Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ : ಮನಸ್ಸಿಗೆ ನೆಮ್ಮದಿ ನೀಡುವ ಹಸಿರು ಸ್ವರ್ಗ: ಪ್ರವಾಸಿಗರ ನೆಚ್ಚಿನ ತಾಣವಾದ ಕಾವೇರಿ ನಿಸರ್ಗಧಾಮದ ವಿಶೇಷತೆ

---Advertisement---

 

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್, ಅಕ್ಟೋಬರ್. 30 :
ಕಾವೇರಿ ನಿಸರ್ಗಧಾಮವು ಕರ್ನಾಟಕದ ಕೊಡಗು ಜಿಲ್ಲೆಯ ಕುಶಾಲನಗರದ ಸಮೀಪದಲ್ಲಿರುವ ಸುಂದರವಾದ ಪ್ರವಾಸಿ ತಾಣವಾಗಿದೆ. ಮೈಸೂರು- ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿರುವ ಪ್ರಮುಖ ಪ್ರವಾಸಿ ತಾಣ ಹಾಗೂ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ.

ಕಾವೇರಿ ನದಿಯ ಮಡಿಲಿನಲ್ಲಿ ನೆಲೆಸಿರುವ ಈ ನಿಸರ್ಗಧಾಮವು ಪ್ರಕೃತಿಯ ಸೌಂದರ್ಯ, ಹಸಿರು ವನಸಿರಿ ಮತ್ತು ಪ್ರಶಾಂತ ವಾತಾವರಣದಿಂದ ಪ್ರವಾಸಿಗರ ಮನಸ್ಸನ್ನು ಸೆಳೆಯುತ್ತದೆ. ನಿಸರ್ಗದ ಮಡಿಲಿನಲ್ಲಿ ನೆಮ್ಮದಿಯನ್ನು ಅರಸುವವರಿಗೆ ಇದು ಅತ್ಯಂತ ಆಕರ್ಷಕ ತಾಣವಾಸೌಂದರ್ಯ

 

ಎಲ್ಲೆಡೆ ಹರಡಿಕೊಂಡಿರುವ ಹಸಿರು ಮರಗಳು, ಬಿದಿರಿನ ವನಗಳು ಮತ್ತು ಅವುಗಳ ನಡುವೆ ಹಾದುಹೋಗುವ ಕಾಲುದಾರಿಗಳು ಪ್ರಕೃತಿಯ ಅದ್ಭುತ ಕಲಾಕೃತಿಯಂತೆ ಕಾಣುತ್ತವೆ. ಎತ್ತರಕ್ಕೆ ಬೆಳೆದಿರುವ ಬಿದಿರಿನ ಮರಗಳು ಒಂದಕ್ಕೊಂದು ಬಾಗಿಕೊಂಡು ಹಸಿರಿನ ಚಪ್ಪರವನ್ನು ನಿರ್ಮಿಸಿವೆ. ಮರಗಳ ಎಲೆಗಳ ನಡುವೆ ಸೂರ್ಯನ ಕಿರಣಗಳು ಇಣುಕುವ ದೃಶ್ಯ ಮನಮೋಹಕವಾಗಿದೆ. ತಂಪಾದ ಗಾಳಿ, ಪಕ್ಷಿಗಳ ಕಲರವ ಧ್ವನಿಗಳು ಮನಸ್ಸಿಗೆ ಮುದ ನೀಡುತ್ತವೆ. ಎಂತಹ ಬಿರು ಬೇಸಿಗೆಯಲ್ಲಿ ಕೂಡ ಇಲ್ಲಿ ತಂಪಾದ ಹಿತಕರ ವಾತಾವರಣ ಇರುತ್ತದೆ. ಈ ಸ್ಥಳವು ಮೂಲತಃ ದ್ವೀಪ ಪ್ರದೇಶವಾಗಿದ್ದು ಕಾವೇರಿ ನದಿಯು ಎರಡು ಕವಲುಗಳಾಗಿ ಹರಿದು ನಿಸರ್ಗಧಾಮವನ್ನು ಒಂದು ದೀಪವನ್ನಾಗಿಸಿದೆ. ಇದು ಸರಿಸುಮಾರು 64 ಎಕರೆ ವಿಸ್ತೀರ್ಣ ಹೊಂದಿದೆ.

ಕಾವೇರಿ ನದಿಯ ಸೌಂದರ್ಯ ಈ ಪ್ರದೇಶದ ಪ್ರಮುಖ ಆಕರ್ಷಣೆಯಾಗಿದೆ.ಇಲ್ಲಿ ನಿರ್ಮಿಸಿರುವ ತೂಗು ಸೇತುವೆಯ ಮೇಲೆ ನಡೆದು ನಿಸರ್ಗದ ಸೊಬಗನ್ನು ಆಸ್ವಾದಿಸುವ ಅನುಭವ ವಿಶೇಷವಾದುದು. ಇಲ್ಲಿ ಪ್ರವಾಸಿಗರು ಪ್ರಕೃತಿಯ ಸೌಂದರ್ಯವನ್ನು ಸವಿಯುವುದರ ಜೊತೆಗೆ ವಿಶ್ರಾಂತಿ ಪಡೆದು ತಮ್ಮ ದೈನಂದಿನ ಒತ್ತಡಗಳಿಂದ ದೂರವಾಗಬಹುದು. ಕುಟುಂಬದವರು, ಮಕ್ಕಳು ಮತ್ತು ಪ್ರಕೃತಿ ಪ್ರಿಯರಿಗೆ ಈ ಸ್ಥಳವು ಆಹ್ಲಾದಕರ ಅನುಭವವನ್ನು ನೀಡುತ್ತದೆ.

ನಿಸರ್ಗಧಾಮವು ಪ್ರವಾಸಿಗರಿಗೆ ಮನೋಹರವಾದ ಶಾಂತ ಮತ್ತು ಸುಂದರ ಪರಿಸರದಲ್ಲಿ ವಿಶ್ರಾಂತಿ ನೀಡುವ ಪ್ರಶಾಂತ ಮತ್ತು ಮರೆಯಲಾಗದ ಅನುಭವಗಳನ್ನು ನೀಡುತ್ತದೆ. ದಟ್ಟವಾದ ಬಿದಿರು ತೋಪುಗಳ ಮಧ್ಯೆ ಆನೆಯ ಮೇಲೆ ಸವಾರಿ ಮಾಡುವವರು ವಯಸ್ಕರಿಗೆ ಮತ್ತು ಮಕ್ಕಳಿಗಾಗಿ ಮನರಂಜನೆಯನ್ನು ಒದಗಿಸುತ್ತದೆ. ಸಮೃದ್ಧವಾದ ಹಸಿರು ಬಿದಿರು ತೋಪುಗಳು, ತೇಗದ, ಶ್ರೀಗಂಧದ ಮರಗಳಿಂದ ಈ ಸ್ಥಳವು ಆವೃತವಾಗಿದೆ.

ಈ ಜಾಗವು ಮಡಿಕೇರಿಯಿಂದ 30 km ಹಾಗೂ ಕುಶಾಲನಗರದಿಂದ 3 kmಹಾಗೂ ಮೈಸೂರಿನಿಂದ 95 km ದೂರವಿದೆ. ಸಂದರ್ಶಿಸುವವರಿಗೆ ನದಿಯ ಉದ್ದಕ್ಕೂ ಕೆಲವು ಆಳವಿಲ್ಲದ ಮತ್ತು ಸುರಕ್ಷಿತ ಸ್ಥಳಗಳಲ್ಲಿ ನೀರಿನಲ್ಲಿ ಇಳಿಯಲು ಅವಕಾಶವಿದೆ. ಆನೆ ಸವಾರಿ ಮತ್ತು ಬೋಟಿಂಗ್ ಇತರ ಆಕರ್ಷಣೆಗಳಾಗಿವೆ. ಅರಣ್ಯ ಇಲಾಖೆ ನಡೆಸುವ ಅತಿಥಿ ಗೃಹ ಮತ್ತು ಟ್ರೀಟಾಪ್ ಬಿದಿರು ಕುಟೀರಗಳನ್ನು ಹೊಂದಿದೆ.
ಜಿಂಕೆವನ, ಒಂದೇ ಕಡೆ ದಟ್ಟವಾಗಿ ಬೆಳೆಯಬಹುದಾದ ಅರಣ್ಯ ಪ್ರದೇಶ ಜಪಾನಿನ ಮಿಯಾವಾಕಿ ವಿಧಾನದ ಅರಣ್ಯವನ್ನು ಕೂಡ ಇಲ್ಲಿ ನೋಡಬಹುದು. ಸಾಹಸ ಕ್ರೀಡೆಗಳನ್ನು ಕೂಡ ಅರಣ್ಯ ಇಲಾಖೆ ಇಲ್ಲಿ ನಡೆಸುತ್ತದೆ.
ಮಳೆಗಾಲದಲ್ಲಿ ಹತ್ತಿರದ ಪ್ರದೇಶವು ಕೂಡ ಕಾಣದಷ್ಟು ಇಲ್ಲಿ ಮಂಜು ಮುಸುಕಿರುತ್ತದೆ.

ಕಾವೇರಿ ನಿಸರ್ಗಧಾಮವು ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಜೀವಂತ ಪಾಠಶಾಲೆಯೂ ಆಗಿದೆ. ಮರಗಳು, ಪಕ್ಷಿಗಳು ಮತ್ತು ಇತರ ಜೀವಿಗಳು ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯದೆ, ಮರಗಳಿಗೆ ಹಾನಿ ಮಾಡದೆ ಮತ್ತು ಪರಿಸರದ ಸ್ವಚ್ಛತೆಯನ್ನು ಕಾಪಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು.

ಒಟ್ಟಿನಲ್ಲಿ, ಕಾವೇರಿ ನಿಸರ್ಗಧಾಮವು ಪ್ರಕೃತಿಯ ಸೌಂದರ್ಯ, ಶಾಂತಿ ಮತ್ತು ಜೀವವೈವಿಧ್ಯದ ಸುಂದರ ಸಂಗಮವಾಗಿದೆ. ಇಂತಹ ಅಮೂಲ್ಯ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now