Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾರ್ವಜನಿಕರಿಗೆ ಮತ್ತೊಂದು ಶಾಕ್ ; ರಾಜ್ಯ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಶಿಫಾರಸು!

---Advertisement---

ಬೆಂಗಳೂರು.ಜೂನ್.20: ರಾಜ್ಯದಲ್ಲಿ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಾರ್ವಜನಿಕರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಸಾರಿಗೆ ನಿಗಮಗಳ ಭಾರಿ ಆರ್ಥಿಕ ನಷ್ಟವನ್ನು ಸರಿದೂಗಿಸಲು ತಕ್ಷಣವೇ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ಸರ್ಕಾರಕ್ಕೆ ಅಧಿಕೃತವಾಗಿ ಶಿಫಾರಸು ಮಾಡಿದೆ.

ಶುಕ್ರವಾರ ನಡೆದ ಉನ್ನತ ಮಟ್ಟದ ಗ್ಯಾರಂಟಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಸಾರಿಗೆ ಇಲಾಖೆಯನ್ನು ನಷ್ಟದ ಸುಳಿಯಿಂದ ಮುಕ್ತಗೊಳಿಸಲು ದರ ಹೆಚ್ಚಳ ಅನಿವಾರ್ಯ ಎಂಬ ಮನವಿಯನ್ನು ಮುಖ್ಯಮಂತ್ರಿಗಳ ಮುಂದೆ ಇಡಲಾಗಿದೆ.

ಶಕ್ತಿ ಯೋಜನೆಯಿಂದ ಕೋಟ್ಯಂತರ ರೂ. ಕೊರತೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಉಚಿತ ಬಸ್ ಪ್ರಯಾಣ ಯೋಜನೆಯಿಂದಾಗಿ ರಾಜ್ಯ ಸಾರಿಗೆ ಇಲಾಖೆಗೆ ಸದ್ಯ ಬರೊಬ್ಬರಿ 5,173 ಕೋಟಿ ರೂಪಾಯಿಗಳ ಆರ್ಥಿಕ ಕೊರತೆ ಉಂಟಾಗಿದೆ. ಈ ಬೃಹತ್ ಮೊತ್ತದ ಕೊರತೆ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸಾರಿಗೆ ನಿಗಮಗಳು ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸುತ್ತಿವೆ.

ಕಳೆದ ಮೇ ತಿಂಗಳ ಅಂತ್ಯದ ವೇಳೆಗೆ ಶಕ್ತಿ ಯೋಜನೆಯಡಿ ಒಟ್ಟು 763 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಗಿದೆ. ಇದರೊಂದಿಗೆ ಮುಂದಿನ 2026-27ನೇ ಸಾಲಿಗೆ ಸುಮಾರು 10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಗುರಿ ಹೊಂದಲಾಗಿದ್ದು, ಇದು ಸಾರಿಗೆ ಸಂಸ್ಥೆಗಳ ಮೇಲಿನ ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನಲಾಗಿದೆ.

ಕೇವಲ ಯೋಜನೆಯ ವೆಚ್ಚ ಮಾತ್ರವಲ್ಲದೆ, ಸಾರಿಗೆ ಸಿಬ್ಬಂದಿಯ ಬಾಕಿ ವೇತನ ಪಾವತಿಗಾಗಿ ಸದ್ಯ 1,271 ಕೋಟಿ ರೂಪಾಯಿಗಳ ತುರ್ತು ಅಗತ್ಯವಿದೆ. ಇದರಲ್ಲಿ ಸರ್ಕಾರದಿಂದ ಕೇವಲ 450 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ ಮೊತ್ತ ಬಾಕಿ ಉಳಿದಿದೆ. ಇದರ ಜೊತೆಗೆ ನಿರಂತರವಾಗಿ ಹೆಚ್ಚುತ್ತಿರುವ ಡೀಸೆಲ್ ದರ ಹಾಗೂ ಸಿಬ್ಬಂದಿಗಳ ನಿರ್ವಹಣಾ ವೆಚ್ಚಗಳು ನಿಗಮಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ.

ಕಳೆದ 2025ರ ಜನವರಿ 5 ರಂದು ರಾಜ್ಯದಲ್ಲಿ ಕೊನೆಯ ಬಾರಿಗೆ ಬಸ್ ಪ್ರಯಾಣದರವನ್ನು ಹೆಚ್ಚಿಸಲಾಗಿತ್ತು. ಆನಂತರದ ದಿನಗಳಲ್ಲಿ ಯಾವುದೇ ದರ ಪರಿಷ್ಕರಣೆ ಮಾಡದೇ ಇರುವುದು ಹಾಗೂ ವೆಚ್ಚಗಳು ದುಪ್ಪಟ್ಟಾಗಿರುವುದು ಇಂದಿನ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Join WhatsApp

Join Now

Join Telegram

Join Now