ಬೆಂಗಳೂರು.ಆಗಸ್ಟ್.1: ರಾಜ್ಯದ ಶಾಲಾ ಮತ್ತು ಕಾಲೇಜುಗಳ ಆವರಣ ಹಾಗೂ ಸುತ್ತಮುತ್ತಲಿನ 50 ಮೀಟರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು, ಸಕ್ಕರೆ ಮತ್ತು ಉಪ್ಪು ಹೊಂದಿರುವ ಆಹಾರ ಪದಾರ್ಥಗಳ (HFSS Foods) ಮಾರಾಟ ಹಾಗೂ ಪ್ರಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತರ ಕಚೇರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ 2020ರ ನಿಯಮಾವಳಿಗಳ ಅನ್ವಯ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿರಂತರ ತಪಾಸಣೆ ವೇಳೆಯಲ್ಲಿ ಶಾಲಾ ಮಕ್ಕಳು ಬಿಳಿ ಬ್ರೆಡ್, ಪಾಸ್ತಾ ಮತ್ತು ಸಂಸ್ಕರಿಸಿದ ತಿಂಡಿಗಳಂತಹ ಶುದ್ಧ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದು ಕಂಡುಬಂದಿದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಕೆಗೆ ಕಾರಣವಾಗುತ್ತಿದ್ದು, ಮಕ್ಕಳ ಏಕಾಗ್ರತೆ ಹಾಗೂ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಹೊಸ ಮಾರ್ಗದರ್ಶನದಂತೆ ಶಾಲಾ-ಕಾಲೇಜುಗಳ 50 ಮೀಟರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು, ಟ್ರಾನ್ಸ್ ಫ್ಯಾಟ್, ಅಧಿಕ ಸಕ್ಕರೆ ಹಾಗೂ ಉಪ್ಪು ಹೊಂದಿರುವ ಆಹಾರಗಳ ಉಚಿತ ವಿತರಣೆ, ಮಾರಾಟ, ಜಾಹೀರಾತು ಮತ್ತು ಪ್ರಚಾರಗಳನ್ನು ನಿಷೇಧಿಸಲಾಗಿದೆ. ಶಾಲೆಗಳ ಸಮೀಪದಲ್ಲಿರುವ ಎಲ್ಲಾ ಆಹಾರ ಮಳಿಗೆಗಳು, ಹೋಟೆಲ್‌ಗಳು, ಬೇಕರಿಗಳು ಹಾಗೂ ಕ್ಯಾಂಟೀನ್‌ಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಸೂಕ್ತ ನೋಂದಣಿ ಅಥವಾ ಪರವಾನಗಿ ಹೊಂದಿರಬೇಕು.

ನಿಯಮ ಉಲ್ಲಂಘಿಸುವ ಆಹಾರ ವ್ಯಾಪಾರಿಗಳ ವಿರುದ್ಧ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸಿ, ಸುಧಾರಣಾ ನೋಟಿಸ್ ನೀಡುವುದು, ಪರವಾನಗಿ ಅಮಾನತು ಅಥವಾ ರದ್ದುಗೊಳಿಸುವುದು, ಆಹಾರ ವಸ್ತುಗಳನ್ನು ವಶಪಡಿಸಿಕೊಳ್ಳುವುದು ಮತ್ತು ನ್ಯಾಯಾಂಗ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.
ಇದರ ಜೊತೆಗೆ, ಶಾಲಾ ಆಡಳಿತ ಮಂಡಳಿಗಳು ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ಜಂಕ್ ಫುಡ್ ತಡೆಯುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳು, ಕಾಳುಗಳು, ಹಣ್ಣುಗಳು ಮತ್ತು ಪೌಷ್ಟಿಕ ಆಹಾರ ಪದಾರ್ಥಗಳಿಗೆ ಶೇಕಡಾ 75 ರಿಂದ 80 ರಷ್ಟು ಆದ್ಯತೆ ನೀಡುವಂತೆ ಇಲಾಖೆ ತನ್ನ ಮಾರ್ಗದರ್ಶನದಲ್ಲಿ ಸ್ಪಷ್ಟಪಡಿಸಿದೆ.












