ಸುದ್ದಿಒನ್, ಚಿತ್ರದುರ್ಗ, ಜೂನ್. 20 : ನಗರದ ಸರಸ್ವತಿಪುರಂ ನಿವಾಸಿಯಾಗಿದ್ದ ಹಿರಿಯ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ (87 ವರ್ಷ) ಅವರು ಇಂದು ಬೆಳಿಗ್ಗೆ (ಶನಿವಾರ, ಜೂನ್ 20, 2026) ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ ಹಿರಿಯೂರು ತಾಲ್ಲೂಕು ಗೌನಹಳ್ಳಿಯಲ್ಲಿ ಬೆಳಿಗ್ಗೆ 10 ಗಂಟೆಯ ನಂತರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೌನಹಳ್ಳಿಯ ತಂದೆ ಗೊಂಚಿಗಾರ ಸಿದ್ದಯ್ಯ ಮತ್ತು ತಾಯಿ ಲಿಂಗಮ್ಮ ದಂಪತಿಗಳ ಹಿರಿಯ ಮಗನಾಗಿ 30-10-1939 ರಲ್ಲಿ ಜಿ.ಎಸ್. ಉಜ್ಜಿನಪ್ಪ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ (1962) ಹಾಗೂ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿ್ಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ನಿಂ ದ ಡಿಎಸ್ಎಿಸ್ಎಪ ಸ್ನಾತಕೋತ್ತರ ಡಿಪ್ಲೋಮಾ (1965) ಶಿಕ್ಷಣ ಪಡೆದಿದ್ದರು. 1969 ರಲ್ಲಿ ಶ್ರೀಮತಿ ಭೈರಮ್ಮ ಅವರೊಂದಿಗೆ ಇವರ ವಿವಾಹವಾಗಿತ್ತು.
ವೃತ್ತಿ ಮತ್ತು ಪತ್ರಿಕೋದ್ಯಮ ಪಯಣ
ಅಲ್ಪಕಾಲ ಮಧುಗಿರಿ ತಾಲ್ಲೂಕಿನ ದಂಡಿನದಿಬ್ಬ ಗ್ರಾಮದಲ್ಲಿ ಹಾಗೂ ಬೆಂಗಳೂರಿನ ಗಾಂಧೀನಗರದ ಆರ್ಯ ವಿದ್ಯಾಶಾಲಾ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದ ಅವರು, ದೂರದ ಗುಲ್ಬರ್ಗಾದ ಎಂ.ಎಸ್.ಕೆ ಹತ್ತಿಗಿರಣಿಯಲ್ಲಿ ಸಹಾಯಕ ಸಿಬ್ಬಂದಿ ಅಧಿಕಾರಿಯಾಗಿ (1966-67) ಸೇವೆ ಸಲ್ಲಿಸಿದರು. ಇದೇ ಅವಧಿಯಲ್ಲಿ ‘ನವಕಲ್ಯಾಣ’ ವಾರಪತ್ರಿಕೆಯ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು.

ಬಳಿಕ ಚಿತ್ರದುರ್ಗದ ಎಸ್.ಜೆ.ಎಂ ಬೃಹನ್ಮಠ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ (1968-70) ಹಾಗೂ ಬೃಹನ್ಮಠದ ಕನ್ನಡ ತ್ರೈಮಾಸಿಕ ‘ಗುರುಕುಲ’ದ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ನಂತರ ಅಧ್ಯಾಪಕ ವೃತ್ತಿ ತೊರೆದು ಚಿತ್ರದುರ್ಗದ ಜಯಲಕ್ಷ್ಮಿ ಹತ್ತಿಗಿರಣಿಯಲ್ಲಿ (1971-91) ಸುದೀರ್ಘ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಈ ಅವಧಿಯಲ್ಲಿ 1974 ರಲ್ಲಿ ‘ಲೋಕವಾಣಿ’ ಪತ್ರಿಕೆಗೆ ಹವ್ಯಾಸಿ ವರದಿಗಾರರಾಗಿ ಕೆಲಸ ಆರಂಭಿಸಿದ ಇವರು, ಮುಂದೆ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಚಿತ್ರದುರ್ಗದ ಖಾಯಂ ವರದಿಗಾರರಾಗಿ (1984 ರಿಂದ 2013) ಸತತವಾಗಿ 29 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ :
ತಮ್ಮ 60ನೇ ವಯಸ್ಸಿನ ನಂತರ ಸಾಹಿತ್ಯಲೋಕಕ್ಕೆ ಪ್ರವೇಶಿಸಿದ ಉಜ್ಜಿನಪ್ಪನವರು ಸಣ್ಣಕಥೆ, ಆತ್ಮಕಥೆ ಸೇರಿದಂತೆ 15 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಪ್ರಮುಖ ಕೃತಿಗಳು : ‘ಗೌನಳ್ಳೇರು’ (ಗ್ರಾಮಭಾರತ ಕಥನ), ‘ಬದುಕೆಂಬ ಮಹಾಪ್ರಬಂಧ’ (ಆತ್ಮಕಥೆ), ‘ಹಿರಿಯೂರು ತಾಲ್ಲೂಕು ಗೆಜೆಟಿಯರ್’ (ಕರ್ನಾಟಕ ಸರ್ಕಾರ 2017), ‘ದಾರಿಗೆ ಜತೆಯಲ್ಲಿ’ (ಕಥಾ ಸಂಕಲನ).ಡಾ. ಮೀರಸಾಬಿಹಳ್ಳಿ ಶಿವಣ್ಣನವರ ‘ಕನ್ನಡ ಎತ್ತಪ್ಪ’ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದರು. ದುರ್ಗಸಿರಿ, ಚಿನ್ಮೂಲಾದ್ರಿ, ಬೆಳಕಿನೆಡೆಗೆ ಮೊದಲಾದ ಸ್ಮರಣ ಸಂಚಿಕೆಗಳಿಗೆ ಲೇಖನಗಳನ್ನು ಬರೆದಿದ್ದರು. ರಂಗಸೌರಭ ಕಲಾ ಸಂಘ ಸೇರಿದಂತೆ ಹಲವು ಸಂಸ್ಥೆಗಳ ಚಟುವಟಿಕೆಗಳಿಗೆ ನಿರಂತರ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದರು.
ಪ್ರಶಸ್ತಿ-ಪುರಸ್ಕಾರಗಳು :
ಇವರ ಸಾಹಿತ್ಯ ಮತ್ತು ಪತ್ರಿಕೋದ್ಯಮ ಸೇವೆಯನ್ನು ಪರಿಗಣಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪತ್ರಕರ್ತರ ಸಮ್ಮೇಳನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶರಣ ಸಾಹಿತ್ಯ ಪರಿಷತ್ತು ಸಮ್ಮೇಳನ ಪ್ರಶಸ್ತಿ ಹಾಗೂ ಡಾ. ಮೀರಸಾಬೀಹಳ್ಳಿ ಶಿವಣ್ಣ ಸಾಹಿತ್ಯಶ್ರೀ ಪ್ರಶಸ್ತಿ ಸೇರಿದಂತೆ ರಾಜ್ಯ ಮಟ್ಟದ ಹಲವು ಗೌರವಾನ್ವಿತ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಉಜ್ಜಿನಪ್ಪ ನಿಧನಕ್ಕೆ ಚಿತ್ರದುರ್ಗದ ಸಾಹಿತ್ಯ ಹಾಗೂ ಪತ್ರಿಕಾ ವಲಯ ತೀವ್ರ ಕಂಬನಿ ಮಿಡಿದಿದೆ.









