Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರು ನಮ್ಮ ಹೆಮ್ಮೆ : ಮೊಳಕಾಲ್ಮೂರಿನ ನುಂಕೆಮಲೆ ಭೈರಸಿದ್ದೇಶ್ವರ ದೇವಾಲಯದ ಪರಿಚಯ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ಸುದ್ದಿಒನ್

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನುಂಕೆಮಲೆ ಶ್ರೀ ಭೈರಸಿದ್ದೇಶ್ವರ ದೇವಾಲಯವು ಈ ಭಾಗದ ಪ್ರಸಿದ್ಧ ದೇವಾಲಯವಾಗಿದೆ. ಮೊಳಕಾಲ್ಮೂರು ಪಟ್ಟಣದ ಉತ್ತರಕ್ಕೆ ಇರುವ ಗುಡ್ಡದ ಕೆಳಗೆ ಸಂಪೂರ್ಣ ಸಂರಕ್ಷಿತ ಅರಣ್ಯದ ಮಧ್ಯಭಾಗದಲ್ಲಿ ಈ ದೇವಾಲಯದಲ್ಲಿದೆ. ಇಲ್ಲಿಗೆ ತಲುಪಲು ಚಳ್ಳಕೆರೆ- ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯಿಂದ ನೇರ ರಸ್ತೆ ಸಂಪರ್ಕವಿದೆ.

ದಕ್ಷಿಣಾಭಿಮುಖವಾಗಿ ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿರುವ ಈ ದೇವಾಲಯವು ವಿಜಯನಗರ ಶೈಲಿಯಲ್ಲಿ 14 -15 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವರಿಗೆ ಅಪಾರ ಭಕ್ತರು ನಡೆದುಕೊಳ್ಳುತ್ತಾರೆ ಹಾಗೂ ಮನೆಯ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಈ ದೇವರ ಭಕ್ತರು ತಮ್ಮ ಮನೆಗಳಲ್ಲಿ ಭೈರಮ್ಮ, ಭೈರಪ್ಪ ಸಿದ್ದಪ್ಪ,ಸಿದ್ದಮ್ಮ ಎಂಬ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಡುವ ಪದ್ಧತಿ ಇದೆ. ಈ ದೇವಾಲಯವನ್ನು ಕ್ರಿಸ್ತಶಕ 988 ರಲ್ಲಿ ಅಜವರ್ಮರಸನ ಪತ್ನಿಯಾದ ಮಾಳಿಯೆಬ್ಬರಸಿಯು ಪ್ರತಿಷ್ಠಾಪಿಸಿ ದಾನ ದತ್ತಿಗಳನ್ನು ನೀಡಿದ್ದಳೆಂದು ಶಾಸನವು ಸ್ಪಷ್ಟಪಡಿಸುತ್ತದೆ. 10ನೇ ಶತಮಾನಕ್ಕೆ ನಿರ್ಮಾಣವಾಗಿ ನಂತರ ಕಾಲದಲ್ಲಿ ಮತ್ತಷ್ಟು ಜೀರ್ಣೋದ್ಧಾರವಾಗಿರುವುದು ಸ್ಪಷ್ಟವಾಗುತ್ತದೆ.

 

ಈ ದೇವಾಲಯವು ಗರ್ಭಗೃಹ, ಅಂತರಾಳ,ನವರಂಗ ಮಹಾದ್ವಾರ,ಪಾದಗಟ್ಟೆ ಹಾಗೂ 20 ಅಡಿ ಎತ್ತರದ ಎರಡು ದೀಪ ಸ್ತಂಭಗಳಿಂದ ಕೂಡಿರುವ ಮಹತ್ವದ ದೇವಾಲಯವಾಗಿದೆ. ದೇವಾಲಯದ ಅಗರ್ಭ ಗೃಹದಲ್ಲಿ ಅರ್ಧ ಅಡಿ ಎತ್ತರ ಹಾಗೂ 4 ಅಡಿಗಳಷ್ಟು ಉದ್ದದ ವಿಶಾಲವಾದ ಪೀಠದ ಮೇಲೆ ಸುಮಾರು ಐದು ಅಡಿ ಎತ್ತರದ ಸಿದ್ದೇಶ್ವರ ಅಥವಾ ಭೈರವನ ಶಿಲ್ಪವನ್ನು ಪ್ರತಿಷ್ಠಾಪಿಸಿರುವರು. ಭೈರವನು ತನ್ನ 4 ಕೈಗಳಲ್ಲಿ ಡಮರುಗ,ತ್ರಿಶೂಲ,ಖಡ್ಗ ಮತ್ತು ಪಾನಬಟ್ಟಲನ್ನು ಹಿಡಿದಿದ್ದಾನೆ. ಕಪಾಲ ಮಾಲೆಯನ್ನು ಧರಿಸಿದ್ದು ವಿವಿಧ ಆಭರಣಗಳಿಂದ ಅಲಂಕೃತನಾಗಿದ್ದಾನೆ. ನವರಂಗದಲ್ಲಿ 4 ಕಂಬಗಳಿವೆ. ನವರಂಗದಲ್ಲಿ ನುಂಕವ್ವ ಮತ್ತು ಮಲಿಯಮ್ಮ ಎಂದು ಕರೆಯುವ ಶಿಲ್ಪಗಳಿವೆ.
ಸಿದ್ದೇಶ್ವರ ಸ್ವಾಮಿಯ ಜಾತ್ರೆಯು ಈ ಭಾಗದ ಪ್ರಸಿದ್ಧ ಜಾತ್ರೆಯಾಗಿದೆ. ಪ್ರತಿ ವರ್ಷ ವೈಶಾಖ ಶುದ್ದ ಏಕಾದಶಿಯಂದು ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗುತ್ತದೆ.
ದ್ವಾದಶಿಯಂದು ಸಿಡಿ ಉತ್ಸವ ನಡೆಯುತ್ತದೆ. ಶುಭರಾತ್ರಿಯಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯುತ್ತದೆ. ದೇವಾಲಯದ ಹತ್ತಿರ ನುಂಕಪ್ಪನ ಹೊಂಡ ಎಂದು ಕರೆಯಲಾಗುವ ಕೊಳವಿದೆ.
ದೇವಾಲಯದ ಹತ್ತಿರದಲ್ಲಿ ಭೈರಸಿದ್ದೇಶ್ವರ ಲೋಕಿ ಮಠ ಹಾಗೂ ಬಳಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಗಳು ಇವೆ. ಸಂಪೂರ್ಣ ಕಾಡಿನ ನಡುವೆ ಇರುವ ಈ ಸ್ಥಳವು ಅತ್ಯಂತ ಸುಂದರವಾಗಿದ್ದು ಸಾವಿರಾರು ಸೀತಾಫಲ ಮರಗಳಿವೆ. ಮಳೆಯ ನಂತರ ಇಲ್ಲಿನ ವಾತಾವರಣ ಹಚ್ಚ ಹಸುರಿನಿಂದ ಕಂಗೊಳಿಸುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...