Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ : ಹಿರಿಯೂರಿನ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಪರಿಚಯ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ಹಿರಿಯೂರು ನಗರದ ಮಧ್ಯಭಾಗದಲ್ಲಿರುವ ಶ್ರೀ ತೇರುಮಲ್ಲೇಶ್ವರಸ್ವಾಮಿ ದೇವಾಲಯವು ಚಿತ್ರದುರ್ಗ ಜಿಲ್ಲೆಯ ಒಂದು ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿಸ್ತಶಕ ಸುಮಾರು 15 -16ನೇ ಶತಮಾನದಲ್ಲಿ ವಿಜಯನಗರ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಈಶ್ವರಲಿಂಗವನ್ನು ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿದ್ದು,ಇದನ್ನು ದಕ್ಷಿಣಕಾಶಿ ಕ್ಷೇತ್ರ ಎನ್ನಲಾಗುತ್ತದೆ.

 

ಗರ್ಭಗೃಹ, ಅರ್ಧಮಂಟಪ, ಅಂತರಾಳ,ನವರಂಗ, ಮಹಾಮಂಟಪ, ನಂದಿಮಂಟಪ, ದೀಪಸ್ತಂಭ ಮತ್ತು ಪ್ರಾಕಾರ ಗೋಡೆಯನ್ನು ಒಳಗೊಂಡಂತೆ ಮಹಾದ್ವಾರಗಳು ಇರುವ ವಿಶಾಲವಾದ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವರು. ಅಂತರಾಳದಲ್ಲಿ ನಂದಿಯ ಶಿಲ್ಪವಿದೆ. ಅಂತರಾಳದ ಮುಂಬದಿಯ ಅರ್ಧಮಂಟಪದ ಇಕ್ಕೆಲಗಳಲ್ಲಿ ಎರಡು ಕೋಣೆಗಳಿವೆ. ಬಲಬದಿಯಲ್ಲಿ ಪಾರ್ವತಿಯನ್ನು ಪ್ರತಿಷ್ಠಾಪಿಸಿರುವರು.

 

ದೇವಾಲಯದ ಒಳಗಡೆ ಕೆಲವು ಶಿಲ್ಪಗಳಿದ್ದು,ಅದರಲ್ಲಿ ಕೈ ಮುಗಿದು ಕುಳಿತ ಹೇಮರೆಡ್ಡಿ ಮಲ್ಲಮ್ಮ ಹಾಗೂ ಭಕ್ತ ಶಿಲ್ಪಗಳು ಇವೆ. ಈ ಭಕ್ತಶಿಲ್ಪವನ್ನು ಕೆಂಚಪ್ಪನಾಯಕ ಎಂದು ಕರೆಯುತ್ತಾರೆ. ಮಹಾಮಂಟಪದಲ್ಲಿ ವಿಜಯನಗರ ಶೈಲಿಯ ನೆಗೆಯುತ್ತಿರುವ ಸಿಂಹಗಳ ಹಾಗೂ ಸಂಗೀತದ ಕಂಬಗಳಿವೆ.ಈ ಕಂಬಗಳ ಚತುರ್ಮುಖಗಳಲ್ಲಿ ವಿವಿಧ ಬಗೆಯ ಶಿಲ್ಪಗಳಿವೆ.ಅವುಗಳಲ್ಲಿ ನಂದಿ, ಯತಿ, ಹಂಸ,ವಾದ್ಯಗಾರ ನರ್ತಕಿ,ಯೋಗಿ, ಆಂಜನೇಯ, ವ್ಯಾಳ,ಸಿಂಹ,ಭೈರವ ಹಾಗೂ ಭಕ್ತರ ಉಬ್ಬು ರಚನೆಗಳಿವೆ.ಈ ಮಂಟಪಕ್ಕೆ ಮೂರು ಕಡೆಗಳಿಂದ ಪ್ರವೇಶವಿದೆ. ಸುತ್ತಲೂ ಕಕ್ಷಾಸನವನ್ನು ನಿರ್ಮಿಸಿರುವವರು. ಮಹಾ ಮಂಟಪದ ಮೇಲ್ಛಾವಣಿಯಲ್ಲಿ ವಿವಿಧ ಬಗೆಯ ವರ್ಣಚಿತ್ರಗಳನ್ನು ಕಪ್ಪು,ಕೆಂಪು,ಬೂದು ಬಣ್ಣಗಳಲ್ಲಿ ಚಿತ್ರಿಸಿದ್ದಾರೆ.
ಅವುಗಳಲ್ಲಿ ಕಿರಾತಾರ್ಜನೀಯ ಮೊದಲಾದ ಪ್ರಸಂಗಗಳನ್ನು ಚಿತ್ರಿಸಿರುವರು. ದೇವಾಲಯದ ಪೂರ್ವದ ಮಹಾಗೋಪುರದ ಎದುರಿನಲ್ಲಿ 40 ಅಡಿ ಎತ್ತರದ ಉಯ್ಯಾಲೆ ಕಂಬವಿದೆ.

ಈ ದೇವರಿಗೆ ಮೊದಲು ಮಲ್ಲೇಶ್ವರ ಎಂಬ ಹೆಸರು ಇದ್ದಿತು. ಒಮ್ಮೆ ಕಡೂರು ತಾಲ್ಲೂಕು ಯಗಟಿ ಗ್ರಾಮದ ಮಲ್ಲೇಶ್ವರ ದೇವರ ತೇರು ನಡೆಯುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಭೀಕರ ಮಳೆಗಾಳಿ ಬಂದು ಜಗತಿಯ ತೇರು ವೇದಾವತಿ ನದಿಯಲ್ಲಿ ತೇಲುತ್ತಾ ಬಂದು ಹಿರಿಯೂರಿನ ವಿಶಾಲ ನದಿ ದಡದಲ್ಲಿ ನಿಂತಿತಂತೆ. ನಂತರ ಆ ತೇರನ್ನು ಹಿರಿಯೂರಿನ ಮಲ್ಲೇಶ್ವರನ ಗುಡಿಯಲ್ಲಿ ಇರಿಸಿದರಂತೆ.ಅಂದಿನಿಂದ ಹಿರಿಯೂರಿನ ಮಲ್ಲೇಶ್ವರನಿಗೆ ತೇರುಮಲ್ಲೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಕಣಶಿಲೆಯ ದೀಪಸ್ತಂಭ :
ದೇವಾಲಯದ ಮುಂದೆ ಸುಮಾರು ಐವತ್ತು ಅಡಿಗಳೆತ್ತರದ ಕಣಶಿಲೆಯ ದೀಪಸ್ತಂಭವನ್ನು ನಿಲ್ಲಿಸಿದ್ದಾರೆ.ಇದರಲ್ಲಿ ಕೈಮುಗಿದು ನಿಂತ ಭಕ್ತ, ಆನೆಯ ಉಬ್ಬುಶಿಲ್ಪಗಳಿವೆ.ಕೆಳಗಡೆ ವೀರಗಲ್ಲು, ವೀರಭದ್ರ, ನಾಗರಕಲ್ಲುಗಳನ್ನು ಇಡಲಾಗಿದೆ. ಬಲಿಪೀಠಕ್ಕೆ ಪ್ರತ್ಯೇಕ ಮಂಟಪವನ್ನು ನಿರ್ಮಿಸಿದ್ದಾರೆ. ಈ ದೀಪಸ್ತಂಭವನ್ನು ಆಂಧ್ರಪ್ರದೇಶದಿಂದ ಮಾಡಿಸಿಕೊಂಡು ತರುವಾಗ ತಾಲೂಕಿನ ಅಂಬಲಗೆರೆ ಗ್ರಾಮದಲ್ಲಿ ಬಿದ್ದು ಎರಡು ತುಂಡುಗಳಾಯಿತಂತೆ. ಅದರಲ್ಲಿ ಒಂದು ತುಂಡನ್ನು ಅಂಬಲಗೆರೆ ರಂಗನಾಥಸ್ವಾಮಿಯ ದೀಪಸ್ತಂಭವನ್ನಾಗಿಸಿ ಇನ್ನೊಂದು ತಂದು ಇಲ್ಲಿ ಸ್ಥಾಪಿಸಿದ್ದಾರೆ ಎನ್ನಲಾಗುತ್ತದೆ.ಜಾತ್ರೆಯ ಮರುದಿನ ಸಮಯದಲ್ಲಿ ಇದರ ಮೇಲೆ ಕರ್ಪೂರದಾರತಿ ಹಾಗೂ ಹಣತೆಯನ್ನು ಹಚ್ಚುತ್ತಾರೆ.

ರಥೋತ್ಸವ :
ಭಾರತ ಹುಣ್ಣಿಮೆಯಂದು ಇಲ್ಲಿ ವಿಜೃಂಭಣೆಯಿಂದ ರಥೋತ್ಸವ ಜರುಗುತ್ತದೆ. ತೇರಿನ ದಿನ 40 ಅಡಿ ಉದ್ದದ ಮಲ್ಲಮ್ಮನ ಶಿವಧನಸ್ಸನ್ನು ವೇದಾವತಿ ನದಿಗೆ ಒಯ್ದು ಗಂಗಾಪೂಜೆ ನೆರವೇರಿಸಿ ನಂತರ ರಥೋತ್ಸವ ನಡೆಸಲಾಗುತ್ತದೆ. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...