ್ಲದೆ, ಈ ಮಾಲ್ವೇರ್ ಫೋನ್ ಅನ್ನು ಲಾಕ್ ಮಾಡಿ ಪದೇಪದೇ ಅಸಭ್ಯ ಪಾಪ್-ಅಪ್ ಜಾಹೀರಾತುಗಳು, ಆಡಿಯೋ ಮತ್ತು ವೀಡಿಯೊಗಳನ್ನು ಪ್ರದರ್ಶಿಸುವ ಮೂಲಕ ಬಳಕೆದಾರರಿಗೆ ತೀವ್ರ ಕಿರಿಕಿರಿಯನ್ನೂ ಉಂಟುಮಾಡುತ್ತದೆ.

ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ವಹಿಸಿ:

ಯಾವುದೇ ಕಾರಣಕ್ಕೂ ಅಪರಿಚಿತ ವೆಬ್‌ಸೈಟ್‌ಗಳು, ಸಂದೇಶಗಳು ಅಥವಾ ಸೋಷಿಯಲ್ ಮೀಡಿಯಾ ಲಿಂಕ್‌ಗಳ ಮೂಲಕ ಬರುವ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.

ಗೂಗಲ್ ಪ್ಲೇ ಸ್ಟೋರ್‌ನಂತಹ ಅಧಿಕೃತ ಮೂಲಗಳಿಂದ ಮಾತ್ರ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ.

ಯಾವುದೇ ಆ್ಯಪ್‌ಗೆ SMS, Contacts ಅಥವಾ Accessibility ಅನುಮತಿ (Permission) ನೀಡುವ ಮುನ್ನ ಎಚ್ಚರ ವಹಿಸಿ.

ಅನುಮಾನಾಸ್ಪದ ಆ್ಯಪ್‌ಗಳನ್ನು ತಕ್ಷಣ ಡಿಲೀಟ್ ಮಾಡಿ, ಮೊಬೈಲ್ ಸಾಫ್ಟ್‌ವೇರ್ ಅನ್ನು ಸದಾ ಅಪ್‌ಡೇಟ್ ಆಗಿರಿಸಿ.

Join WhatsApp

Join Now

Join Telegram

Join Now