ಬೆಂಗಳೂರು: ಖಾಸಗಿ ಕಂಪನಿಯೊಂದರ ಡೇಟಾ ಅನಾಲಿಸ್ಟ್ ಹುದ್ದೆಗೆ ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂಬ ಷರತ್ತು ವಿಧಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಕಂಪನಿ ಈ ಷರತ್ತನ್ನು ಹಿಂಪಡೆದಿದೆ.ಜನರಲ್ ಮ್ಯಾನೇಜರ್ ಹಾಗೂ ಎಚ್‌ಆರ್ ಟೀಮ್ ಹೆಡ್ ಆಗಿರುವ ಬಾಲ ಎಂ. ಅವರು ಎರಡು ದಿನಗಳ ಹಿಂದೆ ಲಿಂಕ್ಡ್‌ಇನ್‌ನಲ್ಲಿ ಪ್ರಕಟಿಸಿದ್ದ ಉದ್ಯೋಗಾವಕಾಶದ ಪೋಸ್ಟ್‌ನಲ್ಲಿ ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು ಹಾಗೂ ನಮಕ್ಕಲ್‌ನಲ್ಲಿ ಕಾರ್ಯಾಚರಿಸುವ ಕಂಪನಿಯ ಡೇಟಾ ಅನಾಲಿಸ್ಟ್ ಹುದ್ದೆಗೆ ‘ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಬೇರೆ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಾರದು’ ಎಂದು ಉಲ್ಲೇಖಿಸಿದ್ದರು.
ಈ ಉದ್ಯೋಗ ಪ್ರಕಟಣೆಯಲ್ಲಿನ ಷರತ್ತನ್ನು ಪ್ರಶ್ನಿಸಿ ಕರಣ್ ಗೌಡ ಎಂಬುವರು ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದರು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಕಂಪನಿಯೊಂದು ಈ ರೀತಿಯ ರಾಜ್ಯವಾರು ತಾರತಮ್ಯದ ಷರತ್ತು ವಿಧಿಸಿರುವುದು ಸರಿಯಲ್ಲ ಎಂದು ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಕಾರ್ಮಿಕ ಇಲಾಖೆ, ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಗ್ರಹಿಸಿದ್ದಾರೆ. ಟೀಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಉದ್ಯೋಗ ಪ್ರಕಟಣೆಯಲ್ಲಿದ್ದ ವಿವಾದಾತ್ಮಕ ಷರತ್ತನ್ನು ಕಂಪನಿ ಹಿಂಪಡೆದಿದೆ.
ಬೆಂಗಳೂರಿನ ಹಲವು ಖಾಸಗಿ ಕಂಪನಿಗಳಲ್ಲಿ ಅರ್ಹತೆ ಹಾಗೂ ಪ್ರತಿಭೆ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳನ್ನು ಕಡೆಗಣಿಸಿ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಕೇಳಿಬರುತ್ತಿವೆ.ಉದ್ಯೋಗ ನೇಮಕಾತಿಯಲ್ಲಿ ಅರ್ಹತೆ ಹಾಗೂ ಕೌಶಲ್ಯಕ್ಕೆ ಆದ್ಯತೆ ನೀಡುವುದರ ಜೊತೆಗೆ ಸ್ಥಳೀಯ ಅಭ್ಯರ್ಥಿಗಳಿಗೂ ಸೂಕ್ತ ಅವಕಾಶ ಕಲ್ಪಿಸಬೇಕು. ಯಾವುದೇ ರೀತಿಯ ರಾಜ್ಯವಾರು ತಾರತಮ್ಯ ನಡೆಯದಂತೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.











