ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್, ಅಕ್ಟೋಬರ್. 31 :
ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿಯು ಹತ್ತಾರು ವೈಶಿಷ್ಟ ಪೂರ್ಣ ಪ್ರವಾಸಿ ಸ್ಥಳಗಳನ್ನು ಹೊಂದಿರುವ ಒಂದು ನಗರವಾಗಿದೆ ಕರ್ನಾಟಕದ ಕಾಶ್ಮೀರವೆಂದು ಕೊಡಗನ್ನು ಏಕೆ ಹೇಳುತ್ತಾರೆ ಎಂಬುದನ್ನು ಇಲ್ಲಿ ಸಂದರ್ಶನ ಮಾಡಿದ ಪ್ರತಿಯೊಬ್ಬ ಪ್ರವಾಸಿಗನಿಗೆ ಅರ್ಥವಾಗಿ ಬಿಡುತ್ತದೆ.
ದೂರ ದೂರದವರೆಗೂ ಹರಡಿರುವ ಬೆಟ್ಟಸಾಲುಗಳು ಅದರ ಮೇಲೆ ಹಾದು ಹೋಗುವ ಮೋಡಗಳು ಅದನ್ನು ಆವರಿಸಿರುವ ಮಂಜು…ಈ ನಗರವನ್ನು ಮಂಜಿನ ನಗರಿ ಎನ್ನುವಂತೆ ಮಾಡಿಬಿಡುತ್ತದೆ.
ನಗರದ ಬಸ್ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿ ಸ್ಟುವರ್ಟ್ ಹಿಲ್ ಎನ್ನುವ ಪ್ರದೇಶದಲ್ಲಿರುವ ರಾಜ ಸೀಟು ನಗರದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ.
ರಾಜಾ ಸೀಟ್ ಕೊಡಗಿನ ಪ್ರಸಿದ್ಧ ಐತಿಹಾಸಿಕ ಹಾಗೂ ಪ್ರವಾಸಿ ತಾಣವಾಗಿದೆ. ‘ರಾಜಾ ಸೀಟ್’ ಎಂಬ ಪದದ ಅರ್ಥ ‘ರಾಜರ ಆಸನ’ ಎಂದಾಗಿದೆ.ಎತ್ತರದ ಪ್ರದೇಶದಲ್ಲಿರುವ ಈ ಸ್ಥಳದಿಂದ ಹಸಿರು ಬೆಟ್ಟಗಳು, ವಿಶಾಲ ಕಣಿವೆಗಳು ಮತ್ತು ಸೂರ್ಯಾಸ್ತದ ಮನಮೋಹಕ ದೃಶ್ಯಗಳನ್ನು ಒಂದು ದಿನ ಮಾತ್ರವಲ್ಲ ಪ್ರತಿದಿನವೂ ವರ್ಷದ ಎಲ್ಲಾ ದಿನಗಳಲ್ಲೂ ವೀಕ್ಷಿಸಬಹುದು.
ಐತಿಹಾಸಿಕ ಹಿನ್ನೆಲೆ:
ಕೊಡಗು ಪ್ರದೇಶವನ್ನು ಹಲವು ಶತಮಾನಗಳ ಕಾಲ ವಿವಿಧ ರಾಜವಂಶಗಳು ಆಳಿವೆ. ಅವುಗಳಲ್ಲಿ ಹಾಲೇರಿ ರಾಜವಂಶ ಪ್ರಮುಖವಾದುದು. ಹಾಲೇರಿ ಅರಸ ಮುದ್ದುರಾಜನು 17ನೇ ಶತಮಾನದಲ್ಲಿ ಮಡಿಕೇರಿಯನ್ನು ತನ್ನ ಆಡಳಿತದ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿದನು. 1681ರ ಸುಮಾರಿಗೆ ಮಡಿಕೇರಿ ಕೊಡಗಿನ ರಾಜಕೀಯ ಮತ್ತು ಆಡಳಿತಾತ್ಮಕ ಬೆಳವಣಿಗೆಯಲ್ಲಿ ಮಹತ್ವದ ಸ್ಥಾನ ಪಡೆಯಿತು.
ಐತಿಹ್ಯಗಳ ಪ್ರಕಾರ, ಕೊಡಗಿನ ಅರಸರು ತಮ್ಮ ರಾಣಿಯರೊಂದಿಗೆ ರಾಜಾ ಸೀಟ್ಗೆ ಆಗಮಿಸಿ ಸಂಜೆಯ ಹೊತ್ತಿನಲ್ಲಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದರು.
ಬೆಟ್ಟಗಳ ನಡುವೆ ಸೂರ್ಯ ಮುಳುಗುವ ದೃಶ್ಯವನ್ನು ವೀಕ್ಷಿಸಲು ಈ ಸ್ಥಳ ಅನುಕೂಲಕರವಾಗಿತ್ತು.
ಈ ಕಾರಣದಿಂದಲೇ ಈ ಸ್ಥಳಕ್ಕೆ ‘ರಾಜಾ ಸೀಟ್’ ಎಂಬ ಹೆಸರು ಬಂದಿತೆಂದು ನಂಬಲಾಗಿದೆ.
ಆದರೆ, ರಾಜಾ ಸೀಟ್ ಅನ್ನು ನಿರ್ದಿಷ್ಟವಾಗಿ ಯಾವ ಅರಸನು ನಿರ್ಮಿಸಿದನು ಮತ್ತು ಅದು ಯಾವ ವರ್ಷದಲ್ಲಿ ನಿರ್ಮಾಣವಾಯಿತು ಎಂಬುದರ ಕುರಿತು ನಿಖರವಾದ ಐತಿಹಾಸಿಕ ದಾಖಲೆಗಳು ಸ್ಪಷ್ಟವಾಗಿಲ್ಲ.

ಮಂಟಪ :
ರಾಜಾ ಸೀಟ್ನಲ್ಲಿರುವ ಕಮಾನುಗಳನ್ನು ಹೊಂದಿದ ಮಂಟಪ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಮಂಟಪದ ಸುತ್ತಲಿನ ತೆರೆದ ಪ್ರದೇಶದಿಂದ ಕೊಡಗಿನ ಬೆಟ್ಟಗುಡ್ಡಗಳ ವಿಹಂಗಮ ನೋಟವನ್ನು ಕಾಣಬಹುದು. ಈ ಕಟ್ಟಡವು ಸ್ಥಳದ ಐತಿಹಾಸಿಕ ಗುರುತಾಗಿ ಉಳಿದಿದೆ. ಇದು ಸುಮಾರು 18ನೇ ಶತಮಾನದ ನಿರ್ಮಾಣ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.
ಪ್ರವಾಸಿ ಆಕರ್ಷಣೆ :
ಮಡಿಕೇರಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನು ತಪ್ಪದೇ ಕಡ್ಡಾಯವಾಗಿ ರಾಜಾ ಸೀಟು ಉದ್ಯಾನವನಕ್ಕೆ ಭೇಟಿ ನೀಡಿ ಹೋಗುತ್ತಾರೆ. ಸುಂದರ ಉದ್ಯಾನವನ, ಹೂವಿನ ಗಿಡಗಳು, ಹಸಿರು ಹುಲ್ಲುಗಾವಲು ಮತ್ತು ಸೂರ್ಯಾಸ್ತದ ದೃಶ್ಯಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲು, ಛಾಯಾಚಿತ್ರಗಳನ್ನು ತೆಗೆಯಲು ಮತ್ತು ಪ್ರಕೃತಿಯ ಶಾಂತ ವಾತಾವರಣವನ್ನು ಅನುಭವಿಸಲು ಇದು ಸೂಕ್ತ ಸ್ಥಳವಾಗಿದೆ. ಉದ್ಯಾನವನದ ಸುತ್ತಲೂ ಹತ್ತಾರು ವೀಕ್ಷಣಾ ಗೋಪುರಗಳನ್ನು ನಿರ್ಮಾಣ ಮಾಡಲಾಗಿದ್ದು ಇವು ಮತ್ತಷ್ಟು ಪ್ರವಾಸಿ ಸ್ನೇಹಿಯಾಗಿವೆ. ಮಕ್ಕಳಿಗೆ ಆಟವಾಡಲು ನೂರಾರು ವಿವಿಧ ಬಗೆಯ ಆಟಿಕೆಗಳನ್ನು ಕೂಡ ಅಳವಡಿಸಲಾಗಿದೆ.
ರಾಜಾ ಸೀಟ್ ಕೊಡಗಿನ ರಾಜಪರಂಪರೆಯ ನೆನಪುಗಳನ್ನು ಮತ್ತು ಪ್ರಕೃತಿಯ ಸೌಂದರ್ಯವನ್ನು ಒಂದೇ ಸ್ಥಳದಲ್ಲಿ ಪರಿಚಯಿಸುತ್ತದೆ. ಮಂಜಿನಿಂದ ಆವೃತವಾದ ಬೆಟ್ಟಗಳು, ತಂಪಾದ ಗಾಳಿ ಮತ್ತು ಸೂರ್ಯಾಸ್ತದ ಬಣ್ಣಗಳು ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುತ್ತವೆ.
ಪ್ರಕೃತಿ ಸೌಂದರ್ಯ: ಬೆಟ್ಟಗುಡ್ಡಗಳು, ಹಸಿರು ಕಣಿವೆಗಳು ಮತ್ತು ಸೂರ್ಯಾಸ್ತದ ಸುಂದರ ನೋಟ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹೂವಿನ ಗಿಡಗಳು, ಸುಂದರ ಉದ್ಯಾನ ಮತ್ತು ಸಂಗೀತ ಕಾರಂಜಿ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಪ್ರಕೃತಿಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಇದು ಉತ್ತಮ ಸ್ಥಳವಾಗಿದೆ.
ಮಡಿಕೇರಿಯ ರಾಜಾ ಸೀಟ್ ಕೇವಲ ಪ್ರವಾಸಿ ತಾಣವಲ್ಲ; ಅದು ಕೊಡಗಿನ ಇತಿಹಾಸ, ಸ್ಥಳೀಯ ಐತಿಹ್ಯ ಮತ್ತು ಪ್ರಕೃತಿ ಸೌಂದರ್ಯದ ಸಮ್ಮಿಲನವಾಗಿದೆ.
ಸಂದರ್ಶನದ ಸಮಯ:
ಪ್ರವಾಸಕ್ಕೆ ಸಾಮಾನ್ಯವಾಗಿ ಬೆಳಿಗ್ಗೆ ಅಥವಾ ಸಂಜೆ ಸೂಕ್ತ.
ಭೇಟಿಗೆ ಉತ್ತಮ ಸಮಯ ಸಂಜೆಯ ಸೂರ್ಯಾಸ್ತದ ಸಮಯದಲ್ಲಿ ಬೆಟ್ಟಗಳ ಮೇಲಿನ ಸೂರ್ಯನ ಚಿನ್ನದ ಹೊಳಪನ್ನು ಕಣ್ತುಂಬಿಕೊಳ್ಳಬಹುದು.



















