ಸುದ್ದಿಒನ್,ಬೆಂಗಳೂರು,ಮೇ.30: ಸಿಲಿಕಾನ್ ಸಿಟಿ ಜನರೇ ಅಲರ್ಟ್ ಆಗಿರಿ! ರಾಜ್ಯಕ್ಕೆ ನೈರುತ್ಯ ಮುಂಗಾರು ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದು, ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನಲ್ಲಿ ವರುಣನ ಅಬ್ಬರ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಕತ್ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.
ಪ್ರಸ್ತುತ ಮುಂಗಾರು ಮಾರುತಗಳು ಮಾಲ್ಡೀವ್ಸ್, ಲಕ್ಷದ್ವೀಪ ಹಾಗೂ ಬಂಗಾಳಕೊಲ್ಲಿಯ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ತೀವ್ರಗತಿಯಲ್ಲಿ ಮುನ್ನಡೆಯುತ್ತಿವೆ. ಇನ್ನುಳಿದಂತೆ ಕೇರಳ ಹಾಗೂ ತಮಿಳುನಾಡಿನ ಹಲವು ಪ್ರದೇಶಗಳಿಗೆ ಮುಂದಿನ 4-5 ದಿನಗಳಲ್ಲಿ ಮಾನ್ಸೂನ್ ಪ್ರವೇಶಿಸಲು ವಾತಾವರಣ ಪೂರ್ಣವಾಗಿ ಪೂರಕವಾಗಿದೆ. ಬಂಗಾಳಕೊಲ್ಲಿಯಿಂದ ಲಕ್ಷದ್ವೀಪದವರೆಗಿನ ಸುಳಿಗಾಳಿಯ ಎಫೆಕ್ಟ್‌ನಿಂದಾಗಿ ಕರ್ನಾಟಕದಲ್ಲಿ ಈಗ ಮಳೆರಾಯ ಸಕ್ರಿಯನಾಗಿದ್ದಾನೆ.

ಈ ಜಿಲ್ಲೆಗಳಲ್ಲಿ ಇರಲಿದೆ ಬಿರುಗಾಳಿ-ಮಳೆ ಅಬ್ಬರ
ಮುಂದಿನ 24 ರಿಂದ 48 ಗಂಟೆಗಳ ಅವಧಿಯಲ್ಲಿ ಈ ಕೆಳಗಿನ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಿರಲಿದೆ
ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿಕ್ಕಮಗಳೂರು, ಕೊಡಗು ಈ ಜಿಲ್ಲೆಗಳಲ್ಲಿ ಸುರಿಯುವ ಜಡಿಮಳೆಯ ಜೊತೆಗೆ ಗಂಟೆಗೆ ಬರೋಬ್ಬರಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.










