ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್
ಹುಣಸೆಕಟ್ಟೆ ಗ್ರಾಮವು ಕೂನಬೇವು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 18 ಕಿಲೋಮೀಟರ್ ದೂರ ವಾಯುವ್ಯಕ್ಕೆ, ಚಿತ್ರದುರ್ಗ- ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಮಾಡನಾಯಕನಹಳ್ಳಿಯಿಂದ ಪೂರ್ವಕ್ಕೆ 4 ಕಿಲೋಮೀಟರ್ ದೂರದಲ್ಲಿದೆ.
ಈ ಗ್ರಾಮಕ್ಕೆ ಹಳೆಗ್ರಾಮ ನಿವೇಶನವು ಗ್ರಾಮದಿಂದ ಪೂರ್ವಕ್ಕೆ ಅರ್ಧ ಕಿಲೋಮೀಟರ್ ದೂರದಲ್ಲಿ ಕೋಟೆ ಎನ್ನಲಾಗುವ ಜಾಗದಲ್ಲಿ ಇದ್ದಿತು. ನಂತರ ಗ್ರಾಮವು ಮತ್ತೊಂದು ಕಡೆಗೆ ಸ್ಥಳಾಂತರಗೊಂಡು ಈಗಿನ ಜಾಗಕ್ಕೆ ಶಾಶ್ವತವಾಗಿ ನೆಲೆ ನಿಲ್ಲಲಾಯಿತು. ಈ ಗ್ರಾಮಕ್ಕೆ ಹಿಂದೆ ಹುಗಿ ಹೊಯ್ದ ಸ್ಥಳವು ಇದ್ದಿತು ಎನ್ನಲಾಗುತ್ತದೆ.
ಹಳೇಗ್ರಾಮ ಬೇಚರಾಕ್ ಗ್ರಾಮವಾಗಿದ್ದು,ಜನವಸತಿ ರಹಿತವಾಗಿದೆ. ಈಗಿನ ಗ್ರಾಮವು ಸುಮಾರು 200-250 ವರ್ಷಗಳಷ್ಟು ಹಳೆಯದಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಹೆಸರಿನ ಮೂಲ :
ಗ್ರಾಮದಲ್ಲಿ ಹಿಂದಿನಿಂದಲೂ ಹುಣಸೆ ಮರಗಳು ಯಥೇಚ್ಛವಾಗಿದ್ದು, ಹುಣಸೆ ಹಣ್ಣು ಉತ್ಪನ್ನ ಸಮೃದ್ಧವಾಗಿದ್ದ ಕಾರಣಕ್ಕೆ ಈ ಹೆಸರು ಬಂದಿದೆ.
ಆದರೆ ಇಂದು ಗ್ರಾಮದ ಆಸುಪಾಸಿನಲ್ಲಿ ಅಥವಾ ಗ್ರಾಮದಲ್ಲಿ ಎಲ್ಲಿಯೂ ಹುಣಸೇ ಮರಗಳು ಕಂಡುಬರುವುದಿಲ್ಲ.
ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ ಹೊಂದಿದ್ದು ಸಮತಟ್ಟು ಭೂ ಪ್ರದೇಶವೇ ಹೆಚ್ಚಾಗಿದೆ. ಗ್ರಾಮದ ಪಶ್ಚಿಮಕ್ಕೆ ಹಬ್ಬಿರುವ ಗುಡ್ಡದರಂಗವ್ವನಹಳ್ಳಿ ಗುಡ್ಡ ಸಾಲಿನ ಪೂರ್ವದ ಇಳಿಜಾರಿನ ಪ್ರದೇಶದಲ್ಲಿ ಗ್ರಾಮವು ಹರಡಿದೆ. ಹತ್ತಿರದ ಗುಡ್ಡಗಳಲ್ಲಿ ಬಯಲು ಸೀಮೆಯ ಉಷ್ಣವಲಯದ ಸಣ್ಣ ಕುರುಚಲು ಕಾಡು ವ್ಯಾಪಿಸಿದೆ. ನೀರಿನ ಲಭ್ಯತೆಗೆ ಇದು ಪೂರಕವಾಗಿದೆ, ಹಾಗಾಗಿ ಸಮೃದ್ಧ ಮಳೆಗಾಲದಲ್ಲಿ ಗ್ರಾಮದ ಸುತ್ತಲೂ ಹಳ್ಳಗಳಲ್ಲಿ ಮಳೆಯ ಕಾರಣಕ್ಕೆ ನೀರಿನ ಲಭ್ಯತೆ ಇರುತ್ತದೆ.
ಗ್ರಾಮದ ದಕ್ಷಿಣಕ್ಕೆ ಇರುವ ಅಜ್ಜಅಜ್ಜಿ ಗುಡ್ಡ, ಕರಿಮಟ್ಟಿ ಹುಲಿಗುಡ್ಡ, ನರಸಿಂಹನ ಕಲ್ಲು, ಅಡ್ಡಮಟ್ಟಿ ಗುಡ್ಡದಿಂದ ಹರಿಯುವ ಹಳ್ಳ ಹತ್ತಿರದ ಗುಡ್ಡದ ಹಳ್ಳವಾಗಿ ಹರಿದು ಮುಂದೆ ನಾಯಕನಹಟ್ಟಿ ಕೆರೆಗೆ ತಲುಪುತ್ತದೆ. ಪಶ್ಚಿಮಕ್ಕೆ ಮಾಡನಾಯಕನಹಳ್ಳಿ ಗುಡ್ಡವಿದೆ. ಮಳೆಯಾಶ್ರಿತ ಬೆಳೆಗಳ ಜೊತೆಗೆ ಇತರ ವಾಣಿಜ್ಯ ಹಾಗೂ ವಾರ್ಷಿಕ ಬೆಳೆಗಳತ್ತಲೂ ರೈತರು ಒಲವು ತೋರಿಸುತ್ತಿದ್ದಾರೆ. ಪುಷ್ಪ ಕೃಷಿಯೇ ಗ್ರಾಮದ ಪ್ರಮುಖ ಬೆಳೆಯಾಗಿದೆ.
ಗ್ರಾಮದ ಪುಷ್ಪ ಕೃಷಿ :
ಗ್ರಾಮವು ಸಂಪೂರ್ಣ ಒಣ ಭೂಪ್ರದೇಶವು ಹೊಂದಿದ್ದು ನೀರಿನ ಲಭ್ಯತೆ ಬಹಳಷ್ಟು ಕಡಿಮೆ ಇದೆ. ಆ ಕಾರಣಕ್ಕೆ ಈ ಊರಿನ ಜಮೀನಿನಲ್ಲಿ ಹಿಂದಿನಿಂದಲೂ ಅಲ್ಪಾವಧಿ ಹಾಗೂ ಮಳೆಯಾಶ್ರಿತ ಬೆಳೆಗಳಿಗೆ ಆದ್ಯತೆ ನೀಡಲಾಗಿತ್ತು.
90 ರ ದಶಕದಲ್ಲಿ ಇಲ್ಲಿ ಪುಷ್ಪಕೃಷಿ ಶುರುವಾಯಿತು. ಅದರಲ್ಲೂ ಸೇವಂತಿ ಹೂವು ಉತ್ಕೃಷ್ಟ ಗುಣಮಟ್ಟ ಹಾಗೂ ಉತ್ತಮ ಆಕಾರ ಹೊಂದಿದ್ದು ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಬಹಳಷ್ಟು ಇದೆ. ಮುಖ್ಯವಾಗಿ ಈ ಹೂವು ಅಲಂಕಾರಕ್ಕೆ ಬಳಸಲಾಗುತ್ತದೆ. ಹುಣಿಸೆಕಟ್ಟೆ ಸೇವಂತಿಗೆ ಹೂವು ಹೆಸರುವಾಸಿಯಾಗಿದ್ದು, ಇಲ್ಲಿಂದ ಹೂವನ್ನು ಉತ್ತರಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವಾರು ಪ್ರಮುಖ ಮಂದಿರಗಳಿಗೆ ಕಳಿಸಲಾಗುತ್ತದೆ.
ಗ್ರಾಮದ ಜನರಿಗೆ, ಕೃಷಿಕಾರ್ಮಿಕರಿಗೆ ಆರ್ಥಿಕವಾಗಿ ಪುಷ್ಪಕೃಷಿಯು ಅನುಕೂಲವಾಗಿದೆ.
ವರ್ಷದ ಎಲ್ಲಾ ದಿನಗಳಲ್ಲಿ ಈ ಪುಷ್ಪ ಕೃಷಿಯ ವಹಿವಾಟು ನಡೆಯುತ್ತದೆ.
ಕಲ್ಲೇನಹಳ್ಳಿ, ಮಾಡನಾಯಕನಹಳ್ಳಿ,
ಕೂನಬೇವು … ಹತ್ತಿರದ ಗ್ರಾಮಗಳಾಗಿವೆ.
ಗ್ರಾಮದಲ್ಲಿರುವ ದೇವಾಲಯಗಳು :
1.ಆಂಜನೇಯ ಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಆಂಜನೇಯಸ್ವಾಮಿ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯ ಇದಾಗಿದೆ.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ.
2. ಚೌಡೇಶ್ವರಿ ದೇವಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಚೌಡೇಶ್ವರಿ ದೇವಿ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಗರ್ಭಗೃಹ ಹಾಗೂ ಸಭಾಮಂಟಪ ಇರುವ ದೇವಸ್ಥಾನ ಇದಾಗಿದ್ದು, ಗರ್ಭಗೃಹದಲ್ಲಿ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ದೇವಿಗೆ ವಾರ್ಷಿಕ ಕೆಂಡೋತ್ಸವ ನಡೆಸಲಾಗುತ್ತದೆ. ಇದರ ಹತ್ತಿರದಲ್ಲಿಯೇ ಕೊಲ್ಲಾರಮ್ಮ ದೇವಸ್ಥಾನ ಕಾಣಬಹುದು.
3.ಮಾರಮ್ಮ ದೇವಸ್ಥಾನ :
ಗ್ರಾಮದ ಪೂರ್ವಭಾಗದಲ್ಲಿರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು,
ಸ್ಥಳೀಯ ಶೈಲಿಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ.
4. ಗಂಗಾಧರೇಶ್ವರ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿರುವ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳನ್ನು ಹೊಂದಿರುವ ಈ ದೇವಾಲಯದ ಗರ್ಭಗೃಹದಲ್ಲಿ ಈಶ್ವರ ಲಿಂಗ ಹಾಗೂ ಸಭಾಮಂಟಪದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. 1885 ರಲ್ಲಿ ಶೃಂಗೇರಿ ಮಠದವರು ಈ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ ಎಂಬ ಮಾಹಿತಿ ದೊರೆಯುತ್ತದೆ.
1885 ರಾ ಫೋಟೋದಂತೆ ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನು ಬಳಸಿ ಈ ಹಿಂದೆಯೇ ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದನ್ನು ಕಾಣಬಹುದು.
ಈ ದೇವಾಲಯದ ಹಿಂಭಾಗದಲ್ಲಿ ನಾಗಶಿಲ್ಪಗಳು ಹಾಗೂ ಲಿಂಗಮುದ್ರೆ ಕಲ್ಲುಗಳನ್ನು ಕಾಣಬಹುದು.ಲಿಂಗಮುದ್ರೆ ಕಲ್ಲುಗಳು ವಿಜಯನಗರೋತ್ತರ ಕಾಲದ್ದಾಗಿದೆ.
5. ಪೀರಲು ದೇವರು:
ಗ್ರಾಮದ ಮಧ್ಯ ಭಾಗದಲ್ಲಿರುವ ಈ ಗುಡಿಯಲ್ಲಿ ಪ್ರತಿ ಗುರುವಾರ ಭಕ್ತರಿಂದ ಓತಿಗೆ ಸೇವೆ ನಡೆಯುತ್ತದೆ.
ಪ್ರತಿವರ್ಷ ಮೊಹರಂ ಹಬ್ಬದಂದು ಇಲ್ಲಿ ವಾರ್ಷಿಕ ಕೆಂಡೋತ್ಸವ ನಡೆಸಲಾಗುತ್ತದೆ.
6.ಮಲ್ಲೂರ ಈರಣ್ಣ ಸ್ವಾಮಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ಉತ್ಸವ ಮೂರ್ತಿಗಳಿಗಾಗಿ ನಿರ್ಮಾಣ ಮಾಡಲಾಗಿರುವ ದೇವಾಲಯವಾಗಿದೆ.
7.*ಅಹೋಬಲ ನರಸಿಂಹ ಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಿಸಲಾಗಿದೆ.90 ದಶಕದವರೆಗೂ ಸಾಂಪ್ರದಾಯಿಕ ಶೈಲಿಯ ಗುಡಿಸಲು (ಗುಬ್ಬ) ಮಾದರಿಯಲ್ಲಿ ಈ ದೇವಾಲಯವು ಇದ್ದಿತು. ನಂತರ ಈ ದೇವಾಲಯವನ್ನು ಪುನರುಜ್ಜೀವನ ಗೊಳಿಸಲಾಯಿತು. ಅಪ್ಪಟ ಗ್ರಾಮ್ಯ ಸಂಸ್ಕೃತಿಯ ಎಲ್ಲಾ ಆಚರಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ದೈವಿಕ ಆರಾಧನೆ,ನಂಬಿಕೆ, ಕಟ್ಟುಪಾಡುಗಳನ್ನು ಆಧುನಿಕ ಯುಗದಲ್ಲೂ ಮರೆಯದೆ ಪಾಲಿಸಲಾಗುತ್ತದೆ. ಗರ್ಭಗೃಹ ಮಾತ್ರ ಇರುವ ಈ ದೇವಾಲಯದಲ್ಲಿ ದೊಡ್ಡ ಮಾರಿಕಾಂಬ ಉತ್ಸವ ಮೂರ್ತಿ ಹಾಗೂ (ಪೆಟ್ಟಿಗೆ ದೇವರು) ಅಹೋಬಲ ನರಸಿಂಹ ಸ್ವಾಮಿಯನ್ನು ಕಾಣಬಹುದು. ಮ್ಯಾಸ ನಾಯಕ ಜನಾಂಗದ ಪ್ರಮುಖ 12 ಪೆಟ್ಟಿಗೆ ದೇವರುಗಳಲ್ಲಿ ಈ ದೇವರು ಕೂಡ ಒಂದಾಗಿದೆ. ಹತ್ತಾರು ಊರುಗಳ ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ. ಗ್ರಾಮದ ಯಾವುದೇ ಹಸು, ಕರು ಹಾಕಿದಾಗ ಬರುವ ಗಿಣ್ಣದ ಹಾಲನ್ನು ಈ ದೇವರಿಗೆ ಅರ್ಪಿಸಿ ನಂತರ ನೈವೇದ್ಯ ಮಾಡಲಾಗುತ್ತದೆ.
ಈ ದೇವರ ವಿಶೇಷ ಆಚರಣೆಗಳು, ಪೂಜಾ ಕಾರ್ಯಕ್ರಮಗಳಲ್ಲಿ ಇಂದಿಗೂ ಶಂಖ,ಜಾಗಟೆ, ನಗಾರಿ (ದಗಮು ), ಗಂಟೆ.. ಮುಂತಾದ ದೇಸಿ ವಾದ್ಯಗಳನ್ನು ಬಳಸಿ ಪೂಜೆಯನ್ನು ನೆರವೇರಿಸಲಾಗುತ್ತದೆ.
ದೇವಾಲಯದ ಹಿಂಭಾಗದ ಕೊಠಡಿಯಲ್ಲಿ ಇಂದಿಗೂ ಪೂಜಾ ಕಾರ್ಯಕ್ರಮಕ್ಕೆ ವಿಶೇಷವಾಗಿ ಬಳಸಲಾಗುವ ಸೋರೆ (ಮಡಿಕೆಗಳು) ಹಾಗೂ ರುಬ್ಬುವ ಕಲ್ಲುಗಳನ್ನು ಕಾಣಬಹುದು. ಇಂದಿಗೂ ಇದರ ಬಳಕೆಯನ್ನು ಮಾಡಿಯೇ ದೇವರಿಗೆ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಶೈಲಿಯ ವಿಶೇಷ ಆಚರಣೆಗಳನ್ನು ಇಂದಿಗೂ ಕಾಣಬಹುದು. ಇದೇ ಕೊಠಡಿಯ ಮತ್ತೊಂದು ಭಾಗದಲ್ಲಿ ಹಿಂದೆ ಬಳಸಲಾಗುತ್ತಿದ್ದ ಕತ್ತಿಗಳು, ಆಯುಧಗಳನ್ನು ಕಾಣಬಹುದು.
ಶನಿವಾರದ ದಿನ ವಿಶೇಷವಾಗಿ ಇಲ್ಲಿ ದಾಸೋಹಕ್ಕೆ ಮೀಸಲಿರಿಸಲಾಗುತ್ತದೆ. ಈ ದೇವರಿಗೆ ಚಳ್ಳಕೆರೆ ತಾಲೂಕು ದೊಡ್ಡೇರಿಯಿಂದ ಇಂದಿಗೂ ಕಾಸು ಮೀಸಲು ಕುದುರೆಯ ಮೇಲೆ ಹೋಗಿ ತರಲಾಗುತ್ತದೆ. ಈ ದೇವರಿಗೆ ನಡೆದುಕೊಳ್ಳುವ ಭಕ್ತರು,ಅಣ್ಣ- ತಮ್ಮಂದಿರು ಗುಡಿಕಟ್ಟಿನವರು.. ವಿಶೇಷವಾಗಿ ಎಲ್ಲಾ ಪೂಜಾ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಕ್ರಿ. ಶ.1303 ರ ತಾಮ್ರ ಪತ್ರವನ್ನು ಇಂದಿಗೂ ಇಲ್ಲಿನ ಮುಖ್ಯಸ್ಥರ ಬಳಿ ಕಾಣಬಹುದು. ಫೆಬ್ರವರಿ ತಿಂಗಳಲ್ಲಿ ಬರುವ ಕಾಳು ಹುಣ್ಣಿಮೆಯ ಗುಗ್ಗರಿ ಹಬ್ಬ ಹಾಗೂ ದೀಪಾವಳಿ ಹಬ್ಬಗಳನ್ನು ಇಲ್ಲಿ ವಿಶೇಷವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಪಶುಪಾಲನಾ ಸಂಸ್ಕೃತಿಯ ಈ ಜನಾಂಗದ ದೇವರ ಎತ್ತುಗಳನ್ನು ಚಳ್ಳಕೆರೆ ತಾಲೂಕು ನನ್ನಿವಾಳದಲ್ಲಿ ಬಿಡಲಾಗುತ್ತದೆ ಹಾಗೂ ಅವುಗಳನ್ನು ನೋಡಿಕೊಳ್ಳುವ ಕಿಲಾರಿಗಳಿಗೆ ವಾರ್ಷಿಕವಾಗಿ ದವಸ ಧಾನ್ಯಗಳನ್ನು ನೀಡಲಾಗುತ್ತದೆ.
8.ಗಾದ್ರಿಪಾಲನಾಯಕ ಸ್ವಾಮಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು ಪೂರ್ವಾಭಿಮುಖವಾಗಿದೆ. ಗರ್ಭಗೃಹ ಮಾತ್ರ ಇರುವ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ ನಾಗರ, ಗಾದ್ರಿಪಾಲ ನಾಯಕ ಎನ್ನಲಾಗುವ ಉದ್ದದ ಪಲ್ಲಕ್ಕಿ, ಬಾಣಪ್ಪ ಎನ್ನಲಾಗುವ ಲೋಹದ ಕಠಾರಿ… ಮುಂತಾದವುಗಳನ್ನು ಪೂಜಿಸಲಾಗುತ್ತದೆ.
ಜಾನಪದ ಕಲಾ ಸಂಸ್ಕೃತಿ, ಕಲೆಗಳು ಆಧುನೀಕತೆ ಬೆಳೆದಂತೆ, ಬದಲಾದ ಜಾಗತಿಕ ವಿದ್ಯಮಾನಗಳಲ್ಲಿ ತೆರೆಮರೆಗೆ ಸರಿಯುತ್ತಿದೆ.ಆದರೆ ಈ ಊರಿನಲ್ಲಿ ಮಾತ್ರ ಇಂದಿಗೂ ಎಲ್ಲಾ ಆಚರಣೆಗಳನ್ನು ಹಬ್ಬ,ಜಾತ್ರೆಗಳಲ್ಲಿ ತಪ್ಪದೇ ಕಾಣಬಹುದಾಗಿದೆ. ನಂದಿಕೋಲು,ಉರುಮೆ ಕೋಲಾಟ,ಭಜನೆ,ತಮಟೆ, ಕಹಳೆ ವಾದ್ಯ… ಮುಂತಾದ ಎಲ್ಲಾ ಜಾನಪದ ಕಲೆಗಳ ತಂಡಗಳನ್ನು ಇಲ್ಲಿ ಕಾಣಬಹುದು. ಜಾನಪದ ಸಂಸ್ಕೃತಿಯ ಜೀವಂತಿಕೆ ಇಂದಿಗೂ ಇಲ್ಲಿ ನೆಲೆ ನಿಂತಿದೆ.





