ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 29 : ಚಿತ್ರದುರ್ಗ ತಾಲ್ಲೂಕು ಆರ್ಯ ಈಡಿಗರ ಸೇವಾ ಸಂಘದಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್‍ರವರ ಐದನೆ ವರ್ಷದ ಪುಣ್ಯಸ್ಮರಣೆಯನ್ನು ಗುರುವಾರ ಆಚರಿಸಲಾಯಿತು.
ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ ಪುನಿತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಪುನಿತ್ ರಾಜ್‍ಕುಮಾರ್ ತಮ್ಮ ಜೀವನದುದ್ದಕ್ಕೂ ಅನೇಕ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಬಂದಿದ್ದರು. ಪ್ರತಿ ವರ್ಷವೂ ಜಿಲ್ಲಾಸ್ಪತ್ರೆ ಆವರಣದಲ್ಲಿ ಪುನಿತ್‍ರವರ ಪುಣ್ಯ ಸ್ಮರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಅವರ ಆಸೆಯಂತೆ ನೇತ್ರ ತಪಾಸಣೆ. ಹೃದಯ ರೋಗಿಗಳಿಗೆ ಚಿಕಿತ್ಸೆ, ಆರೋಗ್ಯ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಚಿತ್ರನಟ ಮಾಜಿ ಸಂಸದ ಶಶಿಕುಮಾರ್ ಪುತ್ರ ಆದಿತ್ಯ ಮಾತನಾಡಿ ಅಪ್ಪು ಹೆಸರು ಕೇಳಿದರೆ ಸಾಕು ಎಲ್ಲಿಲ್ಲದ ಅಭಿಮಾನ ಮೂಡುತ್ತದೆ. ಹಾಗಾಗಿಯೇ ನಾನು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿರುವೆ. ನ.13 ರಂದು ನನ್ನ ಮೊದಲ ಚಿತ್ರ ರಾಶಿ ಬಿಡುಗಡೆಯಾಗಲಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಪವರ್ ಸ್ಟಾರ್ ಪುನಿತ್‍ರವರ ಹೆಸರು ಅಜರಾಮರವಾಗಿ ಅಭಿಮಾನಿಗಳ ಮನದಲ್ಲಿ ಉಳಿದಿದೆ. ಅವರ ಆಸೆಯಂತೆ ಎಲ್ಲಾ ಕಡೆ ನೇತ್ರದಾನ, ಉಚಿತ ಆರೋಗ್ಯ ಶಿಬಿರಗಳು ನಡೆಯುತ್ತಿವೆ ಎಂದರು.
ಡಾ.ಮೇಘ ಮಾತನಾಡಿ ಪುನಿತ್‍ರಾಜ್‍ಕುಮಾರ್ ಚಿಕ್ಕ ವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾಗಿ ಅಭಿಮಾನಿಗಳಿಂದ ದೂರವಾಗಿರುವುದು ನೋವಿನ ಸಂಗತಿ. ಇತ್ತೀಚೆಗೆ ಚಿಕ್ಕ ಚಿಕ್ಕ ಮಕ್ಕಳಿಗೆ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತಿದೆ. ಅವರ ಆಸೆಯಂತೆ ಹೃದಯ ಆರೋಗ್ಯ ಭಾಗ್ಯ ಸೌಲಭ್ಯವಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ಎಂದು ವಿನಂತಿಸಿದರು.
ಆರ್ಯ ಈಡಿಗರ ಸೇವಾ ಸಂಘದ ಜಿಲ್ಲಾಧ್ಯಕ್ಷ ಜೀವನ್, ತಾಲ್ಲೂಕು ಅಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ್, ಪ್ರಧಾನ ಕಾರ್ಯದರ್ಶಿ ರಘು, ಡಿ.ಆರ್. ಡಿವೈಎಸ್ಪಿ. ಶ್ರೀನಿವಾಸ್,
ರಾಶಿ ಚಿತ್ರದ ನಾಯಕಿ ಸಮೀಕ್ಷಾ, ಶಾರದಾ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ ಇನ್ನು ಅನೇಕರು ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ್ದರು. ಪುಣ್ಯಸ್ಮರಣೆಯ ನಂತರ ಉಪಹಾರ ವಿತರಿಸಲಾಯಿತು.











