Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರು ನಮ್ಮ ಹೆಮ್ಮೆ : ಚಿತ್ರದುರ್ಗ ಸಿರಿಗೆರೆ ಗ್ರಾಮ ದರ್ಶನ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಸಿರಿಗೆರೆ ಗ್ರಾಮವು ಪಂಚಾಯತಿ ಮುಖ್ಯ ಕೇಂದ್ರವಾಗಿದ್ದು,
ಚಿತ್ರದುರ್ಗದಿಂದ 25 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಬೆನ್ನೂರು ಕ್ರಾಸ್ನಿಂದ ದಕ್ಷಿಣಕ್ಕೆ 6 ಕಿಮೀ ದೂರದಲ್ಲಿದೆ.
ಗ್ರಾಮದ ಹಳೆಗ್ರಾಮ ನಿವೇಶನವು ಗ್ರಾಮದಿಂದ ದಕ್ಷಿಣಕ್ಕೆ ಗೌಡನಕೆರೆಗೆ ಹೋಗುವ ರಸ್ತೆಯಲ್ಲಿದ್ದು, ಅಲ್ಲಿ ಈಗ ಹಳೆ ಕಲ್ಲೇಶ್ವರ( ಊರ ಹೊರಗಿನ ಕಲ್ಲಪ್ಪ ) ದೇವಾಲಯವಿದ್ದು, ಇದರಲ್ಲಿ ಯಾವುದೇ ದೇವರ ಮೂರ್ತಿ ಇರುವುದಿಲ್ಲ.
ಈ ದೇವಾಲಯವು ನಾಗರ ಶೈಲಿಯಲ್ಲಿದ್ದು 11-12 ನೇ ಶತಮಾನಕ್ಕೆ ಸೇರಿದೆ. ಇದೀಗ ಇದನ್ನು ನೂತನವಾಗಿ ಜೀರ್ಣೋದ್ಧಾರ ಗೊಳಿಸಲಾಗಿದೆ.

ಗ್ರಾಮದ ಹೆಸರಿರುವ ಶಾಸನವು ಭರಮಸಾಗರ ಬಳಿಯ ಇಸಾಮುದ್ರ ಗ್ರಾಮದ ಕಲ್ಲೇಶ್ವರ ಗುಡಿಯ ಬಳಿಯಲ್ಲಿದೆ. ಈ ಶಾಸನವು 10 ನೇ ಶತಮಾನಕ್ಕೆ ಸೇರಿದ್ದು, ಕದಂಬರ ಕನ್ನಯ್ಯ ಆಳುತ್ತಿರುವಾಗ ಈತನು ಗೊಗ್ಗಿಯ ದೇಗುಲದ ಧರ್ಮರಾಶಿ ಭಟಾರರ ಕಾಲನ್ನು ತೊಳೆದು ಸಿರಿಗೆರೆ ಗ್ರಾಮದ ಜೊತೆಗೆ ಇಟ್ಟಗೆ, ಹೆದರಿಗಟ್ಟ (ಬಹದ್ದೂರ್ ಗಟ್ಟ ),ಕಾರಿಗೆಯೂರ(ಕಾಲ್ಗೆರೆ )… ಗ್ರಾಮಗಳನ್ನು ದಾನವಾಗಿ ಬಿಟ್ಟುಕೊಟ್ಟ ವಿವರಣೆ ಇದೆ. ಆ ಕಾರಣಕ್ಕೆ ಸಿರಿಗೆರೆಯು ಅತ್ಯಂತ ಪ್ರಾಚೀನ ಗ್ರಾಮವಾಗಿದ್ದು,ಸಾವಿರ ವರ್ಷಗಳಿಂದಲೂ ಇರುವ ಬಗ್ಗೆ ದಾಖಲೆ ಇದೆ.


ಈ ಗ್ರಾಮವು ಚಿತ್ರದುರ್ಗ ತಾಲೂಕಿನ ಒಂದು ಧಾರ್ಮಿಕ,ಆಧ್ಯಾತ್ಮಿಕ ಹಾಗೂ ಸಾಧು ಲಿಂಗಾಯತ ಸಮುದಾಯದ ಪ್ರಮುಖ ಮಠವಿರುವ ಸ್ಥಳವಾಗಿದೆ.
ಗ್ರಾಮವು ಶಿಕ್ಷಣ ಹಾಗೂ ಧಾರ್ಮಿಕ ಕಾರಣಕ್ಕೆ ಪ್ರಸಿದ್ಧವಾಗಿದ್ದು ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಬೇರೆ ಊರುಗಳಿಗೆ ತೆರಳಿದಾಗ ತಮ್ಮ ಊರನ್ನು ಸಿರಿಗೆರೆ / ಸಿರಿಗೆರೆ ಹತ್ತಿರದ ಊರು ಎಂದು ಹೇಳಿ ಪರಿಚಯಿಸಿಕೊಳ್ಳುತ್ತಾರೆ. 1997 ರ ಮುಂಚೆ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಹರಿಹರ ತಾಲೂಕು ಮಲೆಬೆನ್ನೂರು ಹೋಬಳಿ ಹೊಳೆಸಿರಿಗೆರೆ ಹಾಗೂ ಚಿತ್ರದುರ್ಗ ತಾಲೂಕು, ಭರಮಸಾಗರ ಹೋಬಳಿ ಸಿರಿಗೆರೆ ಗ್ರಾಮಗಳು ಪ್ರತ್ಯೇಕವಾಗಿ ಗುರುತಿಸಲು ತರಳಬಾಳು ಮಠ ಇದ್ದ ಕಾರಣಕ್ಕೆ ಈ ಗ್ರಾಮಕ್ಕೆ ಮಠದ ಸಿರಿಗೆರೆ ಎಂದು ಹೇಳಲಾಗುತ್ತದೆ. ಕಳೆದ ದಶಕದಿಂದ ಈಚೆಗೆ ಉತ್ತಮ ವ್ಯಾಪಾರಿ ಕೇಂದ್ರವಾಗಿ ಕೂಡ ಬೆಳವಣಿಗೆ ಆಗುತ್ತಿದೆ.

ಹೆಸರಿನ ಮೂಲ :
ಗ್ರಾಮದ ಹೆಸರು ಭೌಗೋಳಿಕ ಲಕ್ಷಣದ ಕಾರಣಕ್ಕೆ ಬಂದಿದ್ದು, ಸದಾಕಾಲ ನೀರಿನಿಂದ ಸಮೃದ್ಧವಾಗಿ ತುಂಬಿರುವ ಕೆರೆಗಳಿಂದ ಇಲ್ಲಿ ಉತ್ತಮ ಬೆಳೆ,ಸಿರಿ -ಸಂಪತ್ತು ಗಳಿಂದ ತುಂಬಿರುವ ಜನ ವಸತಿ ಪ್ರದೇಶವೇ ಸಿರಿಯಕೆರೆ ಮುಂದುವರೆದು ಸಿರಿಗೆರೆ ಆಗಿದೆ. ಇದಕ್ಕೆ ಅನ್ವರ್ಥಕ ವಾಗುವಂತೆ ಗ್ರಾಮದ ಸುತ್ತಲೂ ಗೌಡನಕೆರೆ,ಹೊಸಕೆರೆ, ಬುಕ್ಕರಾಯನ ಕೆರೆಗಳಿವೆ.ಗ್ರಾಮದ ದಕ್ಷಿಣಕ್ಕೆ ಗೌಡನಕೆರೆ ಇದ್ದರೆ, ಪಶ್ಚಿಮಕ್ಕೆ ಹೊಸಕೆರೆ ಇದೆ. ಈ ಎರಡೂ ಕೆರೆಗಳು ತುಂಬಿದ ನಂತರ ಬುಕ್ಕಲೋರನಕೆರೆಗೆ ನೀರು ಹರಿಯುತ್ತದೆ.


ಗ್ರಾಮದ ಹಳೆ ರಂಗಾಪುರ ರಸ್ತೆಯಲ್ಲಿರುವ ಬುಕ್ಕಲೋರನ( ಬುಕ್ಕರಾಯನ) ಕರೆಯುವ ಅತ್ಯಂತ ಪ್ರಾಚೀನ ಕೆರೆಯಾಗಿದ್ದು ಈ ಕೆರೆಯಿಂದಲೇ ಗ್ರಾಮಕ್ಕೆ ಹೆಸರು ಬಂದಿದೆ ಎನ್ನಲಾಗುತ್ತದೆ. ಈ ಕೆರೆಯು ತುಂಬಿದ ನಂತರ ಮುಂದೆ ಭರಮಸಾಗರ ಕೆರೆಗೆ ನೀರು ತಲುಪುತ್ತದೆ. ಈಗ ಭರಮಸಾಗರ ಏತ ನೀರಾವರಿ ಯೋಜನೆಯಿಂದ ಈ ಮೂರು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಮಳೆ ಬಾರದ ವರ್ಷಗಳಲ್ಲಿ ಹಾಗೂ ಹೊಳೆ ಪೂಜೆಗಾಗಿ ಗ್ರಾಮದ ದೇವರುಗಳನ್ನು ಹತ್ತಿರದ ಗಾದ್ರಿಗುಡ್ಡ ಹಾಗೂ ಡಿ. ಮೆದಕೇರಿಪುರ ಹತ್ತಿರದ ವರತಿನಾಯಕನ ಕೆರೆಗೆ ಕರೆದೊಯ್ಯಲಾಗುತ್ತದೆ.

ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮದ  ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಸಮತಟ್ಟು ಭೂ ಪ್ರದೇಶವೇ ಸುತ್ತಲೂ ಹರಡಿದೆ. ಅಲ್ಲಲ್ಲಿ ಏರಿಳಿತ ಇರುವ ಭೂಪ್ರದೇಶಗಳು ಕಂಡುಬರುತ್ತದೆ. ಗ್ರಾಮದ ಪಶ್ಚಿಮಕ್ಕೆ ಅಳಗವಾಡಿ ಗುಡ್ಡಸಾಲುಗಳು ಕಂಡು ಬಂದರೆ ದಕ್ಷಿಣಕ್ಕೆ ಗಾದ್ರಿಗುಡ್ಡ, ವಾಯುವ್ಯಕ್ಕೆ ಕಂದವಾಡಿ ಗುಡ್ಡಸಾಲುಗಳಿವೆ.

ವೀರಗಲ್ಲುಗಳು : ಗ್ರಾಮದ ಎಂ. ಬಿ. ಆರ್. ಕಾಲೇಜು ಉದ್ಯಾನವನದಲ್ಲಿ ವೀರಗಲ್ಲು ಇದ್ದು, 10-11 ನೇ ಶತಮಾನದ ಕಾಲಕ್ಕೆ ಸೇರಿದೆ. ಯೋಧನು ಕಠಾರಿವೀರನಾಗಿದ್ದು ರಾಜ ಪ್ರಮುಖನಾಗಿದ್ದಾನೆ. ವೀರಗಲ್ಲು ಅತ್ಯಂತ ಅಪರೂಪ, ಹಳೆಯದಾದ, ದೊಡ್ಡದಾದ ವೀರಗಲ್ಲಾಗಿದೆ ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ. ಇದನ್ನು ಸಂರಕ್ಷಣೆ ಮಾಡುವ ಅಗತ್ಯತೆ ಇರುತ್ತದೆ.

ದೇವಾಲಯ ಪರಿಚಯ:
1.ಕಲ್ಲೇಶ್ವರ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ಸ್ಥಳೀಯ ಶೈಲಿಯಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಿಸಲಾಗಿದೆ. ಈ ದೇವರ ಜಾತ್ರೆ ಹಾಗೂ ರಥೋತ್ಸವವನ್ನು ಪ್ರತಿವರ್ಷ ಪ್ರತಿ ವರ್ಷ ಏಪ್ರಲ್ ತಿಂಗಳಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಗ್ರಾಮದ ವಾರ್ಷಿಕ ಪರೇವು ಆಚರಣೆಯನ್ನು ಈ ದೇವಾಲಯದ ಬಳಿಯಲ್ಲಿ ಹಾಗೂ ಕಾಶಿಮಹಾಲಿಂಗ ಸ್ವಾಮಿ ಗದ್ದುಗೆ ಬಳಿ ನಡೆಸಲಾಗುತ್ತದೆ.

2.ಆಂಜನೇಯ ಸ್ವಾಮಿ ದೇವಾಲಯ:
ಗ್ರಾಮದ ಸರ್ಕಾರಿ ಬಸ್ ನಿಲ್ದಾಣದ ಹತ್ತಿರ ದಕ್ಷಿಣಾಭಿಮುಖವಾಗಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯದ ಗರ್ಭಗೃಹದಲ್ಲಿ ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆ.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಇಲ್ಲಿ ಸಾಮೂಹಿಕ ಪರೇವು ಆಚರಣೆಯನ್ನು ನಡೆಸಲಾಗುತ್ತದೆ.

3.ಕರಿಯಮ್ಮ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವರ ದೇವಾಲಯವನ್ನು ನಿರ್ಮಿಸಲಾಗಿದೆ.

4.ಹಟ್ಟಿಮಾರಮ್ಮ ದೇವಿ ದೇವಸ್ಥಾನ
ಗ್ರಾಮದ ಮಧ್ಯ ಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

5.ನಾರದಮುನಿ ದೇವಾಲಯ
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ನಾರದಮುನಿ ಸ್ವಾಮಿ ಹಾಗೂ ಸಾವಮ್ಮ ದೇವಿಯ ಪ್ರತ್ಯೇಕ ಗರ್ಭಗೃಹಗಳಿರುವ ದೇವಾಲಯ ಇದಾಗಿದೆ.
ಹರಪನಹಳ್ಳಿ ತಾಲೂಕು ಚಿಗಟೇರಿಯ ನಾರದಮುನಿ ದೇವಾಲಯಕ್ಕೆ ಇಲ್ಲಿನ ಬಹಳಷ್ಟು ಭಕ್ತರು ನಡೆದುಕೊಳ್ಳುತ್ತಾರೆ.
ಆ ಕಾರಣಕ್ಕೆ ನಾರಪ್ಪ ,ನಾರಮ್ಮ, ಮುನಿಯಪ್ಪ,ಮುನಿಯಮ್ಮ.. ಹೆಸರಿನ ವ್ಯಕ್ತಿಗಳು ಬಹಳಷ್ಟು ಜನರು ಕಂಡು ಬರುತ್ತಾರೆ.

ಇದರ ಜೊತೆಗೆ ಗ್ರಾಮದಲ್ಲಿ ಭರಮಪ್ಪ, ದೊಡ್ಡಾಲಘಟ್ಟ ರಸ್ತೆಯಲ್ಲಿ ಗೌರಸಂದ್ರ ಮಾರಮ್ಮ,ಮುಸ್ಲಿಮರ ಒಂದು ಮಸೀದಿ ಇದೆ.

ಸಿರಿಗೆರೆಯ ತರಳಬಾಳು ಮಠ :
ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಮಠಗಳಲ್ಲಿ ಶ್ರೀ ತರಳಬಾಳು ಮಠವೂ ಒಂದು. ತರಳಬಾಳು ಜಗದ್ಗುರುಗಳ ಬೃಹನ್ಮಠವಿದು. ಶ್ರೀಮದ್ ಉಜ್ಜಯಿನಿ ಸದ್ಧಮ್ಮ ಪೀಠದ ಸಂಸ್ಥಾಪಕರಾದ ಮರುಳಸಿದ್ದೇಶ್ವರ ಪರಂಪರೆಯ ಮಠವಿದು. ಮರುಳಸಿದ್ದೇಶ್ವರರು ತಮ್ಮ ಶಿಷ್ಯ ತೆಲುಗುಬಾಳು ಸಿದ್ದೇಶ್ವರನಿಗೆ ತರಳ ನೀ ಬಾಳು ಎಂದು ಹರಸಿ ಪೀಠದ ಅಧಿಕಾರಿಯನ್ನಾಗಿ ಮಾಡಿದುದರಿಂದ ತರಳಬಾಳು ಪರಂಪರೆ ಆರಂಭವಾಯಿತು ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಾಘಶುದ್ಧ ಹುಣ್ಣಿಮೆಯ ದಿನದಂದು ತರಳಬಾಳು ಹುಣ್ಣಿಮೆ ಮಹೋತ್ಸವವನ್ನು 1950 ರಿಂದ ಆಚರಿಸುತ್ತಾ ಬರಲಾಗುತ್ತಿದೆ.
ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಈ ಮಹೋತ್ಸವವನ್ನು ನಡೆಸಲಾಗುತ್ತದೆ. ಇಂದು ಅತ್ಯಂತ ಜನಪ್ರಿಯ ಉತ್ಸವವಾಗಿ ರೂಪಗೊಂಡಿದೆ. ಇದರ ಉದ್ದೇಶ ಜನರಲ್ಲಿ ವೈಚಾರಿಕತೆ ಮೂಡಿಸುವುದು. ಈ ಮಠವು ದೀನ ದಲಿತರ ಏಳಿಗೆಗೆ ಗಮನ, ಸಮಾಜದಲ್ಲಿ ಉತ್ತಮ ಬಾಂಧವ್ಯ,ಸಹಶಿಕ್ಷಣ, ಸಹಜೀವನ,ಸಾಹಿತ್ಯ ಸೇವೆ, ಜನಪದ ಕಲೆಗೆ ಪ್ರೋತ್ಸಾಹ, ಗ್ರಾಮೀಣಾಭಿವೃದ್ಧಿ, ಸಾಂಸ್ಕೃತಿಕ ಪರಿಸರ… ಉಂಟುಮಾಡುವ ಮಹದೋದ್ದೇಶಗಳನ್ನು ಹೊಂದಿದೆ.
ಇದುವರೆಗೆ ಈ ಮಠದಲ್ಲಿ 20 ಕ್ಕೂ ಅಧಿಕ ಜಗದ್ಗುರುಗಳು ಬಂದು ಹೋಗಿದ್ದಾರೆ. ಪ್ರಸ್ತುತ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಶಿವಾಚಾರ್ಯರು 21 ನೇ ಪೀಠಾಧ್ಯಕ್ಷರಾಗಿದ್ದಾರೆ.
ಶ್ರೀ ಮಠವು ಉಚಿತ ಶಿಕ್ಷಣಕ್ಕೆ ಪ್ರಥಮ ಆದ್ಯತೆಯನ್ನು ನೀಡಿದ್ದು,ಇಲ್ಲಿ ಹತ್ತಾರು ಶೈಕ್ಷಣಿಕ ವಿದ್ಯಾಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಕಾಲೇಜು.. ಗಳಿವೆ.
ಇದಲ್ಲದೆ ನಾಡಿನ ಉದ್ದಗಲಕ್ಕೂ ಶ್ರೀ ಮಠದ ವತಿಯಿಂದ ನೂರಾರು ಶೈಕ್ಷಣಿಕ ಸಂಸ್ಥೆಗಳು ನಡೆಸಲಾಗುತ್ತಿದೆ.

ಐಕ್ಯ ಮಂಟಪ : ತರಳಬಾಳು ಮಠದ ಮಧ್ಯಭಾಗದಲ್ಲಿ ಐಕ್ಯಮಂಟಪವನ್ನು ಕಳೆದ ದಶಕದಲ್ಲಿ ನಿರ್ಮಾಣ ಮಾಡಲಾಗಿದೆ. 19 ನೇ ಗುರುಗಳಾಗಿದ್ದ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳ ಗದ್ದುಗೆ ಮೂಲದಲ್ಲಿ ಇದ್ದಿತು.
20 ನೇಯ ಗುರುಗಳಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಶಿವೈಕ್ಯರಾದ ನಂತರ ಅವರ ಗದ್ದಿಗೆಯನ್ನು ಈ ಗುರುಗಳ ಕೆಳಭಾಗದ ಅಂಕಣದಲ್ಲಿ ನಿರ್ಮಿಸಲಾಗಿದೆ.
ಆಕರ್ಷಕ ವಸ್ತು ವಿನ್ಯಾಸದ ಈ ಕಟ್ಟಡ ನೋಡುಗರನ್ನು ಬೆರಗುಗೊಳಿಸುತ್ತದೆ. ಇದರ ಹೊರ ಭಾಗದಲ್ಲಿ ಲತಾ ಮಂಟಪವಿದೆ. ಇಲ್ಲಿ ಸದಾ ಕಾಲ ಆಧ್ಯಾತ್ಮಿಕ ಧಾರ್ಮಿಕ ಮುಂತಾದ ಕಾರ್ಯಕ್ರಮಗಳು ಜರುಗುತ್ತವೆ.
ಮಂಟಪದ ಪ್ರವೇಶದ ಬಲ ಭಾಗದಲ್ಲಿ 19 ನೇ ಶತಮಾನದಲ್ಲಿ ನಿರ್ಮಿಸಲಾದ ಮಠದ ಮೂಲ ಕಟ್ಟಡವಿದೆ.
ಇದರ ಒಳಭಾಗದಲ್ಲಿ ಹಿಂದೆ ಕುದುರೆ ಲಾಯಗಳ ಕೊಠಡಿಗಳಿದ್ದು, ಈಗ ಇವುಗಳನ್ನು ಪುಸ್ತಕ ಮಾರಾಟ ಮಳಿಗೆಗಳನ್ನಾಗಿ ಮಾಡಲಾಗಿದೆ. ಹಿಂದಿನ ಗುರುಗಳ ಗದ್ದುಗೆಗಳನ್ನು ಗ್ರಾಮದ ಪೂರ್ವ ಭಾಗದಲ್ಲಿರುವ ಕಾಶಿಮಹಾಲಿಂಗ ಸ್ವಾಮಿ ನಗರದ ಬಳಿ ಕಾಣಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...