ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 27 : ಪ್ರತಿ ಮನೆಗಳಿಂದ ಸಂಗ್ರಹಿಸುವ ಹಸಿ ಕಸವನ್ನು ರೈತರ ಹೊಲಗಳಲ್ಲಿ ಗೊಬ್ಬರವಾಗಿ ಬಳಸಿದಾಗ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೆ ಗುಣ ಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮ ಹಾನಗಲ್ ತಿಳಿಸಿದರು.
ಐಐಎಚ್‍ಎಸ್. ನಗರಸಭೆ ಹಾಗೂ ಎಸ್‍ಬಿಐ. ಫೌಂಡೇಶನ್ ವತಿಯಿಂದ ನಗರಸಭೆಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಮಣ್ಣಿನ ಫಲವತ್ತತೆ ವೃದ್ದಿಸಲು ನಗರಸಭೆ ಮತ್ತು ರೈತರ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಮನೆಗಳಿಂದ ಉತ್ಪತ್ತಿಯಾಗುವ ಹಸಿ ಕಸವನ್ನು ಸಂಗ್ರಹಿಸಿ ರೈತರ ಜಮೀನುಗಳಿಗೆ ಉಚಿತವಾಗಿ ನೀಡಲಾಗುವುದು. ಇದಕ್ಕೆ ಐಐಎಚ್‍ಎಸ್. ಸಿಬ್ಬಂದಿ ರೈತರ ಹೊಲಗಳಿಗೆ ಭೇಟಿ ನೀಡಿ ಗೊಬ್ಬರವನ್ನಾಗಿ ಮಾರ್ಪಡಿಸಿ ರಾಸಾಯನಿಕ ಗೊಬ್ಬರಗಳನ್ನು ಬಳಸದಂತೆ ರೈತರಿಗೆ ಮನವರಿಕೆ ಮಾಡಿಕೊಡಲಿದೆ. ಎಸ್‍ಬಿಐ. ಫೌಂಡೇಶನ್ ಫಂಡ್ ನೀಡಲಿದೆ. ರೈತರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳುವಂತೆ ಅರಿವು ಮೂಡಿಸಿದರು.
ಕಸ ವಿಲೇವಾರಿ ನಗರದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಣ ಕಸ, ಹಸಿ ಕಸ ಬೇರೆಯಾಗಬೇಕು. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಮಸ್ಯೆಗಳು ಕೂಡ ಜಾಸ್ತಿಯಾಗುತ್ತಿವೆ. ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸುವ ಬದಲು ಹಸಿ ಕಸವನ್ನು ಬಳಸಿದರೆ ಕಲುಷಿತ ವಾತಾವರಣ ತಡೆಯಲು ನೆರವಾಗಲಿದೆಯಲ್ಲದೆ ಪೌಷ್ಠಿಕಾಂಶವುಳ್ಳ ಆಹಾರಗಳನ್ನು ಬೆಳೆಯಬಹುದು ಇದಕ್ಕೆ ನಗರಸಭೆ, ರೈತರು ಹಾಗೂ ಎಸ್‍ಬಿಐ. ಫೌಂಡೇಷನ್ ಮತ್ತು ಐಐಎಚ್‍ಎಸ್. ಮೇಲೆ ಮಹತ್ತರ ಜವಾಬ್ದಾರಿಯಿರುವುದರಿಂದ ಎಲ್ಲರೂ ಕೈಜೋಡಿಸಿದರೆ ಯೋಜನೆ ಪರಿಣಾಮಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಹವಾಮಾನ ವಿಜ್ಞಾನ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಪ್ರೊ.ಆರ್.ಕೃಷ್ಣನ್ ಮಾತನಾಡಿ ಪರಿಸರ ಮಾಲಿನ್ಯ ನಗರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆಯಲ್ಲದೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ರೈತರು ಹಸಿ ಕಸವನ್ನು ತಮ್ಮ ಹೊಲಗಳಿಗೆ ಬಳಸಿದರೆ ಈ ಯೋಜನೆ ಹೆಚ್ಚು ಉಪಯುಕ್ತವಾಗಲಿದೆ. ಮುಂದಿನ ಎರಡು ವರ್ಷಗಳಲ್ಲಿ 150 ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ನಗರಸಭೆ ಪೌರಾಯುಕ್ತರಾದ ಎಸ್.ಲಕ್ಷ್ಮಿ ಮಾತನಾಡಿ ಚಿಕ್ಕಬಳ್ಳಾಪುರದಲ್ಲಿ ಮೊದಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಮೇಲಾಧಿಕಾರಿಗಳು ನಮ್ಮ ಮೇಲೆ ನಂಬಿಕೆಯಿಟ್ಟು ಈ ಯೋಜನೆಯನ್ನು ಚಿತ್ರದುರ್ಗ ಜಿಲ್ಲೆಗೆ ತಂದಿದ್ದಾರೆ. ಹಸಿ ಕಸ, ಒಣ ಕಸ ವಿಂಗಡಣೆ ನಗರಸಭೆಗೆ ದೊಡ್ಡ ಸವಾಲಾಗಿದೆ. ನಾಲ್ಕು ಬಗೆಯಲ್ಲಿ ಕಸವನ್ನು ಬೇರ್ಪಡಿಸಬೇಕು. ಎರಡು ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿರುವ ಈ ಯೋಜನೆ ಫಲಪ್ರದವಾಗಬೇಕಾದರೆ ನಗರಸಭೆಯೊಂದಿಗೆ ರೈತರು ಕೈಜೋಡಿಸುವಂತೆ ಮನವಿ ಮಾಡಿದರು.
ಎಸ್‍ಬಿಐ. ಫೌಂಡೇಶನ್‍ನ ಸಹಾಯಕ ಯೋಜನಾ ಮ್ಯಾನೇಜರ್ ಅನುಭೂತಿ ತ್ರಿಪಾಠಿ ಮಾತನಾಡುತ್ತ ರೈತರು ಹಸಿ ಕಸವನ್ನು ತಮ್ಮ ಹೊಲಗಳಿಗೆ ಬಳಸಿಕೊಂಡರೆ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಇದರಿಂದ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ನಗರಸಭೆ ಮೇಲೆ ಗುರುತರ ಜವಾಬ್ದಾರಿಯಿದೆ. ಈ ಯೋಜನೆ ದೇಶಕ್ಕೆ ಮತ್ತು ರಾಜ್ಯಕ್ಕೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.
ಪೌರಾಡಳಿತ ನಿರ್ದೇಶನಾಲಯದ ಪ್ರತಿನಿಧಿ ಮಧುಸೂದನ್ ಮಾತನಾಡಿ 2014 ರಲ್ಲಿ ಕೇಂದ್ರ ಸರ್ಕಾರ ಸ್ವಚ್ಚ ಭಾರತ್ ಮಿಷನ್ ಯೋಜನೆಯನ್ನು ಜಾರಿಗೆ ತಂದು 4300 ಕೋಟಿ ರೂ.ಗಳನ್ನು ರಾಜ್ಯಕ್ಕೆ ಬಿಡುಗಡೆಗೊಳಿಸಿದೆ. ಹಸಿ ಕಸ, ಒಣ ಕಸವನ್ನು ಬೇರ್ಪಡಿಸಲು ನಗರಸಭೆಗೆ ಕಷ್ಟವಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಇದು ಫಲಪ್ರದವಾಗಲಿ ಎಂದು ಹಾರೈಸಿದರು.
ನಗರಸಭೆ ಪರಿಸರ ಇಂಜಿನಿಯರ್ ಜಾಫರ್ ಮಾತನಾಡುತ್ತ ಹಸಿ ಕಸವನ್ನು ಸಂಗ್ರಹಿಸಿ ಘನತ್ಯಾಜ್ಯ ಘಟಕಕ್ಕೆ ಹಾಕುತ್ತಿದ್ದೇವೆ. ಇದರಿಂದ ಸಮಸ್ಯೆಗಳು ಕಡಿಮೆಯಾಗಿ ನಗರಸಭೆಗೆ ಅನುಕೂಲವಾಗುತ್ತಿದೆ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆಗೊಳಿಸಿ ಮಣ್ಣಿನ ಫಲವತ್ತತೆಯನ್ನು ವೃದ್ದಿಸುವುದಕ್ಕಾಗಿ ರೈತರು ಹಸಿ ಕಸವನ್ನು ತಮ್ಮ ಹೊಲಗಳಿಗೆ ಹಾಕಿ ಸಾವಯವ ಗೊಬ್ಬರಗಳನ್ನು ಬಳಸಲು ಜಿಲ್ಲೆಯ ರೈತರನ್ನು ಪ್ರೋತ್ಸಾಹಿಸಿ ಎಂದು ಹೇಳಿದರು.
ರೈತ ವೀರೇಂದ್ರ ಮಾತನಾಡಿ ಚಿತ್ರದುರ್ಗವನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಂಡಿರುವುದು ನಮಗೆಲ್ಲಾ ಖುಷಿಯಾಗಿದೆ. ಹಸಿ ಕಸವನ್ನು ಹೊಲಗಳಿಗೆ ಬಳಸಿಕೊಳ್ಳಲು ನಗರಸಭೆಯೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಗಾಜು, ಕಬ್ಬಿಣ ಹೀಗೆ ಮಣ್ಣನ್ನು ಹಾಳು ಮಾಡುವಂತಹ ವಸ್ತುಗಳು ಹಸಿ ಕಸದಲ್ಲಿ ಸೇರ್ಪಡೆಯಾಗದಂತೆ ಎಚ್ಚರ ವಹಿಸಿ ಅಚ್ಚುಕಟ್ಟಾಗಿ ನಮಗೆ ತಲುಪಿಸದರೆ ಸಾಕು ಎಂದು ನಗರಸಭೆಗೆ ವಿನಂತಿಸಿದರು. ಗೋಪಾಲ್ ಯೋಜನೆ ಕುರಿತು ಮಾತನಾಡಿದರು. ರೈತರು, ನಗರಸಭೆ ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















