ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್,
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 24 : ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಸಾವಿರಾರು ವರ್ಷಗಳ ಹಿಂದಿನಿಂದಲೂ ಒಂದು ಪ್ರಾಗೈತಿಹಾಸಿಕ ಮತ್ತು ಐತಿಹಾಸಿಕ ಸ್ಥಳವಾಗಿದ್ದು ತಾಲೂಕಿನ ಹತ್ತಾರು ಕಡೆ ಇಂದಿಗೂ ಇತಿಹಾಸವನ್ನು ಸಾರುವ ಐತಿಹಾಸಿಕ ಸ್ಥಳಗಳನ್ನು ಕಾಣಬಹುದು. ಇಲ್ಲಿನ ಪ್ರತಿ ಸ್ಥಳವೂ ತನ್ನದೇ ಆದ ಧಾರ್ಮಿಕ ಸಾಂಸ್ಕೃತಿಕ ಹಾಗೂ ವೈಚಾರಿಕ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿನ ಸ್ಥಳಗಳು ರಾಮಾಯಣ ಕಾಲದ ಘಟನಾವಳಿಗಳಿಗೆ ತಳಕು ಹಾಕಿಕೊಂಡಿದೆ. ಇಂತಹ ಸ್ಥಳಗಳನ್ನು ನಾವು ನೋಡುವುದರ ಜೊತೆಗೆ ಇಲ್ಲಿನ ಸಂಸ್ಕೃತಿ ಪರಂಪರೆಯನ್ನು ನಾವು ಅರಿಯಬಹುದಾಗಿದೆ.
ಕರ್ನಾಟಕದಲ್ಲಿ ಮೌರ್ಯ ಸಾಮ್ರಾಟ ಅಶೋಕನ ಶಿಲಾಶಾಸನಗಳು ಇತಿಹಾಸದ ದೃಷ್ಟಿಯಿಂದ ಅತ್ಯಂತ ಮಹತ್ವವಾದ ಸ್ಥಾನ ಪಡೆದಿವೆ. ಕರ್ನಾಟಕದಲ್ಲಿ ಅಶೋಕನ ಒಟ್ಟು 14 ಶಾಸನಗಳು ದೊರೆತಿವೆ. ಅದರಲ್ಲಿ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಹೋಬಳಿಯಲ್ಲಿ ಮೂರು ಕಿಲೋಮೀಟರ್ ವ್ಯಾಸದ ಒಂದೇ ಸ್ಥಳದಲ್ಲಿ ಮೂರು ಶಿಲಾ ಶಾಸನಗಳು ಕಂಡುಬರುತ್ತವೆ. ಇವು ಇಲ್ಲಿನ ಜಟಂಗಿ ರಾಮೇಶ್ವರದಿಂದ ಹಿಡಿದು ಇಲ್ಲಿಂದ ಸುಮಾರು 3 km ದೂರದ ಬ್ರಹ್ಮಗಿರಿ ಬೆಟ್ಟದ ನಡುವಿನಲ್ಲಿ ಇರುವ ಚಿನ್ನ ಹಗರಿ ಅಥವಾ ಜಿನಗಿಹಳ್ಳ ಹರಿಯುವ ಇಸಿಲಾ ಎಂಬ ಪ್ರಾಚೀನ ಪ್ರದೇಶದ ಒಂದು ಭಾಗದಲ್ಲಿವೆ.
ಈ ಶಾಸನಗಳು ಇರುವ ಈ ಸ್ಥಳವು ಹಿಂದೆ ಪ್ರಮುಖ ಅಶೋಕನ ಸಾಮ್ರಾಜ್ಯದ ರಹದಾರಿಯಾಗಿತ್ತು. ಅಲ್ಲಿ ಸಾಗುವ ಪ್ರತಿಯೊಬ್ಬರೂ ಇಲ್ಲಿನ ಪ್ರದೇಶದಲ್ಲಿ ಹಾಕಿಸಿರುವ ಈ ಮೂರು ಪ್ರಮುಖ ನೀತಿ ಬೋಧನೆಯ ಶಾಸನವನ್ನು ಓದಿ ಅದನ್ನು ಅನುಸರಿಸಬೇಕೆಂದು ಅಶೋಕನು ತನ್ನ ಅಧಿಕಾರಿಗಳಿಗೆ ತಿಳಿಸಿ ಅದನ್ನು ಶಾಸನವನ್ನಾಗಿಸಿದ್ದನು.
ಈ ಶಾಸನಗಳಿಂದ ಕ್ರಿ.ಪೂ. 3ನೇ ಶತಮಾನದಲ್ಲಿ ಮೌರ್ಯ ಸಾಮ್ರಾಜ್ಯದ ಪ್ರಭಾವ ಈ ಭಾಗದವರೆಗೂ ವಿಸ್ತರಿಸಿತ್ತು ಎಂಬುದು ತಿಳಿದುಬರುತ್ತದೆ. ಜೊತೆಗೆ ಮೊಳಕಾಲ್ಮುರು ತಾಲೂಕು ದಕ್ಷಿಣದ ಗಡಿಯಾಗಿತ್ತು ಎಂಬುದು ಅಧಿಕೃತವಾಗಿ ದೃಢೀಕರಿಸಲಾಗುತ್ತದೆ. ಮೊಳಕಾಲ್ಮೂರು ತಾಲೂಕಿನ ಅಶೋಕಸಿದ್ದಾಪುರ, ಬ್ರಹ್ಮಗಿರಿ ಹಾಗೂ ಜಟಂಗಿ ರಾಮೇಶ್ವರದಲ್ಲಿ ಅಶೋಕನ ಶಿಲಾ ಶಾಸನಗಳು ಕಂಡುಬರುತ್ತವೆ. ಇಂತಹ ಶಿಲಾಶಾಸನಗಳ ಮಹತ್ವವನ್ನು ಬ್ರಿಟಿಷರ ಅಧಿಕಾರಿಗಳು ಅರಿತು ಅದನ್ನು ಸಂರಕ್ಷಿಸುವ ಕೆಲಸ ಇನ್ನೂರು ವರ್ಷಗಳ ಹಿಂದೆಯೇ ಮಾಡಿ ಅದರ ಸಂರಕ್ಷಣೆ ಕಾರ್ಯ ಮಾಡಿದ್ದಾರೆ.
ಶಾಸನ :
ತಾಲ್ಲೂಕಿನ ಬ್ರಹ್ಮಗಿರಿ, ಅಶೋಕ ಸಿದ್ದಾಪುರ ಜಟ್ಟಂಗಿ ರಾಮೇಶ್ವರದಲ್ಲಿ ದೊರೆತಿರುವ ಸಾಮ್ರಾಟ್ ಅಶೋಕನ ಸಣ್ಣ ಶಿಲಾ ಶಾಸನವು (Minor Rock Edicts I & II) ಇತಿಹಾಸದಲ್ಲೇ ಅತ್ಯಂತ ಪ್ರಮುಖವಾದುದಾಗಿದೆ. ಈ ಮೂರು ಶಾಸನಗಳ ಪಠ್ಯವೂ ಒಂದೇ ರೀತಿಯಲ್ಲಿದೆ. ಅದರಲ್ಲಿ ಬ್ರಹ್ಮಗಿರಿಯ ಶಾಸನ ಮಾತ್ರ ಉತ್ತಮ ರೀತಿಯಲ್ಲಿ ಇಂದಿಗೂ ಓದಬಹುದಾದ ರೀತಿಯಲ್ಲಿದ್ದು ಸ್ವಲ್ಪ ಹಾಳಾಗದೆ ಮುಕ್ಕಾಗದೆ ಕಾಯ್ದುಕೊಂಡು ಬರಲಾಗಿದೆ. ಈ ಶಾಸನಗಳಲ್ಲಿ ಅಶೋಕನ ಆಡಳಿತ ಕೇಂದ್ರವಾಗಿದ್ದ ‘ಇಸಿಲ’ (Isila) ಎಂಬ ಪದದ ಉಲ್ಲೇಖವಿದ್ದು, ಇದು ಕನ್ನಡದ ಅತ್ಯಂತ ಹಳೆಯ ಲಿಖಿತ ಪದಗಳಲ್ಲಿ ಒಂದೆಂದು ಪರಿಗಣಿತವಾಗಿದೆ.
ಈ ಶಾಸನವು ಪ್ರಾಕೃತ ಭಾಷೆ ಹಾಗೂ ಬ್ರಾಹ್ಮೀ ಲಿಪಿಯಲ್ಲಿದೆ.(ಕೊನೆಯ ಸಾಲು ಮಾತ್ರ ಖರೋಷ್ಠಿ ಲಿಪಿಯಲ್ಲಿದೆ).
ಶಾಸನದ ಮೂಲ ಪಾಠದ ಸಾರಾಂಶ ಹಾಗೂ ಕನ್ನಡ ಅನುವಾದವನ್ನು ಕೆಳಗೆ ನೀಡಲಾಗಿದೆ:
1. ಶಾಸನದ ಮೊದಲ ಭಾಗ (ಸಣ್ಣ ಶಿಲಾ ಶಾಸನ – 1 )
ಇದು ಸುವರ್ಣಗಿರಿಯ ಆರ್ಯಪುತ್ರ (ರಾಜಕುಮಾರ) ಮತ್ತು ಮಹಾಮಾತ್ರರು (ಅಧಿಕಾರಿಗಳು), ಇಸಿಲದ ಮಹಾಮಾತ್ರರಿಗೆ ಕಳುಹಿಸಿದ ಸಂದೇಶದೊಂದಿಗೆ ಆರಂಭವಾಗುತ್ತದೆ .
ಸುವರ್ಣಗಿರಿಯಿಂದ ರಾಜಕುಮಾರ ಮತ್ತು ಮಹಾಮಾತ್ರರು, ಇಸಿಲದ ಮಹಾಮಾತ್ರರ ಆರೋಗ್ಯವನ್ನು ವಿಚಾರಿಸಿ ಈ ರೀತಿ ಆಜ್ಞಾಪಿಸುತ್ತಾರೆ: ದೇವನಾಂಪ್ರಿಯನು (ಅಶೋಕ) ಹೀಗೆ ಹೇಳುತ್ತಾನೆ — ನಾನು ಉಪಾಸಕನಾಗಿ (ಬೌದ್ಧ ಧರ್ಮದ ಅನುಯಾಯಿ) ಎರಡೂವರೆ ವರ್ಷಗಳಿಗಿಂತಲೂ ಹೆಚ್ಚು ಕಾಲ ಕಳೆದರೂ, ಆರಂಭದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ, ಕಳೆದ ಒಂದು ವರ್ಷದಿಂದ ನಾನು ಸಂಘವನ್ನು ಸೇರಿ ಧರ್ಮ ಪ್ರಚಾರಕ್ಕಾಗಿ ತೀವ್ರವಾಗಿ ಶ್ರಮಿಸಿದ್ದೇನೆ. ಈ ಹಿಂದೆ ಜಂಬೂದ್ವೀಪದಲ್ಲಿ ಮನುಷ್ಯರೊಂದಿಗೆ ಬೆರೆಯದಿದ್ದ ದೇವತೆಗಳು ಈಗ ಧರ್ಮದ ಪ್ರಭಾವದಿಂದ ಮನುಷ್ಯರೊಂದಿಗೆ ಒಂದಾಗಿದ್ದಾರೆ. ಈ ಧರ್ಮದ ಫಲವನ್ನು ಕೇವಲ ದೊಡ್ಡ ವ್ಯಕ್ತಿಗಳು ಮಾತ್ರವಲ್ಲ, ಸಾಮಾನ್ಯ ಅಥವಾ ಸಣ್ಣ ವ್ಯಕ್ತಿಯೂ ಸಹ ಶ್ರಮವಹಿಸಿದರೆ ಉನ್ನತ ಸ್ವರ್ಗವನ್ನು ಪಡೆಯಬಹುದು. ಇದೇ ಉದ್ದೇಶಕ್ಕಾಗಿ ಈ ಶಾಸನವನ್ನು ಬರೆಯಿಸಲಾಗಿದೆ.”
2. ಶಾಸನದ ಎರಡನೇ ಭಾಗ (ಸಣ್ಣ ಶಿಲಾ ಶಾಸನ – 2)
ಈ ಭಾಗದಲ್ಲಿ ಅಶೋಕನು ಪ್ರಜೆಗಳು ನಿತ್ಯ ಜೀವನದಲ್ಲಿ ಪಾಲಿಸಬೇಕಾದ ನೈತಿಕ ಮತ್ತು ಧಾರ್ಮಿಕ ನಿಯಮಗಳನ್ನು (ಧಮ್ಮ) ಸರಳವಾಗಿ ವಿವರಿಸಿದ್ದಾನೆ.
ದೇವನಾಂಪ್ರಿಯನು ಹೀಗೆ ಹೇಳುತ್ತಾನೆ:
• ತಂದೆ-ತಾಯಂದಿರಿಗೆ ವಿಧೇಯರಾಗಿರಬೇಕು ಮತ್ತು ಅವರ ಸೇವೆಯನ್ನು ಮಾಡಬೇಕು.
• ಜೀವಿಗಳ (ಸಕಲ ಪ್ರಾಣಿಗಳ )ಎಡೆಗೆ ದಯೆ ಮತ್ತು ಗೌರವವನ್ನು ಹೊಂದಿರಬೇಕು (ಅಹಿಂಸೆಯನ್ನು ಪಾಲಿಸಬೇಕು).
• ಯಾವಾಗಲೂ ಸತ್ಯವನ್ನೇ ನುಡಿಯಬೇಕು.
• ಇವೇ ಧರ್ಮದ ಮುಖ್ಯ ಗುಣಗಳು ಮತ್ತು ಇವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
• ಶಿಷ್ಯನಾದವನು ತನ್ನ ಗುರುವನ್ನು ಗೌರವಿಸಬೇಕು.
• ಒಬ್ಬನು ತನ್ನ ಬಂಧು-ಮಿತ್ರರೊಂದಿಗೆ ಯೋಗ್ಯ ಹಾಗೂ ಮರ್ಯಾದಸ್ಥ ರೀತಿಯಲ್ಲಿ ನಡೆದುಕೊಳ್ಳಬೇಕು.
ಇದು ಅನಾದಿ ಕಾಲದಿಂದಲೂ ನಡೆದುಬಂದ ನೈಸರ್ಗಿಕ ನಿಯಮವಾಗಿದೆ. ಇದು ಮನುಷ್ಯನ ಆಯುಷ್ಯವನ್ನು ವೃದ್ಧಿಸುತ್ತದೆ ಮತ್ತು ಇದರಂತೆಯೇ ಪ್ರತಿಯೊಬ್ಬರೂ ಆಚರಿಸಬೇಕು.
ಈ ಶಾಸನವನ್ನು ‘ಚಪಡ’ ಎಂಬ ಲಿಪಿಕಾರನು (ಬರಹಗಾರನು) ಕೆತ್ತಿದ್ದಾನೆ.”
ಈ ಕೊನೆಯ ಸಾಲನ್ನು ಚಪಡನು ಅಂದಿನ ವಾಯುವ್ಯ ಭಾರತದ ‘ಖರೋಷ್ಠಿ’ ಲಿಪಿಯಲ್ಲಿ ಬರೆದಿದ್ದಾನೆ.
ಅಶೋಕನು ತನ್ನನ್ನು “ದೇವರ ಪ್ರಿಯ” ( ದೇವನಾಂಪ್ರಿಯ ) ಎಂದು ಉಲ್ಲೇಖಿಸುತ್ತಾನೆ.
ಅಶೋಕನ ಶಾಸನವು 1874ರಲ್ಲಿ ಬೆಳಕಿಗೆ ಬಂತು.
ಐತಿಹಾಸಿಕ ಮಹತ್ವ
ಶಾಸನವು ಅಶೋಕನ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಧರ್ಮ, ನೈತಿಕತೆ ಮತ್ತು ಜನಕಲ್ಯಾಣಕ್ಕೆ ನೀಡಲಾಗಿದ್ದ ಮಹತ್ವವನ್ನು ತಿಳಿಸುತ್ತದೆ. ಈ ಶಾಸನದಲ್ಲಿ ರಾಜನ ಸಂದೇಶವನ್ನು ಅಧಿಕಾರಿಗಳ ಮೂಲಕ ಜನರಿಗೆ ತಲುಪಿಸುವ ಆಡಳಿತ ವ್ಯವಸ್ಥೆಯ ಸುಳಿವು ದೊರೆಯುತ್ತದೆ.
ಇಂತಹ ಜಾಗಕ್ಕೆ ಪ್ರತಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗಿ ನಮ್ಮ ಭವ್ಯ ಇತಿಹಾಸವನ್ನು ತಿಳಿಸುವ ಪ್ರಯತ್ನಗಳು ಆಗಬೇಕು.
ಹೋಗುವ ದಾರಿ:
ಚಳ್ಳಕೆರೆ -ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 150A ರ ಸಿದ್ದಾಪುರ ಕ್ರಾಸ್ ಇಂದ ಪೂರ್ವಕ್ಕೆ ಐದು ಕಿಲೋಮೀಟರ್ ಸಾಗಿದರೆ ಅಶೋಕ ಸಿದ್ದಾಪುರ ಸಿಗುತ್ತದೆ. ಆ ಗ್ರಾಮದ ಆಸುಪಾಸಿನಲ್ಲಿಯೇ ಮೂರು ಶಾಸನಗಳು ಗಮನಕ್ಕೆ ಬರುವವು. ಫಲಕಗಳನ್ನು ಇಲಾಖೆ ವತಿಯಿಂದ ಅಳವಡಿಸಲಾಗಿದ್ದು ಕೇಂದ್ರ ಪ್ರಾಚ್ಯ ಮತ್ತು ಪುರಾತತ್ತ್ವ ಇಲಾಖೆ ಇದರ ಸಂರಕ್ಷಣೆ ಮಾಡಿದೆ.
ಈ ಸ್ಥಳಗಳು ಚಳ್ಳಕೆರೆಯಿಂದ 72 ಕಿಲೋಮೀಟರ್ ಹಾಗೂ ಬಳ್ಳಾರಿಯಿಂದ 48 ಕಿಲೋಮೀಟರ್ ದೂರದಲ್ಲಿದೆ.
3 ಕಿಮೀ ವೃತ್ತಾಕಾರದ ಅಕ್ಕ ಪಕ್ಕದ ಸ್ಥಳದಲ್ಲಿಯೇ ಮೂರು ಶಾಸನಗಳು ಇದ್ದು, ಖಾಸಗಿ ವಾಹನದಲ್ಲಿ ಹೋದರೆ ಅತ್ಯುತ್ತಮ. ಎಲ್ಲಾ ದಿನಗಳಲ್ಲೂ ಇಲ್ಲಿಗೆ ಹೋಗುವುದು ಅನುಕೂಲಕರ.

















