ಬೆಂಗಳೂರು : ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವರಾದ ಸನ್ಮಾನ್ಯ ಕೆ.ಎಚ್. ಮುನಿಯಪ್ಪರವರಿಗೆ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ನಿಯೋಗ ಭೇಟಿ ಮಾಡಿ, ಸಮುದಾಯದ ವಿದ್ಯಾರ್ಥಿಗಳ ಹಾಗೂ ಯುವಕರ ಭವಿಷ್ಯಕ್ಕಾಗಿ ಮೀಸಲಾತಿ ಕುರಿತು ಚರ್ಚಿಸಿ ಮಹತ್ವದ ಮನವಿ ಸಲ್ಲಿಸಿದೆ.
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಯ ಸಂದರ್ಭದಲ್ಲಿ ಪ್ರವರ್ಗ–‘ಸಿ’ ರೋಸ್ಟರ್ ಬಿಂದುಗಳಲ್ಲಿ ಆಗಿರುವ ದೋಷಗಳನ್ನು ತಕ್ಷಣ ತಿದ್ದುಪಡಿ ಮಾಡಿ, ಸರ್ಕಾರದ ಆದೇಶ ಸಂಖ್ಯೆ: ಸೀಸಾಇ 02 ಸೇಮೀಮ 2026, ದಿ: 13.05.2026 ರ ಆದೇಶದನ್ವಯ ನ್ಯಾಯಸಮ್ಮತ ರೋಸ್ಟರ್ ಹಂಚಿಕೆಯನ್ನು ಸರಿಪಡಿಸುವಂತೆ ಒತ್ತಾಯಿಸಲಾಗಿದೆ.
ಸರ್ಕಾರವು ಹೊರಡಿಸಿರುವ ಆದೇಶದನ್ವಯ ಪ್ರವರ್ಗ–‘ಸಿ’ಗೆ ಶೇ. 4.5 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದ್ದು, ಒಟ್ಟು 400 ರೋಸ್ಟರ್ ಬಿಂದುಗಳಲ್ಲಿ 60 ರೋಸ್ಟರ್ ಬಿಂದುಗಳನ್ನು ಪ್ರವರ್ಗ–‘ಸಿ’ಗೆ ಮೀಸಲಿರಿಸಲಾಗಿದೆ. ಆದೇಶದ ಅನುಬಂಧ, ಪ್ರವರ್ಗ–‘ಸಿ’ಯ 18 ಬಿಂದುಗಳಲ್ಲಿ 80:20 ಅನುಪಾತದ ಪ್ರಕಾರ ಲಂಬಾಣಿ, ಭೋವಿ, ಕೊರಮ ಹಾಗೂ ಕೊರಚ 4 ಸಮುದಾಯಗಳಿಗೆ 14 ಬಿಂದುಗಳು ಮತ್ತು 59 ಅಲೆಮಾರಿ ಸಮುದಾಯಗಳಿಗೆ 4 ಬಿಂದುಗಳು ಎಂದು ಮೀಸಲಿರಿಸಲಾಗಿದೆ. ಇವುಗಳ ಬಿಂದು ಸಂಖ್ಯೆಗಳು ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ 3, 6, 9, 12, 20, 23, 26, 29, 37, 40, 43, 46, 54, 57, 59 ಹಾಗೂ ಅಲೆಮಾರಿ ಸಮುದಾಯದವರಿಗೆ 15, 32, 49, 60 ಆಗಿರಬೇಕು.

ರಾಜ್ಯದ ವಿವಿಧ ಇಲಾಖೆಗಳಲ್ಲಿ, ಕೆಪಿಎಸ್ಸಿ, ಕೆಇಎ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಭೂಮಾಪನ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಇತ್ತೀಚೆಗೆ ಪ್ರಕಟಿಸಿರುವ ನೇಮಕಾತಿ ಅಧಿಸೂಚನೆಗಳಲ್ಲಿ ಸರ್ಕಾರದ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ 80:20 ಅನುಪಾತವನ್ನು ಪಾಲಿಸುವಲ್ಲಿ ವ್ಯತ್ಯಾಸವಾಗಿದೆ. ಪ್ರವರ್ಗ–‘ಸಿ’ ಅಲೆಮಾರಿ 20% ಕೋಟಾಗೆ 15, 32, 49, 60 ಆಗಿರಬೇಕಾದ ಸರಿಯಾದ ಬಿಂದುಗಳ ಬದಲಾಗಿ 3, 20, 37, 54 ಬಿಂದುಗಳನ್ನು ತಪ್ಪಾಗಿ ನಿಗದಿಪಡಿಸಲಾಗಿದೆ. ಈ ತಪ್ಪಿನಿಂದಾಗಿ ಲಂಬಾಣಿ, ಭೋವಿ, ಕೊರಮ ಹಾಗೂ ಕೊರಚ ಸಮುದಾಯಗಳಿಗೆ ಸಿಗಬೇಕಾದ ಹುದ್ದೆಗಳು ಇತರ 59 ಅಲೆಮಾರಿ ಜಾತಿಗಳಿಗೆ ಹೋಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ.
ಶ್ರೀಗಳ ನಿಯೋಗ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು
1. ರೋಸ್ಟರ್ ಬಿಂದುಗಳ ತಿದ್ದುಪಡಿ: ರಾಜ್ಯದ ಎಲ್ಲಾ ಇಲಾಖೆಗಳಿಗೆ ತಕ್ಷಣವೇ ಸುತ್ತೋಲೆ ಹೊರಡಿಸಿ, ಪ್ರವರ್ಗ–‘ಸಿ’ಯ ಅಲೆಮಾರಿ ಸಮುದಾಯಗಳಿಗೆ ಮೀಸಲಾದ 20% ಕೋಟಾದ ರೋಸ್ಟರ್ ಬಿಂದುಗಳನ್ನು 15, 32, 49, 60 ಎಂದು ಸರಿಪಡಿಸಲು ಆದೇಶಿಸಬೇಕು.
2. ಮೂರು ಹುದ್ದೆಗಳ ರೋಸ್ಟರ್ ತಿದ್ದುಪಡಿ: ಪರಿಶಿಷ್ಟ ಜಾತಿಯ ಮೂರು ಹುದ್ದೆಗಳ ರೋಸ್ಟರ್ನಲ್ಲಿ ಪ್ರವರ್ಗ–‘ಸಿ’ಗೆ ಬರುವ ಒಂದು ಹುದ್ದೆಯನ್ನು, ಅಲೆಮಾರಿ ಸಮುದಾಯಕ್ಕೆ ಮಾತ್ರ ಮೀಸಲಿಡುವ ಬದಲಾಗಿ, ಅದನ್ನು “ಪ್ರವರ್ಗ–‘ಸಿ’ (ಸಾಮಾನ್ಯ)” ಎಂದು ಪರಿಗಣಿಸಿ, ಲಂಬಾಣಿ, ಭೋವಿ, ಕೊರಮ, ಕೊರಚ ಹಾಗೂ ಅಲೆಮಾರಿ ಸಮುದಾಯಗಳ ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಬೇಕು.
3. ಈಗಾಗಲೇ ಹೊರಡಿಸಿರುವ ಅಧಿಸೂಚನೆಗಳ ಮರುಪರಿಶೀಲನೆ: ತಪ್ಪಾದ ರೋಸ್ಟರ್ ಆಧಾರದಲ್ಲಿ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳನ್ನು ರದ್ದುಗೊಳಿಸಿ, ಸರ್ಕಾರದ ಆದೇಶದಂತೆ ಸರಿಯಾದ ರೋಸ್ಟರ್ ಅನುಸರಿಸಿ ಮರು ಅಧಿಸೂಚನೆ ಹೊರಡಿಸಬೇಕು.
4. 4.20% ಕೋಟಾದ ಮಿತಿಯ ಪಾಲನೆ: ಅಲೆಮಾರಿ ಸಮುದಾಯಗಳಿಗೆ ನಿಗದಿಪಡಿಸಿರುವ 20% ಕೋಟಾದಷ್ಟು ಹುದ್ದೆಗಳು ಭರ್ತಿಯಾದ ನಂತರ, ಉಳಿದ 80% ಹುದ್ದೆಗಳಲ್ಲಿ ಅವರಿಗೆ ಅವಕಾಶ ನೀಡದೆ, ಆ ಹುದ್ದೆಗಳನ್ನು ಲಂಬಾಣಿ, ಭೋವಿ, ಕೊರಮ ಹಾಗೂ ಕೊರಚ ಸಮುದಾಯಗಳಿಗೆ ಮಾತ್ರ ಮೀಸಲಿಡುವಂತೆ ಸ್ಪಷ್ಟ ಆದೇಶ ಹೊರಡಿಸಬೇಕು.
5. ಇದಕ್ಕಿಂತ ಕಡಿಮೆ ಹುದ್ದೆಗಳ ನೇಮಕಾತಿ: ಪರಿಶಿಷ್ಟ ಜಾತಿಯ ಸಾಮಾನ್ಯ ರೋಸ್ಟರ್ನಲ್ಲಿ ಅನುಸರಿಸುವ ಮಾದರಿಯಂತೆ, ಇದಕ್ಕಿಂತ ಕಡಿಮೆ ಹುದ್ದೆಗಳಿರುವ ನೇಮಕಾತಿಗಳಲ್ಲಿ ಪ್ರವರ್ಗ–‘ಸಿ’ (ಸಾಮಾನ್ಯ) ಎಂದು ಪರಿಗಣಿಸಿ, ಲಂಬಾಣಿ, ಭೋವಿ, ಕೊರಮ, ಕೊರಚ ಹಾಗೂ ಅಲೆಮಾರಿ ಸಮುದಾಯಗಳ ಎಲ್ಲ ಅಭ್ಯರ್ಥಿಗಳಿಗೂ ಸಮಾನವಾಗಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ರೋಸ್ಟರ್ ನಿಯಮಗಳನ್ನು ತಿದ್ದುಪಡಿ ಮಾಡಬೇಕು.
ಆದ್ದರಿಂದ ಮೇಲ್ಕಂಡ ಬೇಡಿಕೆಗಳನ್ನು ತುರ್ತಾಗಿ ಪರಿಗಣಿಸಿ, ಸರ್ಕಾರದ ಆದೇಶದ ಉದ್ದೇಶಕ್ಕೆ ಅನುಗುಣವಾಗಿ ರೋಸ್ಟರ್ ದೋಷಗಳನ್ನು ಸರಿಪಡಿಸಿ, ಪ್ರವರ್ಗ–‘ಸಿ’ ಸಮುದಾಯಗಳಿಗೆ ನ್ಯಾಯಸಮ್ಮತ ಹಂಚಿಕೆ ಹಾಗೂ ಸಮಾನ ಅವಕಾಶ ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.












