ಬೆಂಗಳೂರು.ಆಗಸ್ಟ್.1: ಮುಂಬರುವ ಕೆಪಿಎಸ್‌ಸಿ ಮತ್ತು ಕೆಇಎ ಪರೀಕ್ಷೆಗಳಿಗೆ ಸುಮಾರು 35 ಲಕ್ಷ ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. ಹೀಗಾಗಿ, ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಬೇಕು ಮತ್ತು ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಯಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಕರ್ನಾಟಕದಾದ್ಯಂತ 70,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ನೇಮಕಾತಿ ಸಿದ್ಧತೆಗಳನ್ನು ಪರಿಶೀಲಿಸಲು ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ.
ಮುಂಬರುವ ಕೆಪಿಎಸ್‌ಸಿ ಮತ್ತು ಕೆಇಎ ಪರೀಕ್ಷೆಗಳಿಗೆ ಸುಮಾರು 35 ಲಕ್ಷ ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. ಹೀಗಾಗಿ, ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಬೇಕು ಮತ್ತು ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಯಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಪರೀಕ್ಷೆಯ ಪ್ರತಿಯೊಂದು ಹಂತವನ್ನೂ ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ. ಖಾಸಗಿ ಕೋಚಿಂಗ್ ಸೆಂಟರ್‌ಗಳ ಮೇಲೆ ತೀವ್ರ ನಿಗಾ ಇಡಲು ಪೊಲೀಸರಿಗೆ ಸೂಚಿಸಲಾಗಿದ್ದು, ಪರೀಕ್ಷಾ ಕರ್ತವ್ಯನಿರತ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಮೊಬೈಲ್ ಫೋನ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವುದರಲ್ಲಿ ಯಾವುದೇ ಲೋಪವಾದರೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು (SP) ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಸಂಪೂರ್ಣ ಪಾರದರ್ಶಕ ಹಾಗೂ ಮೆರಿಟ್ ಆಧಾರಿತ ನೇಮಕಾತಿ ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಗ್ರ ಸುಧಾರಣೆಗಳನ್ನು ತರಲು ಶ್ರೀ ಎಸ್. ವಿ. ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತಿದೆ. ಶ್ರೀ ಟಿ. ಎಂ. ವಿಜಯಭಾಸ್ಕರ್, ಶ್ರೀಮತಿ ವಂದಿತಾ ಶರ್ಮಾ ಹಾಗೂ ಶ್ರೀ ಎಲ್. ಕೆ. ಅತೀಕ್ ಅವರು ಈ ಸಮಿತಿಯ ಸದಸ್ಯರಾಗಿರಲಿದ್ದಾರೆ ಎಂದರು.
ಪಾರದರ್ಶಕ ಹಾಗೂ ನಂಬಿಕಾರ್ಹ ನೇಮಕಾತಿ ಪ್ರಕ್ರಿಯೆಯಲ್ಲಿ ಕರ್ನಾಟಕವು ಇಡೀ ದೇಶಕ್ಕೇ ಮಾದರಿಯಾಗಬೇಕು. ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ನಮ್ಮ ವ್ಯವಸ್ಥೆಯ ಮೇಲೆ ಸಂಪೂರ್ಣ ಭರವಸೆ ಇರಬೇಕು; ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿರಲಿದೆ ಎಂದು ಹೇಳಿದ್ದಾರೆ.










