Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಫುಟ್‌ಪಾತ್ ಒತ್ತುವರಿ ತೆರವು: ಸಂಚಾರ ಸುಗಮಗೊಳಿಸಲು ಪೊಲೀಸರ ದಿಟ್ಟ ಕ್ರಮ

---Advertisement---

 

ಚಿತ್ರದುರ್ಗ.ಅ.29: ನಗರದ ಪ್ರಮುಖ ರಸ್ತೆಗಳಲ್ಲಿ ವರ್ತಕರು, ವ್ಯಾಪಾರಸ್ಥರು ಹಾಗೂ ಬೀದಿಬದಿ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದಿನ ರಸ್ತೆಯ ಜಾಗವನ್ನು ಒತ್ತವರಿ ಮಾಡಿ, ವಾಹನಗಳ ಪಾರ್ಕಿಂಗ್ ಅನಾನುಕೂಲ ತಂದೊಡ್ಡುತ್ತಿದ್ದಾರೆ.

ಇದರಿಂದಾಗಿ ನಗರದ ಎಂ.ಜಿ.ಸರ್ಕ್‍ಲ್, ಬಿ.ಡಿ.ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಆನೆಬಾಗಿಲು ರಸ್ತೆ, ಹೊಳಲ್ಕೆರೆ ರಸ್ತೆ, ಮೆದೆಹಳ್ಳಿ ರಸ್ತೆ, ಸಂತೆಹೊಂಡ, ಜಿಲ್ಲಾಸ್ಪತ್ರೆ ಹಾಗೂ ರಂಗಯ್ಯನಬಾಗಲು ರಸ್ತೆಯಲ್ಲಿ ಅತೀವ ಸಂಚಾರ ದಟ್ಟಣೆ ಉಂಟಾಗುತ್ತದೆ. ಮೊದಲೇ ಕಿರಿದಾಗಿರುವ ರಸ್ತೆಗಳಲ್ಲಿ ಪುಟ್‍ಪಾತ್ ಹಾಗೂ ಪಾರ್ಕಿಂಗ್ ಒತ್ತುವರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ನಿತ್ಯ ಬವಣೆ ಅನುಭವಿಸುವಂತಾಗಿದೆ.

ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ, ಚಿತ್ರದುರ್ಗ ನಗರ ಸಂಚಾರಿ ಪೊಲೀಸರು ಪುಟ್‍ಪಾತ್ ಹಾಗೂ ಪಾರ್ಕಿಂಗ್ ಸ್ಥಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸವುದರೊಂದಿಗೆ, ವರ್ತಕರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.
ಗುರುವಾರ ಸಂಚಾರ ಪೊಲೀಸ್ ನಿರೀಕ್ಷರಾದ ಶೈಲಶ್ರೀ ಅವರ ನೇತೃತ್ವದಲ್ಲಿ ಮೆದಹಳ್ಳಿ ರಸ್ತೆ ಹಾಗೂ ಸಂತೆಹೊಂಡದ ಸುತ್ತಮುತ್ತ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ರಸ್ತೆ ಅಡ್ಡಲಾಗಿ ಇರಿಸಲಾಗಿದ್ದ ಅಂಗಡಿಗಳ ನಾಮಫಲಕಗಳು, ಅನಧಿಕೃತವಾಗಿ ನಿರ್ಮಿಸಿದ ಕಟ್ಟೆಗಳು, ಬಟ್ಟೆ ಅಂಗಡಿಗಳ ಮುಂದಿನ ಬೊಂಬೆಗಳು ಸೇರಿದಂತೆ ಅಂಗಡಿಗಳ ಮುಂದೆ ಪಾರ್ಕಿಂಗ್‍ಗೆ ಅವಕಾಶ ನೀಡದಂತೆ ಹಾಕಲಾಗಿದ್ದ ಕಬ್ಬಿಣದ ಮ್ಯಾಟ್ ಹಾಗೂ ಕಲ್ಲುಗಳನ್ನು ಪೊಲೀಸರು ತೆರವುಗೊಳಿಸಿದರು. ಸಮ ಹಾಗೂ ಬೆಸ ಸಂಖ್ಯೆ ದಿನಾಂಕಗಳಂದು ನಿಗದಿ ಪಡಿಸಿದ ಪಾರ್ಕಿಂಗ್ ಜಾಗದಲ್ಲಿಯೇ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಸಂಚಾರಕ್ಕೆ ಅಡ್ಡಿಯಾಗದಂತೆ ಬೀದಿ ಬದಿ ವ್ಯಾಪಾರಿಗಳು ವಹಿವಾಟು ನಡೆಸುವಂತೆ ಮನವರಿಕೆ ಮಾಡಿಕೊಟ್ಟರು.

ಆಯ್ದ ಸ್ಥಳಗಳಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ:
ಈ ವೇಳೆ ಮಾತನಾಡಿದ ಸಂಚಾರಿ ಪೊಲೀಸ್ ನಿರೀಕ್ಷಕಿ ಶೈಲಶ್ರೀ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರಿನಲ್ಲಿ ದ್ವಿಚಕ್ರವಾಹನ ಸವಾರರು ಮುಖ್ಯ ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿದ್ದರು. ಬಸ್ ನಿಲ್ದಾಣದ ಒಳಗಡೆ ಪಾಕಿರ್ಂಗ್ ಸ್ಥಳಾವಕಾಶವಿದ್ದರೂ, ರಸ್ತೆಯಲ್ಲೇ ವಾಹನ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು.

ಕಾರ್ಯಾಚರಣೆ ಅಂಗವಾಗಿ ಬಸ್ ನಿಲ್ದಾಣದಲ್ಲಿನ ಸಂಚಾರ ದಟ್ಟಣೆ ನಿರ್ವಹಣೆ ಕ್ರಮ ಕೈಗೊಂಡಿದ್ದು, ಕೆ.ಎಸ್.ಆರ್.ಟಿ ಅವರೊಂದಿಗೆ ಮಾತನಾಡಿ, ಬಸ್‍ಗಳು ಒಳ ಹಾಗೂ ಹೊರ ಹೋಗುವ ಸ್ಥಳಗಳಲ್ಲಿ ದ್ವಿಚಕ್ರ ವಾಹನ ಸವಾರರು ಪಾರ್ಕಿಂಗ್ ಸ್ಥಳಕ್ಕೆ ತೆರಳು ಪ್ರತ್ಯೇಕ ಲೇನ್ ಒದಗಿಸಲಾಗಿದೆ. ಬಸ್ ನಿಲ್ದಾಣದ ಎದರು ಒಂದು ಗಾಡಿಯೂ ಇಲ್ಲದಂತೆ ಕ್ರಮ ವಹಿಸಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಒಂದೊಂದೇ ರಸ್ತೆಯನ್ನು ಕ್ಲಿಯರ್ ಮಾಡಿಕೊಂಡು, ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಿಕೊಳ್ಳುವುದು, ತಳ್ಳುಗಾಡಿಗಳು ಮತ್ತು ಹೂವಿನಂಗಡಿಗಳನ್ನು ತೆರವುಗೊಳಿಸಿ ದ್ವಿಚಕ್ರ ವಾಹನಗಳನ್ನು ಸರಿಯಾಗಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಮತ್ತೋರ್ವ ಸಂಚಾರಿ ಪೊಲೀಸ್ ನಿರೀಕ್ಷಕ ಮಂಜುನಾಥ್, ಎಎಸ್‍ಐ ರವಿ, ಶ್ರೀನಿವಾಸ್ ಸೇರಿದಂತೆ ಇತರೆ ಸಂಚಾರಿ ಪೊಲೀಸರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now