ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 18 : ಬ್ರಹ್ಮಾಂಡ ಭ್ರಷ್ಟಾಚಾರವೆಸಗಿರುವ ಚಿತ್ರದುರ್ಗ ಮೆಡಿಕಲ್ ಕಾಲೇಜಿನ ಡೀನ್ ಬಿ.ವೈ.ಯುವರಾಜ್‍ರವರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಬುಧವಾರ ಧರಣಿ ನಡೆಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಭಾರೆ ಡೀನ್ ಆಗಿ ಅಧಿಕಾರ ಸ್ವೀಕರಿಸುವಾಗ ಮೂರು ಕೋಟಿ 84 ಲಕ್ಷದ 90 ಸಾವಿರ ರೂ.ಗಳಿತ್ತು. ಈ ಹಣದಲ್ಲಿ ಆಸ್ಪತ್ರೆಗೆ ಬೇಕಾಗುವ ಉಪಕರಣಗಳನ್ನು ಖರೀಧಿಸುವಲ್ಲಿ ಅವ್ಯವಹಾರವಾಗಿರುವುದನ್ನು ಕೂಲಂಕುಶ ತನಿಖೆ ನಡೆಸಬೇಕು. ಕೆಥೇಟರ್, ಎಕ್ಸರೆ ಫಿಲ್ಮ, ಟೇಬಲ್, ಕುರ್ಚಿ ಇನ್ನಿತರೆ ಸಾಮಾಗ್ರಿಗಳ ಖರೀಧಿಯಲ್ಲಿ ಹಗರಣವಾಗಿದೆ. ವೈದ್ಯಕೀಯ ಕಾಲೇಜು ಹಾಸ್ಟೆಲ್ ಪ್ರಾರಂಭಿಸುವಲ್ಲಿಯೂ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಾರುತಿ ಕ್ಯಾಟರಿಂಗ್‍ಗೆ ಹಾಸ್ಟೆಲ್ ನಡೆಸಲು ಅವಕಾಶ ನೀಡಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕರಿರುವಾಗ ವೈದ್ಯಕೀಯ ಅಧೀಕ್ಷಕರು, ಡೆಪ್ಯೂಟಿ ವೈದ್ಯಕೀಯ ಅಧೀಕ್ಷಕರು ಹಾಗೂ ಆರ್.ಎಂ.ಓ. ಇವರುಗಳನ್ನು ಅನಗತ್ಯವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಕಾಲೇಜು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಹಲವು ಕೋಟಿ ರೂ.ಗಳ ವೈದ್ಯಕೀಯ ಉಪಕರಣಗಳು, ಡ್ರೆಸ್ ಇನ್ನಿತರೆ ಸಾಮಾಗ್ರಿಗಳನ್ನು ಖರೀಧಿಸಲಾಗಿದೆ. ಇ-ಟೆಂಡರ್ ಮೂಲಕ ಖರೀಧಿಸದೆ ಸರ್ಕಾರದ ಕೆ.ಪಿ.ಟಿ.ಟಿ. ನಿಯಮವನ್ನು ಮೀರಲಾಗಿದೆ. ಹಾಗಾಗಿ ಡೀನ್ ಬಿ.ವೈ.ಯುವರಾಜ್‍ರವರನ್ನು ಕೂಡಲೆ ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳುವಂತೆ ಧರಣಿಯ ನೇತೃತ್ವ ವಹಿಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಜಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಏಕಾಂತಪ್ಪ
ಜೈಭೀಮ್ ವಾರಿಯರ್ಸ್ ರಾಜ್ಯಾಧ್ಯಕ್ಷ ಹರೀಶ್, ವೆಂಕಟೇಶ್, ನಾಗೇಂದ್ರಪ್ಪ, ಡಿ.ವೆಂಕಟೇಶ್, ಜಿ.ನಿರಂಜನಮೂರ್ತಿ, ಆರ್.ಲಲಿತಮ್ಮ, ಎಸ್.ಉಮೇಶ್, ಪಾಪಯ್ಯ, ಸೋಮಣ್ಣ ಇನ್ನು ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.











