Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ಅಯ್ಯನಹಳ್ಳಿ (ಐನಳ್ಳಿ )-ಕುರುಬರಹಟ್ಟಿ ಗ್ರಾಮ ದರ್ಶನ

---Advertisement---

 


ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

 

ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಹೋಬಳಿಯ ಅಯ್ಯನಹಳ್ಳಿ(ಐನಳ್ಳಿ)- ಕುರುಬರಹಟ್ಟಿ ಗ್ರಾಮದ ಪರಿಚಯ. ಅಯ್ಯನಹಳ್ಳಿ (ಐನಳ್ಳಿ) -ಕುರುಬರಹಟ್ಟಿ ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಚಿತ್ರದುರ್ಗದಿಂದ 10 ಕಿಲೋಮೀಟರ್ ದೂರ ವಾಯುವ್ಯಕ್ಕೆ, ಚಿತ್ರದುರ್ಗ- ಸೀಬಾರ -ಜಗಲೂರು ಮಾರ್ಗದಲ್ಲಿದೆ.

ಗ್ರಾಮದ ಉತ್ತರಕ್ಕೆ ಹಳೆಗ್ರಾಮ ನಿವೇಶನವಿದ್ದು ಅದು ಈಗ ಬೇಚರಾಕ್ ಆಗಿದೆ. ಅಲ್ಲಿಂದ ಈಗಿನ ಗ್ರಾಮದ ಜಾಗಕ್ಕೆ ಸ್ಥಳಾಂತರಗೊಂಡಿದೆ. ಹಳೆ ಗ್ರಾಮ ನಿವೇಶನದಲ್ಲಿ ಇಂದಿಗೂ ಬಂಗಲಿ ಆಂಜನೇಯಸ್ವಾಮಿ ದೇವಾಲಯ ಹಾಗೂ ವಿಜಯನಗರೋತ್ತರ ಕಾಲದ ಕಲ್ಲೇಶ್ವರ ಮಂದಿರವಿದೆ. ಹಳೆ ಗ್ರಾಮವು 16 ನೇ ಶತಮಾನಕ್ಕೂ ಪೂರ್ವದ ಪ್ರಾಚೀನ ಗ್ರಾಮವಾಗಿದೆ.
ಹಳೆಯ ಗ್ರಾಮ ನಿವೇಶನದ ಹೆಸರು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಹಳೆಯ ಗ್ರಾಮ ನಿವೇಶನದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ವಾರ್ಷಿಕ ಪರೇವು ಆಚರಣೆ ನಡೆಸಲಾಗುತ್ತದೆ.

ಅಯ್ಯನಹಳ್ಳಿ (ಐನಳ್ಳಿ) :
ವೀರಶೈವರ / ಜಂಗಮ ಗುರುಗಳಾದ ಅಯ್ಯನವರು ನೆಲೆಸಿದ್ದು ಮುಂದೆ ಅವರ ಹೆಸರಿನ ಮೇಲೆ ಮುಂದುವರೆದು ಅಯ್ಯನಹಳ್ಳಿಯಾಗಿದೆ. ಇದು ಜನರ ಬಾಯಲ್ಲಿ ಅಪಭ್ರಂಶಗೊಂಡು ಐನಳ್ಳಿಯಾಗಿದೆ.
ಈ ಗ್ರಾಮದಲ್ಲಿ ಇಂದಿಗೂ ಲಿಂಗಾಯತ ಸಮುದಾಯದವರು ಬಹುಸಂಖ್ಯಾತರಾಗಿದ್ದಾರೆ.
ಕುರುಬರಹಟ್ಟಿ ಹಾಗೂ ಚನ್ನಯ್ಯನಹಟ್ಟಿ ಈ ಗ್ರಾಮದ ಉಪ ಗ್ರಾಮಗಳಾಗಿವೆ. ಅಯ್ಯನಹಳ್ಳಿ ಕುರುಬರಹಟ್ಟಿ, ಆಯಿತೋಳು ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು :

1.ಕಲ್ಲೇಶ್ವರ ದೇವಸ್ಥಾನ:
ಗ್ರಾಮದಿಂದ 1 ಕಿ.ಮೀ ದೂರ ಉತ್ತರಭಾಗದ ಜಮೀನಿನಲ್ಲಿರುವ ಈ ದೇವಾಲಯವು 15-16 ನೇ ಶತಮಾನದ ವಿಜಯನಗರೋತ್ತರ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ.
ಇದಕ್ಕೆ ದಕ್ಷಿಣದಿಂದ ಪ್ರವೇಶದ್ವಾರವಿದೆ.
ಗರ್ಭಗೃಹ,ಅಂತರಾಳ ಹಾಗೂ ಸಭಾಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಸಭಾಮಂಟಪದಲ್ಲಿ ನಂದಿ
ಇದೆ.

ಶಿವಲಿಂಗ :
ಶಿವಲಿಂಗವು 2 ಅಡಿ ಎತ್ತರದ ಪಾನವಟ್ಟದ ಮೇಲೆ 1 ಅಡಿ ಎತ್ತರದ ಶಿವಲಿಂಗವಾಗಿದೆ.

2.ಬಸವೇಶ್ವರ ಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿ ನಿರ್ಮಿಸಲಾಗಿರುವ ಶ್ರೀ ಬಸವೇಶ್ವರಸ್ವಾಮಿ ದೇವಾಲಯವು ಉತ್ತರಾಭಿಮುಖವಾಗಿದ್ದು ಇದನ್ನು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಗರ್ಭಗೃಹದಲ್ಲಿ ಬಸವೇಶ್ವರ ಸ್ವಾಮಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ.ಈ ದೇವರ ಆಚರಣೆಗಳನ್ನು ಶಿವರಾತ್ರಿ, ಬಸವಜಯಂತಿಯಂದು ವಿಶೇಷವಾಗಿ ನಡೆಸಲಾಗುತ್ತದೆ.

3. ಬಂಗಲಿ ಆಂಜನೇಯ ಸ್ವಾಮಿ ದೇವಸ್ಥಾನ:
ಗ್ರಾಮದಿಂದ ಅರ್ಧ ಕಿಲೋ ಮೀಟರ್ ದೂರ ಉತ್ತರಕ್ಕೆ ಹಳೆ ಗ್ರಾಮ ನಿವೇಶನದಲ್ಲಿರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ 16-17 ನೇ ಶತಮಾನದ ಕಾಲದ ಶಿಲ್ಪವಿದ್ದು ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿಂದ ಕೂಡಿರುವ ದೇವಾಲಯವಿದು.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ .
ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇದರ ಜೊತೆಗೆ
ಗ್ರಾಮದಿಂದ ಉತ್ತರಕ್ಕೆ ಪಾಪೇನಹಳ್ಳಿ ಬಳಿಯಲ್ಲಿರುವ ಬೆಟಗೇರಿ ಆಂಜನೇಯಸ್ವಾಮಿ ದೇವರ ಬಯಲು ಆಲಯವಿದೆ. ಇಲ್ಲಿ ಹಿಂದೆ ಪಾಳೇಗಾರರ ಕಾಲದ ಶಿಲ್ಪವು ಇದ್ದಿತು.
ಈಗ ಅದು ಇರುವುದಿಲ್ಲ. ಹಿಂದೆ ಇದು ಗ್ರಾಮದ ಜನವಸತಿ ಸ್ಥಳವಾಗಿದ್ದು, ಈಗ ಇದು ಬೇಚಾರಕ್ ಸ್ಥಳವಾಗಿದೆ.

4.ಲಿಂಗೇಶ್ವರ ಸ್ವಾಮಿ ದೇವಸ್ಥಾನ (ನಿಂಗಪ್ಪ ಸ್ವಾಮಿ):
ಗ್ರಾಮದ ಮಧ್ಯಭಾಗದಲ್ಲಿರುವ ಈ ಮಂದಿರ ಹಿಂದೆ ಗ್ರಾಮದಲ್ಲಿ ನೆಲೆಸಿದ್ದ ಶಿವಶರಣ ಲಿಂಗೇಶ್ವರ ಸ್ವಾಮಿಗಳ ಗದ್ದುಗೆಯಾಗಿದೆ.

*ಅಯ್ಯನಹಳ್ಳಿ ಕುರುಬರಹಟ್ಟಿ:*
ಈ ಗ್ರಾಮವು ಐನಳ್ಳಿ ಗ್ರಾಮದ ಮುಖ್ಯರಸ್ತೆಯಿಂದ 1.5 ಕಿಲೋಮೀಟರ್ ಪೂರ್ವಕ್ಕೆ ಇದೆ.
ಇಲ್ಲಿ ಕುರುಬ ಸಮುದಾಯದವರು ಬಹುಸಂಖ್ಯಾತರಾಗಿದ್ದರೂ,
ಇತರ ಸಮುದಾಯದವರು ವಾಸವಾಗಿದ್ದಾರೆ.

ಗ್ರಾಮದಲ್ಲಿರುವ ದೇವಸ್ಥಾನಗಳು:

1.ಸೋಮಲಿಂಗೇಶ್ವರ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ಕುರುಬ ಸಮಾಜದವರ ಬೀರಲಿಂಗೇಶ್ವರ ದೇವರ ಮತ್ತೊಂದು ರೂಪವಾಗಿದೆ.

2.ದುರ್ಗಾಪರಮೇಶ್ವರಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.ಗರ್ಭಗೃಹ ಹಾಗೂ ಸಭಾಮಂಟಪ ಗಳಿರುವ ಈ ದೇವಸ್ಥಾನದ ಗರ್ಭಗೃಹದಲ್ಲಿ ದುರ್ಗಾಪರಮೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ.ಈ ದೇವರ ಉತ್ಸವವನ್ನು ನವರಾತ್ರಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

3.ಸಿದ್ಧಾರೂಢರ ಮಠ :
ಹುಬ್ಬಳ್ಳಿಯ ಸಿದ್ಧಾರೂಢರ ಸಿದ್ಧಾರೂಢ ಸ್ವಾಮೀಜಿಗಳ ಮಠವು ಇದಾಗಿದ್ದು, ಹಿಂದೆ ಇದನ್ನು ಪಾತಪ್ಪ ಸ್ವಾಮಿಗಳು ನಿರ್ಮಿಸಿದರು. ಹತ್ತಾರು ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ.. ಕಾರ್ಯಕ್ರಮಗಳು ಈ ಮಠದಲ್ಲಿ ಸದಾಕಾಲ ನಡೆಯುತ್ತಲೇ ಇರುತ್ತವೆ. ಈ ಮಠದಲ್ಲಿಸಿದ್ಧಾರೂಢರ ಶಿಲೆ ಇದ್ದು ಪೂಜಿಸಲಾಗುತ್ತದೆ.

4.ಗಲ್ಲೇದುರ್ಗಮ್ಮದೇವಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಗಲ್ಲೇದುರ್ಗಮ್ಮದೇವಿ ಶಿಲ್ಪವಿದ್ದು ಪೂಜಿಸಲಾಗುತ್ತದೆ.

https://www.facebook.com/share/v/1Dihb2m1co/

ಇದರ ಜೊತೆಗೆ ಗ್ರಾಮದಲ್ಲಿ ದೊಡ್ಡಮಾರಮ್ಮ, ಸಣ್ಣ ಮಾರಮ್ಮ,ಉತ್ಸವಾಂಬ, ಚೌಡೇಶ್ವರಿ,ಗುಳ್ಳಮ್ಮ ದೇವಿ, ಮುಖ್ಯ ವೃತ್ತದಲ್ಲಿ ಕನಕದಾಸರ ಪುಟ್ಟ ಮಂದಿರ… ಗಳಿದ್ದು, ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ನಂತರದ ದಿನಗಳಲ್ಲಿ ಗ್ರಾಮದೇವತೆ ದೊಡ್ಡಮಾರಮ್ಮ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...