ಬೆಂಗಳೂರು: ರಾಜ್ಯದ ಜನರಿಗೆ ಮತ್ತೆ ದರ ಏರಿಕೆಯ ಹೊರೆ ಎದುರಾಗಿದೆ. ಇಂದಿನಿಂದ ಕರ್ನಾಟಕದಾದ್ಯಂತ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇಕಡಾ 5ರಿಂದ 8ರಷ್ಟು ಹೆಚ್ಚಿಸಲಾಗಿದೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದೆ.
ರಾಜ್ಯ ಖಾಸಗಿ ವಾಹನ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಖಾಸಗಿ ಬಸ್ ಕ್ಷೇತ್ರವು ಕಳೆದ ಕೆಲವು ವರ್ಷಗಳಿಂದ ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚಗಳಿಂದ ಸಂಕಷ್ಟ ಎದುರಿಸುತ್ತಿದ್ದು, ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಬಸ್ ಉದ್ಯಮದ ಮೇಲಿನ ಆರ್ಥಿಕ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಇಂಧನದ ಬೆಲೆ ಏರಿಕೆ, ಟೈರ್ ಹಾಗೂ ಸ್ಪೇರ್ ಪಾರ್ಟ್ಸ್ ಗಳ ದುಬಾರಿ ವೆಚ್ಚ, ವಾಹನಗಳ ದುರಸ್ತಿ ಮತ್ತು ನಿರ್ವಹಣೆಗೆ ಹೆಚ್ಚುತ್ತಿರುವ ಖರ್ಚು ಪ್ರಮುಖ ಕಾರಣಗಳಾಗಿವೆ. ಇದರ ಜೊತೆಗೆ ಚಾಲಕರು ಮತ್ತು ನಿರ್ವಾಹಕರ ವೇತನ ವೆಚ್ಚವೂ ಹೆಚ್ಚಿರುವುದರಿಂದ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘ ಸ್ಪಷ್ಟಪಡಿಸಿದೆ.
2020ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯ ಪ್ರಕಾರ ದರ ಪರಿಷ್ಕರಣೆಗೆ ಅವಕಾಶವಿದ್ದು, ಅದರ ಆಧಾರದ ಮೇಲೆ ಹೊಸ ಪ್ರಯಾಣ ದರಗಳನ್ನು ಜಾರಿಗೊಳಿಸಲಾಗಿದೆ ಎಂದು ಬಸ್ ಮಾಲೀಕರ ಒಕ್ಕೂಟ ತಿಳಿಸಿದೆ.ಸಾಮಾನ್ಯ ಪ್ರಯಾಣಿಕರಿಗೆ ದರ ಏರಿಕೆಯ ಪರಿಣಾಮ ಎದುರಾದರೂ, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಿಯಾಯಿತಿ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗ ಜಾರಿಯಲ್ಲಿರುವ ವಿದ್ಯಾರ್ಥಿ ಸೌಲಭ್ಯಗಳು ಮುಂದುವರಿಯಲಿದ್ದು, ಹೆಚ್ಚುವರಿ ಹಣ ಪಾವತಿಸುವ ಅಗತ್ಯವಿಲ್ಲ ಎಂದು ಒಕ್ಕೂಟ ತಿಳಿಸಿದೆ.









