Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ತಾಲ್ಲೂಕು ಓಬವ್ವನಾಗತಿಹಳ್ಳಿ ಗ್ರಾಮ ದರ್ಶನ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್, ಚಿತ್ರದುರ್ಗ, ಜೂ.11 : ಓಬವ್ವನಾಗತಿಹಳ್ಳಿ ಗ್ರಾಮವು ಆಲಘಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು,
ಚಿತ್ರದುರ್ಗದಿಂದ 22 ಕಿಲೋಮೀಟರ್ ದೂರ ವಾಯುವ್ಯಕ್ಕೆ, ಚಿತ್ರದುರ್ಗ-ಹಿರೇಬೆನ್ನೂರು ಕ್ರಾಸ್ ನಿಂದ ದಕ್ಷಿಣಕ್ಕೆ 3 ಕಿಲೋಮೀಟರ್ ದೂರದಲ್ಲಿದೆ.

ಈ ಗ್ರಾಮದ ಹಳೆಗ್ರಾಮ ನಿವೇಶನವು ಗ್ರಾಮದಿಂದ ಪಶ್ಚಿಮಕ್ಕೆ ಒಂದು ಕಿಲೋಮೀಟರ್ ದೂರದಲ್ಲಿದ್ದು ಅಲ್ಲಿ ಈಗ ಓಬಳೇಶ್ವರ ಗುಡಿಯನ್ನು ಕಾಣಬಹುದು.
ಇದೇ ಜಾಗದ ಅಕ್ಕಪಕ್ಕದ ಸ್ಥಳಗಳಲ್ಲಿ ಹಳೆಯ ಶಿಲಾಯುಗದ ಶಿಲಾಗೋರಿಗಳ ಅವಶೇಷಗಳನ್ನು ಕಾಣಬಹುದು. ಇವೆಲ್ಲವೂ ಈಗ ಕೃಷಿಯ ಕಾರಣಕ್ಕೆ ಅವಸಾನವಾಗಿದೆ. ಹಳೆ ಗ್ರಾಮ ನಿವೇಶನದ ಹೆಸರು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಇಂದು ಈ ಸ್ಥಳವು ಬೇಚರಾಕ್ ಆಗಿದ್ದು,ಜನವಸತಿ ರಹಿತ ಸ್ಥಳವಾಗಿದೆ.
ಹಿಂದೆ ಚಿತ್ರದುರ್ಗವನ್ನು ಆಳುತ್ತಿದ್ದ ಬಿಚ್ಚುಗತ್ತಿ ಬರಮಣ್ಣನಾಯಕನ ಕಾಲದಲ್ಲಿ ಈ ಗ್ರಾಮವು ಪಟ್ಟಡಿ ಗ್ರಾಮವಾಗಿದ್ದು, ಹತ್ತಾರು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿತ್ತು.

ಹಳೆ ಗ್ರಾಮ ನಿವೇಶನದ ಜಾಗದಲ್ಲಿ ಅಜ್ಜ- ಅಜ್ಜಿ ಕಲ್ಲು ಎಂದು ಹೇಳಲಾಗುವ ವೀರಗಲ್ಲುಗಳನ್ನು ಕಾಣಬಹುದು. ಇವು ವಿಜಯನಗರ ಕಾಲಕ್ಕೆ ಸೇರಿದ್ದು, ಇದರಲ್ಲಿ ಯೋಧನು ಯುದ್ಧದಲ್ಲಿ ಹುತಾತ್ಮನಾಗಿದ್ದು, ಬಂದೂಕು ಹಿಡಿದಿದ್ದಾನೆ. ಹಾಗೂ ಆತನ ಪತ್ನಿ ಸತಿಯಾಗಿರುವುದನ್ನು ಚಿತ್ರಿಸಲಾಗಿದೆ.

ಹೆಸರಿನ ಮೂಲ :
ಓಬವ್ವನಾಗತಿಹಳ್ಳಿ ಹೆಸರಿನ ಗ್ರಾಮ ಕರ್ನಾಟಕದ ಯಾವ ಕಡೆಯಲ್ಲೂ ಕಂಡು ಬರುವುದಿಲ್ಲ.ಈ ಹೆಸರಿನ ಗ್ರಾಮ ಕರ್ನಾಟಕದಲ್ಲಿ ಇದೊಂದೇ ಆಗಿದೆ. ಒಂದು ಮೂಲದಂತೆ ಹಳೆ ಗ್ರಾಮ ನಿವೇಶನದಲ್ಲಿರುವ ಓಬಳೇಶ್ವರ ದೇವರಿಂದ ಈ ಊರಿಗೆ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಮತ್ತೊಂದು ಮೂಲದ ಪ್ರಕಾರ ಚಿತ್ರದುರ್ಗವನ್ನು ಆಳಿದ್ದ ಕಸ್ತೂರಿರಂಗಪ್ಪ ನಾಯಕರ 1748-1754 ಕಾಲದಲ್ಲಿ ಆತನ ನಾಗತಿಯಾದ (ರಾಣಿ) ಓಬವ್ವನ ಹೆಸರಿನಲ್ಲಿ ಈ ಗ್ರಾಮವು ನಿರ್ಮಾಣಗೊಂಡಿರುವ
ಪ್ರತೀತಿಯಿದೆ.

ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ, ಒಣ ಭೂ ಪ್ರದೇಶ ಹೊಂದಿದೆ.

ಆಲಘಟ್ಟ, ಸಿರಿಗೆರೆ ,ಚೀಳಂಗಿ, ಹತ್ತಿರದ ಗ್ರಾಮಗಳಾಗಿವೆ.

ವೀರಗಲ್ಲು :
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ಈಶ್ವರ ದೇವಾಲಯದ ಎದುರು ಭಾಗದಲ್ಲಿ ಭಗ್ನವಾದ ವೀರಗಲ್ಲು ಹಾಗೂ ಮೇರೆ ಕಲ್ಲನ್ನು ಕಾಣಬಹುದು. ಈ ವೀರಗಲ್ಲಿನಲ್ಲಿ ಯೋಧನು ಕುದುರೆ ಸವಾರನಾಗಿರುವುದನ್ನು ಕಾಣಬಹುದು. ಗ್ರಾಮವು ಹಿಂದೆ ಐತಿಹಾಸಿಕವಾಗಿ ಯೋಧರ ಭೂಮಿಯಾಗಿತ್ತು ಎಂದು ನಿರೂಪಿಸುತ್ತದೆ. ಇವು ವಿಜಯನಗರದ ಕಾಲದ ವೀರಗಲ್ಲುಗಳಾಗಿದ್ದು, ಜೊತೆಗೆ 500 ಕ್ಕೂ ಅಧಿಕ ವರ್ಷದ ಇತಿಹಾಸವನ್ನು ಗ್ರಾಮಕ್ಕೆ ನೀಡುತ್ತದೆ. ಈ ವೀರಗಲ್ಲುಗಳಿಗೆ
ಸಂರಕ್ಷಣೆಯ ಅಗತ್ಯತೆ ಇರುತ್ತದೆ.

ಗ್ರಾಮದಲ್ಲಿರುವ ದೇವಾಲಯಗಳು :

1.ಆಂಜನೇಯ ಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಆಂಜನೇಯಸ್ವಾಮಿ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯವಿದು.
ಈ ದೇವರ ಉತ್ಸವ, ರಥೋತ್ಸವವನ್ನು ಯುಗಾದಿಯ ನಂತರ ದಿನಗಳಲ್ಲಿ ನಡೆಸಲಾಗುತ್ತದೆ.
ಹಿಂದೆ ಇದ್ದ ಇಲ್ಲಿನ ಮಂದಿರವು ಶಿಥಿಲವಾದ ಕಾರಣ ಅದನ್ನು ತೆಗೆದು ನೂತನ ದೇವಾಲಯ ನಿರ್ಮಾಣ ಮಾಡಲಾಗಿದೆ.

2.ದುರ್ಗಾಂಬಿಕಾ ದೇವಿ (ಊರ ಮುಂದ್ಲಮ್ಮ) ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ದುರ್ಗಾಂಬಿಕಾ ದೇವಿ ದೇವಾಲಯವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಹಳೆ ದೇವಾಲಯದ ಎದುರು ಭಾಗದಲ್ಲಿ ಗ್ರಾಮದ ಮುಖ್ಯ ವೃತ್ತದಲ್ಲಿ ಮತ್ತೊಂದು ದೇವಾಲಯವನ್ನು ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಇಲ್ಲಿ ಪ್ರತಿವರ್ಷ ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ದೇವರನ್ನು ಹತ್ತಿರದ ಗಾದ್ರಿಗುಡ್ಡ ಹಾಗೂ ಮಿಂಚೇರಿ ಗುಡ್ಡಗಳಿಗೆ ತೆಗೆದುಕೊಂಡು ಹೋಗಲಾಗುತ್ತದೆ.

3.ಈಶ್ವರ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿ ಉತ್ತರಾಭಿಮುಖವಾಗಿ, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾದ ಈಶ್ವರ ದೇವಾಲಯವು ಸಭಾಮಂಟಪ ಹಾಗೂ ಗರ್ಭಗೃಹಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಈಶ್ವರಲಿಂಗವನ್ನು ಪ್ರತಿಷ್ಠಾಪಿಸಲಾಗಿದ್ದು, ಪೂಜಿಸಲಾಗುತ್ತದೆ. ದೇವಾಲಯದ ಹೊರಭಾಗದಲ್ಲಿ ಕರಿಗಲ್ಲು ಎಂದು ಕರೆಯಲಾಗುವ ಮೇರೆಕಲ್ಲು ಇದ್ದು ಮಳೆ ಬಾರದಿದ್ದಾಗ 101 ಬಿಂದಿಗೆ ನೀರಿನ ಅಭಿಷೇಕ ಮಾಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಉತ್ಸವದ ಸಮಯದಲ್ಲಿ ವಿಶೇಷವಾಗಿ ಕೆಂಡೋತ್ಸವ ಆಚರಣೆ ನಡೆಸಲಾಗುತ್ತದೆ.

4.ಮಾರಮ್ಮ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಮಾರಮ್ಮ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

5.ಮರುಳಸಿದ್ದೇಶ್ವರ ದೇವಸ್ಥಾನ:
ಗ್ರಾಮದ ದಕ್ಷಿಣ ಭಾಗದಲ್ಲಿ ಇರುವ ಮರಳು ಸಿದ್ದೇಶ್ವರ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಉತ್ತರಾಭಿಮುಖವಾಗಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಮರುಳಸಿದ್ದೇಶ್ವರರ ಶಿಲ್ಪವಿದ್ದು
ಪೂಜಿಸಲಾಗುತ್ತದೆ. ದೇವಾಲಯದ ಹೊರಭಾಗದಲ್ಲಿ ಜಟ್ಟಪ್ಪ ಹಾಗೂ ಗೌರಮ್ಮ ದೇವಾಲಯಗಳಿವೆ.

6.ಓಬಳೇಶ್ವರ ಸ್ವಾಮಿ ದೇವಸ್ಥಾನ :
ಹಳೆ ಗ್ರಾಮ ನಿವೇಶನದ ಜಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾದ ಓಬಳೇಶ್ವರ ಸ್ವಾಮಿ ದೇವಾಲಯವು ಪೂರ್ವಾಭಿಮುಖವಾಗಿದೆ.
ಪ್ರತಿವರ್ಷ ವಾರ್ಷಿಕ ಪರೇವು ಆಚರಣೆಯನ್ನು ಶ್ರಾವಣ ಮಾಸದಲ್ಲಿ ಈ ದೇವಾಲಯದ ಬಳಿಯಲ್ಲಿ ನಡೆಸಲಾಗುತ್ತದೆ.

7.ಮರಿಯಮ್ಮದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಮರಿಯಮ್ಮ ದೇವಿ ದೇವಸ್ಥಾನವು ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.ಇದರ ಎದುರು ಭಾಗದಲ್ಲಿ ಗಲ್ಲೇಕಟ್ಟೆ ಮಂದಿರವಿದೆ.

ಇದರ ಜೊತೆಯಲ್ಲಿ ಗ್ರಾಮದ ಮಧ್ಯಭಾಗದಲ್ಲಿ ಕೊಲ್ಲಾಪುರದಮ್ಮದೇವಿ ಹಾಗೂ ಲಕ್ಷ್ಮೀದೇವಿಯ ಪಾದಗಟ್ಟೆ ದೇವಾಲಯವಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now