Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ: ಬುದ್ಧನ ಆಧ್ಯಾತ್ಮದ ಬೆಳಕಿನಲ್ಲಿ ಕಂಗೊಳಿಸುವ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್!

---Advertisement---

 

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿರುವ ಬೈಲುಕುಪ್ಪೆಯು ಟಿಬೆಟಿಯನ್ ಜನರ ಒಂದು ಪ್ರಮುಖ ಸ್ಥಳವಾಗಿದೆ. ಚೀನಾ ದೇಶವು ಟಿಬೆಟ್ ಅನ್ನು ಅತಿಕ್ರಮಿಸಿದಾಗ ಅಲ್ಲಿಂದ ಭಾರತ ದೇಶಕ್ಕೆ ವಲಸೆ ಬಂದ ಸಾವಿರಾರು ವಲಸಿಗರಿಗೆ ಭಾರತ ದೇಶವು ನೆಲೆ ಒದಗಿಸಿತು. ಅದರಲ್ಲಿ ಮುಖ್ಯವಾಗಿ ಮೈಸೂರು ಜಿಲ್ಲೆಯ ಬೈಲಕುಪ್ಪೆ ಕೂಡ ಒಂದು. ಕೊಡಗು ಜಿಲ್ಲೆಯ ಅಂಚಿನಲ್ಲಿ ಇರುವ ಕುಶಾಲನಗರ ಪಟ್ಟಣದಿಂದ 5 ಕಿ.ಮೀ ದೂರವಿರುವ ಬೈಲುಕುಪ್ಪೆಯ ಈ ನಮ್ಡ್ರೋಲಿಂಗ್ ಮಠವು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಆಡುಭಾಷೆಯಲ್ಲಿ ಜನರು ಇದನ್ನು ಗೋಲ್ಡನ್ ಟೆಂಪಲ್ ಎನ್ನುತ್ತಾರೆ. ಬೈಲಕುಪ್ಪೆಯ ಹಸಿರು ಪರಿಸರದ ನಡುವೆ ಕಂಗೊಳಿಸುವ ನಮ್ಡ್ರೋಲಿಂಗ್ ಮಠವು ಆಧ್ಯಾತ್ಮಿಕತೆ, ಶಾಂತಿ ಮತ್ತು ಕಲಾವೈಭವದ ಅಪೂರ್ವ ಸಂಗಮವಾಗಿದೆ.
ಚಿನ್ನದ ಬಣ್ಣದ ಗೋಪುರಗಳು, ಬೃಹತ್ ಬುದ್ಧನ ಪ್ರತಿಮೆಗಳು, ವರ್ಣರಂಜಿತ ಗೋಡೆಚಿತ್ರಗಳು ಹಾಗೂ ಮಂತ್ರಘೋಷಗಳ ಮೂಲಕ ಮನಸ್ಸಿಗೆ ನೆಮ್ಮದಿ ನೀಡುವ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ಮಠವು ಕರ್ನಾಟಕದ ಪ್ರವಾಸಿ ಆಕರ್ಷಣೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.


ಇತಿಹಾಸದ ಹೆಜ್ಜೆಗುರುತು :
ನಮ್ಡ್ರೋಲಿಂಗ್ ಮಠವು 1963ರಲ್ಲಿ ಟಿಬೆಟಿಯನ್ ಬೌದ್ಧ ಧರ್ಮದ ನ್ಯಿಂಗ್ಮಾ ಪರಂಪರೆಯ ಪ್ರಮುಖ ಕೇಂದ್ರವಾಗಿ ಸ್ಥಾಪನೆಯಾಯಿತು. ಪೆನೋರ್ ರಿನ್‌ಪೋಚೆ ಅವರ ನೇತೃತ್ವದಲ್ಲಿ ರೂಪುಗೊಂಡ ಈ ಮಠವು ಟಿಬೆಟಿನಿಂದ ವಲಸೆ ಬಂದ ಬೌದ್ಧ ಸನ್ಯಾಸಿಗಳಿಗೆ ಧಾರ್ಮಿಕ ಶಿಕ್ಷಣ, ಧ್ಯಾನ ಮತ್ತು ಸಂಸ್ಕೃತಿಯ ಸಂರಕ್ಷಣೆಯ ನೆಲೆಯಾಯಿತು. ಕಾಲಕ್ರಮೇಣ ಇದು ಭಾರತದಲ್ಲಿನ ಪ್ರಮುಖ ಟಿಬೆಟಿಯನ್ ಬೌದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆದಿದೆ.

 

 

ಮಠದ ಬೆಳವಣಿಗೆಯ ಹಿಂದೆ ಧರ್ಮದ ಮೇಲಿನ ನಿಷ್ಠೆ, ಶ್ರಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಂಕಲ್ಪ ಅಡಗಿದೆ. ವಿದೇಶಿ ನೆಲದಲ್ಲಿಯೂ ತಮ್ಮ ಭಾಷೆ, ಸಂಪ್ರದಾಯ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಜೀವಂತವಾಗಿರಿಸಿಕೊಂಡ ಟಿಬೆಟಿಯನ್ ಸಮುದಾಯದ ಬದುಕಿನ ಕಥೆಯನ್ನು ಈ ಮಠ ಮೌನವಾಗಿ ಸಾರುತ್ತದೆ.

ಚಿನ್ನದ ಹೊಳಪಿನಲ್ಲೊಂದು ಕಲಾಲೋಕ:
ಮಠದ ಮುಖ್ಯ ಪ್ರಾರ್ಥನಾ ಮಂದಿರ ಪ್ರವೇಶಿಸಿದಾಗ ಎದುರಾಗುವ ಬೃಹತ್ ಚಿನ್ನದ ಬಣ್ಣದ ಪ್ರತಿಮೆಗಳು ನೋಡುಗರನ್ನು ಬೆರಗುಗೊಳಿಸುತ್ತವೆ. ಬುದ್ಧ ಶಾಕ್ಯಮುನಿ, ಗುರು ಪದ್ಮಸಂಭವ ಮತ್ತು ಅಮಿತಾಯುಸ್ ಅವರ ಪ್ರತಿಮೆಗಳು ಬೌದ್ಧ ಧರ್ಮದ ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಗೋಡೆಗಳ ಮೇಲಿನ ವರ್ಣರಂಜಿತ ಚಿತ್ರಗಳು, ಸೂಕ್ಷ್ಮ ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ಅಲಂಕಾರಗಳು ಟಿಬೆಟಿಯನ್ ಕಲಾವಿದರ ಸೃಜನಶೀಲತೆಯನ್ನು ಪರಿಚಯಿಸುತ್ತವೆ.

ಪ್ರತಿಯೊಂದು ಚಿತ್ರವೂ ಒಂದೊಂದು ಕಥೆಯನ್ನು ಹೇಳುವಂತೆ ಭಾಸವಾಗುತ್ತದೆ. ಬಣ್ಣಗಳ ವೈಭವದ ನಡುವೆ ಧರ್ಮದ ತತ್ತ್ವಗಳು, ಕರುಣೆಯ ಸಂದೇಶಗಳು ಮತ್ತು ಮಾನವ ಬದುಕಿನ ಮೌಲ್ಯಗಳು ಅನಾವರಣಗೊಳ್ಳುತ್ತವೆ. ಹೊರಗಿನ ಜಗತ್ತಿನ ಗದ್ದಲವನ್ನು ಮರೆಸುವ ಪ್ರಾರ್ಥನಾ ಮಂದಿರದ ವಾತಾವರಣವು ಮನಸ್ಸನ್ನು ಅಂತರ್ಮುಖಿಯಾಗಿಸುತ್ತದೆ.

ಮೌನದಲ್ಲೂ ಮೊಳಗುವ ಶಾಂತಿಯ ಸಂಗೀತ:
ಮಠದ ಆವರಣದಲ್ಲಿ ಹೆಜ್ಜೆ ಇಡುತ್ತಿದ್ದಂತೆ ಮನಸ್ಸಿನ ವೇಗ ನಿಧಾನವಾಗುತ್ತದೆ. ಸನ್ಯಾಸಿಗಳ ಪ್ರಾರ್ಥನೆ, ಮಂತ್ರಗಳ ಧ್ವನಿ ಮತ್ತು ಶಿಸ್ತಿನಿಂದ ಕೂಡಿದ ವಾತಾವರಣವು ವಿಶಿಷ್ಟ ಅನುಭವವನ್ನು ನೀಡುತ್ತದೆ. ಇಲ್ಲಿ ಧರ್ಮವೆಂದರೆ ಕೇವಲ ಆಚರಣೆಗಳಲ್ಲ; ಅದು ಕರುಣೆ, ಸಹನೆ, ಪ್ರೀತಿ ಮತ್ತು ಅಹಿಂಸೆಯ ಜೀವನಮೌಲ್ಯಗಳ ಪ್ರತಿಬಿಂಬ ಎಂಬ ಸಂದೇಶ ಮನದಾಳಕ್ಕೆ ಇಳಿಯುತ್ತದೆ.

ಪ್ರಕೃತಿಯ ಹಸಿರು ಸೊಬಗು, ವಿಶಾಲವಾದ ಆವರಣ ಮತ್ತು ಸುಂದರ ವಾಸ್ತುಶಿಲ್ಪವು ಪ್ರವಾಸಿಗರಿಗೆ ದೃಶ್ಯಾನುಭವದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತವೆ. ಛಾಯಾಚಿತ್ರಗಳಲ್ಲಿ ಸೆರೆಹಿಡಿಯಬಹುದಾದ ಸೌಂದರ್ಯಕ್ಕಿಂತಲೂ, ಇಲ್ಲಿ ಅನುಭವಿಸುವ ಮೌನದ ಆಳವೇ ಹೆಚ್ಚು ಸ್ಮರಣೀಯ. ಮಠದ ಆವರಣದ ಬೃಹತ್ ಎರಡು ಕಟ್ಟಡಗಳ ಒಳಗಡೆ ನೂರಾರು ದೀಪಗಳನ್ನು ಏಕಕಾಲದಲ್ಲಿ ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿಯ ತನಕವು ಬೆಳಗಿಸಲಾಗುತ್ತದೆ. ಜ್ಞಾನದ ಜ್ಯೋತಿಯು ಸದಾಕಾಲ ಪ್ರಜ್ವಲಿಸಲಿ ಎಂಬುದು ಇದರ ಅರ್ಥವಾಗಿದೆ.

ಸಂಸ್ಕೃತಿಗಳ ನಡುವೆ ಸೌಹಾರ್ದದ ಸೇತುವೆ:
ನಮ್ಡ್ರೋಲಿಂಗ್ ಮಠವು ಧಾರ್ಮಿಕ ಕೇಂದ್ರವಾಗಿರುವುದರ ಜೊತೆಗೆ ಟಿಬೆಟಿಯನ್ ಸಂಸ್ಕೃತಿ, ಶಿಕ್ಷಣ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ವಿವಿಧ ಪ್ರದೇಶಗಳಿಂದ ಬರುವ ಪ್ರವಾಸಿಗರು ಇಲ್ಲಿನ ಶಾಂತ ವಾತಾವರಣವನ್ನು ಅನುಭವಿಸಿ, ವಿಭಿನ್ನ ಸಂಸ್ಕೃತಿಗಳನ್ನು ಅರಿಯುವ ಅವಕಾಶ ಪಡೆಯುತ್ತಾರೆ.
ಬೈಲಕುಪ್ಪೆಯ ನಮ್ಡ್ರೋಲಿಂಗ್ ಮಠವು ಚಿನ್ನದ ಹೊಳಪಿನಿಂದ ಕಂಗೊಳಿಸುವ ಕಟ್ಟಡ ಮಾತ್ರವಲ್ಲ, ಅದು ಶಾಂತಿಯ ಸಂದೇಶ ಸಾರುವ ಆಧ್ಯಾತ್ಮಿಕ ಮಂದಿರ, ಕಲೆಯ ಜೀವಂತ ಸಂಗ್ರಹಾಲಯ ಮತ್ತು ಸಂಸ್ಕೃತಿಗಳ ಸೌಹಾರ್ದದ ಪ್ರತೀಕವಾಗಿದೆ. ಇಲ್ಲಿಂದ ಹಿಂದಿರುಗುವ ಪ್ರವಾಸಿಗರು ಕೇವಲ ಸುಂದರ ನೆನಪುಗಳನ್ನಷ್ಟೇ ಅಲ್ಲ, ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವ ಅಮೂಲ್ಯ ಸಂದೇಶವನ್ನೂ ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಮಾನವೀಯತೆ, ಕರುಣೆ ಮತ್ತು ಸಹಬಾಳ್ವೆಯೇ ನಿಜವಾದ ಸೌಂದರ್ಯ ಎಂಬುದನ್ನು ನಮ್ಡ್ರೋಲಿಂಗ್ ಮಠ ತನ್ನ ಮೌನ ಭಾಷೆಯಲ್ಲಿ ಸಾರುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now