Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪತ್ರಿಕಾ ದಿನಾಚರಣೆ ವಿಶೇಷ : ಪತ್ರಿಕೋದ್ಯಮದ ದಿಗ್ಗಜ ಉಜ್ಜಿನಪ್ಪ ಅಗಲಿಕೆಗೆ ಸುದ್ದಿಒನ್ ನಿಂದ ನುಡಿನಮನ

---Advertisement---

ಸುದ್ದಿಓನ್, ಚಿತ್ರದುರ್ಗ, ಜುಲೈ 01 : ಈ ವರ್ಷದ ಪತ್ರಿಕಾ ದಿನಾಚರಣೆಯ ಹೊಸ್ತಿಲಲ್ಲಿ ಚಿತ್ರದುರ್ಗದ ಪತ್ರಿಕಾ ಲೋಕದ ದೀವಟಿಗೆಯೊಂದು ಆರಿಹೋಗಿದೆ. ನಗರದ ಸರಸ್ವತಿಪುರಂ ನಿವಾಸಿ, ಹಿರಿಯ ಸಾಹಿತಿ ಮತ್ತು ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಅವರಿಗೆ 87 ನೇ ವಯಸ್ಸಿನಲ್ಲಿ (ಶನಿವಾರ, ಜೂನ್ 20 ರಂದು) ನಮ್ಮನ್ನು ಅಗಲಿದ್ದಾರೆ. ಅವರ ನಿಧನದೊಂದಿಗೆ ಚಿತ್ರದುರ್ಗದ ಪತ್ರಿಕೋದ್ಯಮದ ಒಂದು ಸುವರ್ಣ ಅಧ್ಯಾಯ ಮುಗಿದಿದೆ.

1939ರ ಅಕ್ಟೋಬರ್ 30ರಂದು ಹಿರಿಯೂರು ತಾಲ್ಲೂಕು ಗೌನಹಳ್ಳಿಯ ಗೊಂಚಿಗಾರ ಸಿದ್ದಯ್ಯ ಮತ್ತು ಲಿಂಗಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ಉಜ್ಜಿನಪ್ಪ, ಮೈಸೂರು ವಿಶ್ವವಿದ್ಯಾಲಯದಿಂದ ಬಿಎ ಪದವಿ, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‌ನಿಂದ ಡಿಎಸ್‌ಎಸ್‌ಎಪಿ ಸ್ನಾತಕೋತ್ತರ ಡಿಪ್ಲೊಮಾ ಪಡೆದರು. ಅಧ್ಯಾಪಕ ವೃತ್ತಿಯಿಂದ ಆರಂಭವಾದ ಅವರ ಬದುಕು, ಗುಲ್ಬರ್ಗಾದ ಎಂಎಸ್‌ಕೆ ಹತ್ತಿಗಿರಣಿಯಲ್ಲಿ ಸಹಾಯಕ ಸಿಬ್ಬಂದಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವಾಗ ನವಕಲ್ಯಾಣ ವಾರಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ ತೆರೆದುಕೊಂಡಿತು.

ಬೃಹನ್ಮಠದ ಗುರುಕುಲ ತ್ರೈಮಾಸಿಕದ ಸಂಪಾದಕರಾಗಿ, ಜಯಲಕ್ಷ್ಮಿ ಹತ್ತಿಗಿರಣಿಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಅವರು, 1974ರಲ್ಲಿ ಲೋಕವಾಣಿಗೆ ಹವ್ಯಾಸ ವರದಿಗಾರರಾದರು. ಆದರೆ, ಅವರ ನಿಜವಾದ ಪತ್ರಿಕಾ ತಪಸ್ಸು ಆರಂಭವಾದದ್ದು 1984ರಲ್ಲಿ. ಟೈಮ್ಸ್ ಆಫ್ ಇಂಡಿಯಾದ ಚಿತ್ರದುರ್ಗದ ಖಾಯಂ ವರದಿಗಾರರಾಗಿ. 2013 ರಿಂದ ಸತತ 29 ವರ್ಷಗಳ ಕಾಲ ಅವರು ಬರೆದ ಸುದ್ದಿಗಳು ಚಿತ್ರದುರ್ಗವನ್ನು ದೇಶದ ಭೂಪಟದಲ್ಲಿ ಗುರುತಿಸಿದವು. ಅವರ ಬರಹ, ವರದಿ ಎಂದಿಗೂ ಅಧಿಕಾರದ ಮುಂದೆ ಬಾಗಲಿಲ್ಲ. ಜನಸಾಮಾನ್ಯರ ನೋವು, ಸರ್ಕಾರದ ನಿರ್ಲಕ್ಷ್ಯ, ಭ್ರಷ್ಟಾಚಾರದ ವಿರುದ್ಧ ಅವರ ವರದಿಗಳು ಖಡ್ಗದಂತೆ ಖಚಿತವಾಯಿತು.

60 ವರ್ಷ ವಯಸ್ಸಿನ ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಅವರು ಗೌನಳ್ಳೇರು, ಬದುಕೆಂಬ ಮಹಾಪ್ರಬಂಧ, ಹಿರಿಯೂರು ತಾಲ್ಲೂಕು ಗೆಜೆಟಿಯರ್’ ಸೇರಿ 15ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದರು. ಡಾ. ಮೀರಸಾಬಿಹಳ್ಳಿ ಶಿವಣ್ಣನವರ ಎತ್ತಪ್ಪ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿ ಭಾಷಾ ಸೇತುವೆಯಾದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶರಣ ಸಾಹಿತ್ಯ ಪರಿಷತ್ತು ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರನ್ನು ಅರಸಿ ಬಂದವು. ಆದರೆ, ಪ್ರಶಸ್ತಿ ದೊಡ್ಡದು ಅವರು ಗಳಿಸಿದ್ದ ಪ್ರೀತಿ. ರಂಗಸೌರಭದಂತಹ ಸಾಂಸ್ಕೃತಿಕ ಸಂಘಟನೆಗಳಿಗೆ ಅವರು ನೀಡಿದ ಪ್ರೋತ್ಸಾಹ ಅವಿಸ್ಮರಣೀಯ.

ಕೇವಲ ಪತ್ರಕರ್ತ, ಸಾಹಿತಿಯಾಗಿ ಉಳಿಯದೆ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಲು. ಬರಡುಭೂಮಿಗೆ ನೀರು ಹರಿಸಲು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟದ ಸಂಸ್ಥಾಪಕ ಸಂಚಾಲಕರಾಗಿ ಉಸಿರು ಇರುವವರೆಗೂ ಹೋರಾಟದ ಹೆಜ್ಜೆ ಹಾಕಿದ್ದು ಸ್ಮರಣೀಯ.

ರೈತಸಂಘ ಸೇರಿ ವಿವಿಧ ಜನಪರ ವಮಚಳವಳಿಯಲ್ಲಿ ಸಕ್ರಿಯವಾಗಿದ್ದರು. ಸಾಹಿತಿ, ಪತ್ರಕರ್ತ, ಹೊರಾಟಗಾರ, ಪ್ರಗತಿಪರ ಕೃಷಿಕರಾಗಿದ್ದ ಉಜ್ಜನಪ್ಪ ಅವರು ತಮ್ಮ ಪೀಳಿಗೆಗೆ ಮಾದರಿಯಾಗಿ ಜೀವಂತವಾಗಿದ್ದಾರೆ.

ಪತ್ರಿಕಾ ದಿನಾಚರಣೆಯ ಈ ಸಂದರ್ಭದಲ್ಲಿ ನಾವು ನೆನೆಯಬೇಕಾದದ್ದು ಅವರ ಬರಹದಲ್ಲಿನ ನಿಷ್ಠೆಯನ್ನು. ಸುದ್ದಿಗಾಗಿ ತಡಕಾಡುತ್ತಿದ್ದ ಹಿರಿಯ ಜೀವ ಇಂದು ಮೌನವಾಗಿದೆ. ಆದರೆ, ಅವರು ಬರೆದ ಅಕ್ಷರಗಳು ಚಿತ್ರದುರ್ಗದ ನೆಲದಲ್ಲಿ ಇನ್ನೂ ಜೀವಂತವಾಗಿವೆ. ಅವರಂತಹ ಹಿರಿಯರ ಹೆಜ್ಜೆ ಗುರುತುಗಳೇ ಇಂದಿನ ಪತ್ರಕರ್ತರಿಗೆ ದಾರಿದೀಪ. ಪತ್ರಿಕೋದ್ಯಮದ ದಿಗ್ಗಜ ಉಜ್ಜಿನಪ್ಪ ಅವರಿಗೆ ಸುದ್ದಿಒನ್ ವತಿಯಿಂದ ನುಡಿ ನಮನ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now