ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು, ಹತ್ತಾರು ಐತಿಹಾಸಿಕ ಧಾರ್ಮಿಕ ಹಾಗೂ ಪೌರಾಣಿಕ ಹಿನ್ನೆಲೆ ಉಳ್ಳ ದೇವಾಲಯಗಳ ತಾಲೂಕು ಸ್ಥಳವಾಗಿದೆ.
ಐತಿಹ್ಯದಂತೆ ಹಾಗೂ ಜಾನಪದ ದಂತ ಕಥೆಗಳ ಆಧಾರದ ಮೇಲೆ ರಾಮಾಯಣ ಹಾಗೂ ಮಹಾಭಾರತಕ್ಕೆ ಸಂಬಂಧಿಸಿದ ಸ್ಥಳಗಳನ್ನು, ಹೆಜ್ಜೆಹೆಜ್ಜೆಗೂ ಪ್ರೇಕ್ಷಣೀಯ ಸ್ಥಳಗಳನ್ನು ಇಲ್ಲಿ ಕಾಣಬಹುದು.ಅಂತಹದ್ದೇ ಒಂದು ಪುರಾಣ ಪ್ರಸಿದ್ಧ ದೇವಾಲಯವೇ ಹೊಸದುರ್ಗ ತಾಲೂಕಿನ ಪುರ ಗ್ರಾಮದ ಮತ್ಸ್ಯಗಿರಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯ.
ಹೊಸದುರ್ಗ -ಹುಳಿಯಾರು ರಾಜ್ಯ ಹೆದ್ದಾರಿಯ ದಕ್ಷಿಣಕ್ಕೆ ಹೊಸದುರ್ಗದಿಂದ 3 ಕಿಲೋಮೀಟರ್ ದೂರವಿರುವ ಪುರ (ಚನ್ನಸಮುದ್ರ) ಗ್ರಾಮದ ಪೂರ್ವದ ಅಂಚಿನಲ್ಲಿರುವ ಬೆಟ್ಟದ ಮೇಲೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಉದ್ಭವ ಮೂರ್ತಿ ಇದ್ದು ಭಕ್ತರ ಆರಾಧ್ಯ ಸ್ಥಳವಾಗಿದೆ.
ಹಚ್ಚ ಹಸುರಿನ ಬೆಟ್ಟಗುಡ್ಡಗಳ ನಡುವೆ ಇರುವ ಈ ಸ್ಥಳವು ಒಂದು ನೈಸರ್ಗಿಕ ಹಾಗೂ ಪ್ರಾಕೃತಿಕ ಸ್ಥಳವಾಗಿದ್ದು ಬಂದ ಭಕ್ತರ ಪ್ರಮುಖ ಆಧ್ಯಾತ್ಮಿಕ ನೆಲೆಬೀಡಾಗಿದೆ. ಮನಸ್ಸಿಗೆ ನೆಮ್ಮದಿ,ಶಾಂತಿ ದೊರಕಲು ಇಂತಹ ಸ್ಥಳಕ್ಕೆ ಕನಿಷ್ಠ ವಾರಕ್ಕೆ ಒಮ್ಮೆ ಪ್ರತಿಯೊಬ್ಬರು ಭೇಟಿ ನೀಡಲೇಬೇಕು.
ಸ್ಥಳೀಯರು ಇದಕ್ಕೆ ಕೊಂಕನಕಲ್ಲು ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಎಂದು ಕರೆಯುತ್ತಾರೆ. ಗರ್ಭಗೃಹದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಉದ್ಭವ ಶಿಲ್ಪವು ಎಡಬದಿಗೆ ದೇವರು ಮಲಗಿದಂತೆ ರೂಪುಗೊಂಡಿದೆ. ಇದೊಂದು ಪುಣ್ಯಕ್ಷೇತ್ರ ಜೊತೆಗೆ ನೈಸರ್ಗಿಕ ವಾಗಿರುವ ಪ್ರಕೃತಿಯ ಪ್ರವಾಸಿ ತಾಣದಂತಿದೆ. ಪಟ್ಟಣದ ಸದ್ದು ಗದ್ದಲದಿಂದ ಪ್ರಶಾಂತತೆ ಬಯಸುವವರಿಗೆ ಇದು ಅತ್ಯುತ್ತಮ ಸ್ಥಳವಾಗಿದೆ.
ಐತಿಹಾಸಿಕ ಹಿನ್ನೆಲೆ :
ಹಿಂದೆ ಈ ಜಾಗದಲ್ಲಿ ಕೊಂಕ ಎಂಬ ರಾಕ್ಷಸ ಬಹಳಷ್ಟು ಜನರಿಗೆ ತೊಂದರೆ ಕೊಡುತ್ತಿದ್ದನು. ಅಲ್ಲಿಗೆ ಮಹಾವಿಷ್ಣುವು ವಾಯು ವಿಹಾರಕ್ಕಾಗಿ ಅದೇ ಸಮಯಕ್ಕೆ ಈ ಸ್ಥಳದಲ್ಲಿ ಹೋಗುತ್ತಿರುತ್ತಾನೆ. ಈ ಸ್ಥಳದಲ್ಲಿ ಮದುವೆಯ ಸಮಾರಂಭ ನಡೆಯುತ್ತಿದ್ದಾಗ ಕೊಂಕ ರಾಕ್ಷಸ ಅವರಿಗೆ ತೊಂದರೆ ಕೊಡಲು ಪ್ರಾರಂಭಿಸುತ್ತಾನೆ. ಜನರೆಲ್ಲ ಓಡೋಡಿ ಬಂದು ದೇವರೇ ರಕ್ಷಿಸು ಎಂದು ಇಲ್ಲಿನ ಮತ್ಸ್ಯಗಿರಿ ಕಡೆಗೆ ಕೈ ಚಾಚುತ್ತಾರೆ. ಮಹಾವಿಷ್ಣುವು ಒಂದು ಬಾಣವನ್ನು ಬಿಟ್ಟು ಕೊಂಕ ರಾಕ್ಷಸನನ್ನು ಸಂಹರಿಸುತ್ತಾನೆ. ಆತನು ಈ ಬೆಟ್ಟದ ಮೇಲೆ ಬಿದ್ದಾಗ ಬಂಡೆಗಳು ಉರುಳಲು ಶುರುವಾಗಿ ಗ್ರಾಮವು ಹಾಳಾಗುವ ಭೀತಿ ಎದುರಾಗುತ್ತದೆ. ಬಂಡೆಗಳನ್ನು ಉರುಳದಂತೆ ತಡೆಯಲು ಮಹಾವಿಷ್ಣುವು ಅಡ್ಡವಾಗಿ ಮಲಗಿ ಬಿಟ್ಟು ಬಂಡೆಗಳು ಉರುಳದಂತೆ ಜನರನ್ನು,ಗ್ರಾಮವನ್ನು ಕಾಪಾಡುತ್ತಾನೆ. ಅಂದಿನಿಂದ ದೇವರು ಇಲ್ಲೇ ನೆಲೆ ನಿಂತಿದ್ದಾನೆ ಎಂಬುದು ಐತಿಹ್ಯ.
ಪ್ರತಿ ತಿಂಗಳ ಅಮಾವಾಸ್ಯೆ ಯಂದು ಸ್ವಾಮಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಯುತ್ತದೆ.
ಡಿಸೆಂಬರ್ ತಿಂಗಳಲ್ಲಿ ನಡೆಯುವ ವೈಕುಂಠ ಏಕಾದಶಿಯಂದು ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ.
ಭಕ್ತನಿಂದ ಸದಾ ಕಾಲ ಇಲ್ಲಿ ಶುಭ ಸಮಾರಂಭಗಳಾದ ಜವಳ, ನಾಮಕರಣ, ಮದುವೆ ಶಾಸ್ತ್ರಗಳು ಜರುಗುತ್ತವೆ.
ಬಂದ ಭಕ್ತರಿಗೆ ಊಟದ ವ್ಯವಸ್ಥೆ ಲಭ್ಯವಿರುತ್ತದೆ.
ಹೊಸದುರ್ಗದಿಂದ ಬೆಳಗ್ಗೆಯಿಂದಲೇ ಆಟೋ ವ್ಯವಸ್ಥೆ ಲಭ್ಯವಿರುತ್ತದೆ. ದೇವಾಲಯದ ಹತ್ತಿರದ ತನಕ ಸಿಸಿ ರಸ್ತೆ ಇದ್ದು ವಾಹನವನ್ನು ದೇವಾಲಯದ ತನಕ ಕೊಂಡೊಯ್ಯಬಹುದು.
















