Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ: ತಪ್ಪಿದರೆ ಪಡಿತರ ಸೌಲಭ್ಯ ಸ್ಥಗಿತ?

---Advertisement---

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ ದುರ್ಬಳಕೆ ತಡೆಗಟ್ಟುವ ಹಾಗೂ ಫಲಾನುಭವಿಗಳ ಮಾಹಿತಿಯನ್ನು ನಿಖರಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇ-ಕೆವೈಸಿ (E-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಇ-ಕೆವೈಸಿ ಪೂರ್ಣಗೊಳಿಸಲು ಸೆಪ್ಟೆಂಬರ್ 30ರವರೆಗೆ ಗಡುವು ನೀಡಲಾಗಿದೆ.

ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿಗಳ ಕುರಿತು ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ಪಡಿತರ ಸೌಲಭ್ಯ ಮುಂದುವರಿಯಲು ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಇ-ಕೆವೈಸಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸ್ಪಷ್ಟನೆ ನೀಡಿದೆ. ಎಲ್ಲಾ ಪಡಿತರ ಚೀಟಿದಾರರಿಗೂ ಜಾತಿ ಪ್ರಮಾಣ ಪತ್ರ ಕಡ್ಡಾಯವಲ್ಲ. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯದ ಫಲಾನುಭವಿಗಳು ಮಾತ್ರ ಅಗತ್ಯವಿದ್ದಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು.ಇತರ ಫಲಾನುಭವಿಗಳು ಇ-ಕೆವೈಸಿ ಮಾಡಿಸುವಾಗ ಆಧಾರ್ ಕಾರ್ಡ್, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಅಗತ್ಯವಿರುವ LPG ಗ್ರಾಹಕರ ಪುಸ್ತಕ ಸೇರಿದಂತೆ ಸಂಬಂಧಿತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ನಿವಾಸಿಗಳು ಹತ್ತಿರದ GBA ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಈ ಸೇವೆ ಪಡೆಯಬಹುದು.
ಕೊನೆಯ ದಿನಗಳಲ್ಲಿ ಹೆಚ್ಚಿನ ಜನರು ಒಂದೇ ವೇಳೆ ಪ್ರಕ್ರಿಯೆ ಕೈಗೊಳ್ಳುವುದರಿಂದ ಸರ್ವರ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಫಲಾನುಭವಿಗಳು ಕೊನೆಯ ದಿನದವರೆಗೆ ಕಾಯದೆ ಮುಂಚಿತವಾಗಿಯೇ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಇ-ಕೆವೈಸಿ ವೇಳೆ ಬೆರಳಚ್ಚು (Fingerprint) ಹೊಂದಾಣಿಕೆಯಾಗದಿದ್ದರೆ, ಆಧಾರ್ ಕೇಂದ್ರದಲ್ಲಿ ಅಗತ್ಯವಿರುವ ಅಪ್‌ಡೇಟ್ ಮಾಡಿಸಿಕೊಂಡು 15 ದಿನಗಳ ನಂತರ ಮತ್ತೆ ಇ-ಕೆವೈಸಿ ಪ್ರಕ್ರಿಯೆ ಕೈಗೊಳ್ಳಬಹುದು.ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಫಲಾನುಭವಿಗಳು Google Play Storeನಿಂದ ‘Mera Ration’ ಮತ್ತು ‘Aadhaar FaceRD’ ಆಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಲಭ್ಯವಿರುವ ಆನ್‌ಲೈನ್ ವ್ಯವಸ್ಥೆಯ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬಹುದು.

ಇ-ಕೆವೈಸಿ ಪೂರ್ಣಗೊಂಡಿದೆಯೇ ಎಂಬುದನ್ನು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.kar.nic.inನಲ್ಲಿ ಪರಿಶೀಲಿಸಬಹುದು.
ವೆಬ್‌ಸೈಟ್‌ನಲ್ಲಿ ‘ಇ-ಸೇವೆಗಳು’ ಆಯ್ಕೆ ಮಾಡಿಕೊಂಡು ನಿಮ್ಮ 12 ಅಂಕಿಯ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ RC Status ಪರಿಶೀಲಿಸಬೇಕು. ಫಲಾನುಭವಿಗಳ ಹೆಸರಿನ ಮುಂದೆ ‘Success’ ಎಂದು ಹಸಿರು ಬಣ್ಣದಲ್ಲಿ ಕಾಣಿಸಿಕೊಂಡರೆ ಇ-ಕೆವೈಸಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದರ್ಥ.ಆದ್ದರಿಂದ ಪಡಿತರ ಚೀಟಿದಾರರು ಸೆಪ್ಟೆಂಬರ್ 30ರ ಗಡುವಿನೊಳಗೆ ತಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿಕೊಂಡು, ಅಗತ್ಯವಿದ್ದರೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now