ಕೊಡಗು; ರಶ್ಮಿಕಾ ಮಂದಣ್ಣ ಈಗಂತು ಎಲ್ಲಾ ಭಾಷೆಯಲ್ಲೂ ತನ್ನದೇ ಆದ ಡಿಮ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ಕನ್ನಡದಿಂದ ಪರಿಚಯವಾದ ರಶ್ಮಿಕಾ ಆಮೇಲೆ ಟಾಲವುಡ್ ಹೋದವರು ವಾಪಾಸ್ ಕನ್ನಡಕ್ಕೆ ಬರಲೇ ಇಲ್ಲ. ಈಗ ಬಾಲಿವುಡ್ ನಲ್ಲೂ ಇವರಿಗೆ ಡಿಮ್ಯಾಂಡ್. ಆದರೆ ಆಗಾಗ ರಶ್ಮಿಕಾ ಮಂದಣ್ಣ ಬಗ್ಗೆ ನೆಗೆಟಿವ್ ಟ್ರೋಲ್ ಆಗೋದು ಕಾಮನ್. ಇತ್ತೇಚೆಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲೂ ರಶ್ಮಿಕಾ ಮಂದಣ್ಣ ಬಗ್ಗೆ ಹರಿಹಾಯಲಾಗಿದೆ. ಮಂಡ್ಯ ಶಾಸಕ ರವಿ ಗಣಿಗ ಅವರು ನೇರವಾಗಿಯೇ ರಶ್ಮಿಕಾ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಕನ್ನಡದ ಸಿನಿಮಾದಿಂದಾನೇ ಬೆಳೆದು ಈಗ ನೋಡಿದ್ರೆ ಕನ್ನಡದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಲಾಗಿತ್ತು.

ಇದೀಗ ಕಾಂಗ್ರೆಸ್ ಶಾಸಕರ ವಿರುದ್ಧ ಅಮಿತ್ ಶಾಗೆ ದೂರು ನೀಡಲಾಗಿದೆ. ಕಾಂಗ್ರೆಸ್ ಶಾಸಕರ ವಿರುದ್ಧ ಕೊಡವರು ಸಮರ ಸಾರಿದ್ದಾರೆ. ಕೊಡವರು ಕಾಂಗ್ರೆಸ್ ನಾಯಕರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ನಮ್ಮ ಸಮುದಾಯದ ಹೆಣ್ಣು ಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೂ ಪತ್ರ ಬರೆಯಲಾಗಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪತ್ರ ಬರೆದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ನಮ್ಮ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದವರು. ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಮೂಲಕ ಅವರು ಇಂದು ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ನಟಿಯ ಜನಪ್ರಿಯತೆ ಹಾಗೂ ಕಲಾ ಪ್ರತಿಭೆಯನ್ನ ತಿಳಿಯದ ಕೆಲವರು ವಿನಾಕಾರಣ ಟೀಕೆ ಮಾಡುವ ಮೂಲಕ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಇದು ಘೋರ ಮಾತ್ರವಲ್ಲದೆ ಬೆದರಿಕೆಗೆ ಸಮ ಎಂದಿದ್ದಾರೆ.

