Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ ಮಳೆ ಕೊರತೆ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರದಿಂದ ಮಹತ್ವದ ಕ್ರಮ : ಡಿಸಿಎಂ ಡಾ. ಜಿ. ಪರಮೇಶ್ವರ್

ಸಚಿವ ಪರಮೇಶ್ವರ್
---Advertisement---

ಬೆಂಗಳೂರು : ರಾಜ್ಯದಲ್ಲಿ ತೀವ್ರ ಮಳೆ ಕೊರತೆಯ ನಡುವೆಯೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನಮ್ಮ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಮತ್ತು ಪೂರಕ ಕ್ರಮಗಳನ್ನು ಕೈಗೊಂಡಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ, ಖಾಸಗಿ ಕೊಳವೆಬಾವಿಗಳ ಬಳಕೆ, ಹೊಸ ಕೊಳವೆಬಾವಿಗಳ ಕೊರೆತ, ಪೈಪ್‌ಲೈನ್ ವಿಸ್ತರಣೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯದ 111 ತಾಲ್ಲೂಕುಗಳ 531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅಗತ್ಯವಿರುವ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿಯೂ 15 ನಗರ ಸ್ಥಳೀಯ ಸಂಸ್ಥೆಗಳ ಸುಮಾರು 81 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪೂರೈಕೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಜಿಲ್ಲಾಧಿಕಾರಿಗಳಿಗೆ ಒಟ್ಟು ₹117 ಕೋಟಿ ಬಿಡುಗಡೆ ಮಾಡಲಾಗಿದೆ. ಸಣ್ಣ ಜಿಲ್ಲೆಗಳಿಗೆ ತಲಾ ₹3 ಕೋಟಿ ಹಾಗೂ ದೊಡ್ಡ ಜಿಲ್ಲೆಗಳಿಗೆ ತಲಾ ₹5ರಿಂದ ₹6 ಕೋಟಿವರೆಗೆ ಅನುದಾನ ನೀಡಲಾಗಿದೆ ಎಂದರು.

ಪರಿಸ್ಥಿತಿ ಉಲ್ಬಣಿಸಿದ ಬಳಿಕ ರಾಜ್ಯದ ಗ್ರಾಮೀಣ ಕ್ಷೇತ್ರಗಳ ಶಾಸಕರಿಗೆ ಪಕ್ಷಾತೀತವಾಗಿ ತಲಾ ₹1 ಕೋಟಿ ರೂಪಾಯಿಯಂತೆ ಒಟ್ಟು ₹189 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಬಳಸಿ ಹಲವು ಕಡೆ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಹೊಸ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಪೈಪ್ಡ್ ವಾಟರ್ ಸಪ್ಲೈ, ಪೈಪ್‌ಲೈನ್ ವಿಸ್ತರಣೆ ಹಾಗೂ ಹೈಡ್ರೋಫ್ರ್ಯಾಕ್ಚರ್ ಕಾಮಗಾರಿಗಳನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಗತ್ಯವಿರುವ ಕಡೆ SDRF ನಿಧಿಯನ್ನು ಬಳಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ PD ಖಾತೆಗಳಲ್ಲಿ ಲಭ್ಯವಿರುವ ಸುಮಾರು ₹420 ಕೋಟಿ ಹಣವನ್ನೂ ಕುಡಿಯುವ ನೀರಿನ ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವಿನ ಅಗತ್ಯಕ್ಕಾಗಿ ಬಳಸುವಂತೆ ನಿರ್ದೇಶಿಸಲಾಗಿದೆ ಎಂದರು.

ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ವಿಷಯದಲ್ಲಿ ಯಾವುದೇ ಕೊರತೆ ಉಂಟಾಗದಂತೆ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಿ, ಅಗತ್ಯವಿರುವ ಪ್ರತಿಯೊಂದು ಕ್ರಮವನ್ನೂ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

Join WhatsApp

Join Now

Join Telegram

Join Now