ಸುದ್ದಿಒನ್,ಮಂಗಳೂರು,ಮೇ.23: ನಟ ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ಪುನೀತ್ ಹೃದಯಜ್ಯೋತಿ’ ಯೋಜನೆಯನ್ನು ಶೀಘ್ರದಲ್ಲೇ ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಒಟ್ಟು 78 ಪುನೀತ್ ಹೃದಯಜ್ಯೋತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ರೋಗಿಗಳ ಪಾಲಿಗೆ ಜೀವ ರಕ್ಷಕವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಮೂರು ಕೇಂದ್ರಗಳಿದ್ದು, ಇವುಗಳ ಮೂಲಕ ಈ ವರ್ಷ ಯಶಸ್ವಿಯಾಗಿ 450 ಜೀವಗಳನ್ನು ಉಳಿಸುವ ಮಹತ್ತರ ಕಾರ್ಯ ನಡೆದಿದೆ.

ಹಠಾತ್ ಹೃದಯಾಘಾತದ ನಂತರದ ನಿರ್ಣಾಯಕ ಅವಧಿಯಲ್ಲಿ (Golden Hour) ತ್ವರಿತ ಚಿಕಿತ್ಸೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಅಡಿಯಲ್ಲಿ ನೀಡಲಾಗುವ ‘ಟೆನೆಕ್ಟೆಪ್ಲೇಸ್’ (Tenecteplase) ಎಂಬ ದುಬಾರಿ ಇಂಜೆಕ್ಷನ್ ಅನ್ನು ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿದೆ. ಇದರೊಂದಿಗೆ ಅಗತ್ಯ ಶಸ್ತ್ರಚಿಕಿತ್ಸೆ ಹಾಗೂ ಇತರ ತುರ್ತು ಚಿಕಿತ್ಸೆಗಳನ್ನೂ ಸಹ ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.










