Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ಕಾರಿ ಉದ್ಯೋಗಿಗಳಿಗೂ ಗೌಪ್ಯತೆಯ ಹಕ್ಕಿದೆ, ವೈಯಕ್ತಿಕ ಮಾಹಿತಿಯನ್ನು RTI ಅಡಿ ಬಹಿರಂಗಪಡಿಸಲು ಸಾಧ್ಯವಿಲ್ಲ : ಹೈಕೋರ್ಟ್ ಆದೇಶ

---Advertisement---

ಬೆಂಗಳೂರು : ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಸರ್ಕಾರಿ ನೌಕರರ ಎಲ್ಲ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅದನ್ನು ಕಡ್ಡಾಯವಾಗಿ ನೀಡಬೇಕೆಂಬ ನಿಯಮ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸರ್ಕಾರಿ ಸೇವೆಯಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಅವರ ಖಾಸಗಿ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಖಾಸಗಿ ವ್ಯಕ್ತಿಗಳ ನಡುವಿನ ಸಿವಿಲ್ ಪ್ರಕರಣಗಳಲ್ಲಿ ಸಾಕ್ಷ್ಯ ಸಂಗ್ರಹಿಸಲು RTI ಕಾಯ್ದೆಯನ್ನು ಸಾಧನವಾಗಿ ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸದ ಮಾಹಿತಿಯನ್ನು ಈ ಕಾಯ್ದೆಯಡಿ ಪಡೆಯಲು ಸಾಧ್ಯವಿಲ್ಲ ಎಂಬುದನ್ನೂ ನ್ಯಾಯಪೀಠ ಒತ್ತಿ ಹೇಳಿದೆ.

ಏನಿದು ಪ್ರಕರಣ?

ಬನಶಂಕರಿಯ ನಿವಾಸಿ ಸವಿತಮ್ಮ ಅವರು, ಕೆಎಸ್‌ಆರ್‌ಟಿಸಿಯ ನಿವೃತ್ತ ಅಧಿಕಾರಿಯಾಗಿದ್ದ ಎಸ್.ಪಿ. ಜಯಪಾಲ್ ಅವರ ಆಸ್ತಿ ವಿವರಗಳನ್ನು ಪಡೆಯಲು RTI ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. 1997ರಿಂದ 2005ರವರೆಗೆ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ಆಸ್ತಿ ಘೋಷಣೆಯ ದಾಖಲೆಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು.

ಸವಿತಮ್ಮ ಅವರ ಆರೋಪದ ಪ್ರಕಾರ, ಜಯಪಾಲ್ ಅವರೊಂದಿಗೆ ಆಸ್ತಿ ಖರೀದಿ ಸಂಬಂಧಿತ ವಿವಾದ ಉಂಟಾಗಿದ್ದು, ಈ ಬಗ್ಗೆ ಈಗಾಗಲೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ. ಇದೇ ಹಿನ್ನೆಲೆ ಆಸ್ತಿ ವಿವರಗಳನ್ನು RTI ಮೂಲಕ ಪಡೆಯಲು ಅವರು ಮುಂದಾಗಿದ್ದರು.ಈ ಮಾಹಿತಿಯು ವೈಯಕ್ತಿಕ ಸ್ವರೂಪದ್ದಾಗಿದ್ದು, RTI ಕಾಯ್ದೆಯ ಕೆಲವು ವಿನಾಯಿತಿಗಳ ವ್ಯಾಪ್ತಿಗೆ ಬರುತ್ತದೆ ಎಂದು ಕೆಎಸ್‌ಆರ್‌ಟಿಸಿ ಹಾಗೂ ರಾಜ್ಯ ಮಾಹಿತಿ ಆಯೋಗ ಮಾಹಿತಿ ನೀಡಲು ನಿರಾಕರಿಸಿತ್ತು. ಬಳಿಕ ಸವಿತಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಮಾಹಿತಿ ಆಯೋಗ ಮತ್ತು ಕೆಎಸ್‌ಆರ್‌ಟಿಸಿ ನೀಡಿದ್ದ ಆದೇಶಗಳನ್ನು ಎತ್ತಿ ಹಿಡಿದು ಅರ್ಜಿಯನ್ನು ವಜಾಗೊಳಿಸಿದೆ. ಅಧಿಕಾರಿಗಳ ವೈಯಕ್ತಿಕ ಮಾಹಿತಿಯನ್ನು RTI ಅಡಿಯಲ್ಲಿ ಬಹಿರಂಗಪಡಿಸಬೇಕಾದರೆ, ಅದರಲ್ಲಿ ವ್ಯಕ್ತಿಗತ ಹಿತಾಸಕ್ತಿಗಿಂತ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು ಎಂದು ನ್ಯಾಯಾಲಯ ತಿಳಿಸಿದೆ.

Join WhatsApp

Join Now

Join Telegram

Join Now