ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಾಮಗಿರಿ ಹೋಬಳಿಯಲ್ಲಿರುವ ಕಾಲ್ಕೆರೆ ಗ್ರಾಮವು ಪ್ರಾಚೀನ ಮಾನವನು ಬಳಸುತ್ತಿದ್ದ ನವಶಿಲಾಯುಧಗಳ ತಾಣವಾಗಿದೆ.


ಇಲ್ಲಿ ಈ ಶಿಲಾಯುಧಗಳನ್ನು ಸಂರಕ್ಷಿಸಿ ದೇವರ ಸ್ವರೂಪ ನೀಡಿ ದೇವಾಲಯ, ಪುಟ್ಟ ಗುಡಿಗಳನ್ನು ನಿರ್ಮಿಸಿ ಅವುಗಳ ರಕ್ಷಣೆಗೆ ಇಲ್ಲಿನ ಜನರು ಮುಂದಾಗಿರುವುದು ಒಂದು ಅನುಕರಣೀಯ ಹಾಗೂ ಮಾದರಿ ನಡೆಯಾಗಿದೆ. ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ಮಾನವನು ಬಳಸುತ್ತಿದ್ದ ಕಲ್ಲಿನ ಆಯುಧಗಳನ್ನು ಇಲ್ಲಿ ಜೋಪಾನವಾಗಿ ಜೋಡಿಸಿಡಲಾಗಿದೆ.
ತಲೆತಲಾಂತರ ಗಳಿಂದ ನೂರಾರು ವರ್ಷಗಳಿಂದ ಇವುಗಳಿಗೆ ಇಲ್ಲಿ ರಕ್ಷಣೆ ನೀಡಲಾಗಿದೆ ಹಾಗೂ ಇವುಗಳನ್ನು ದೇವರ ಸಮಾನವಾಗಿ ಆರಾಧಿಸಿ ಪ್ರತಿ ವರ್ಷ ಪೂಜೆ,ಹಬ್ಬ ಜಾತ್ರೆಗಳನ್ನು ನೆರವೇರಿಸಲಾಗುತ್ತದೆ.
ಕಾಲ್ಕೆರೆ ಗ್ರಾಮದ ಕೋಟೆ ಪ್ರದೇಶದ ಮಾಸ್ತಮ್ಮ ಗುಡಿಯಲ್ಲಿ ನವಶಿಲಾಯುಗದ ಶಿಲಾ ಕೊಡಲಿಗಳನ್ನು ಶೋಧಿಸಿ ಅಧ್ಯಯನ ನಡೆಸಲಾಗಿದೆ. ಇದರ ಜೊತೆಗೆ ಗ್ರಾಮದ ತುಪ್ಪದಹಳ್ಳಿಗೆ ಹೋಗುವ ರಸ್ತೆಯ ಬಲಭಾಗದ ಜಮೀನಿನಲ್ಲಿ ಇರುವ 150 ವರ್ಷಗಳಷ್ಟು ಹಳೆಯದಾದ ಆಲದಮರದ ಪಕ್ಕದಲ್ಲಿ ಇರುವ ಕಡವಾಳ ಚೌಡಮ್ಮ ದೇವಾಲಯದ ಒಳಗಡೆ ಕೂಡ ನವಶಿಲಾಯುಗದ ಕಲ್ಲಿನ ಕೊಡಲಿಗಳನ್ನು ಸ್ಥಳೀಯರು ದೇವರೆಂದು ಪೂಜಿಸುತ್ತಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ರಾಜ್ಯ ಮತ್ತು ಪುರಾತತ್ವ ಇಲಾಖೆ ಮುಖ್ಯಸ್ಥರಾದ ಡಾ. ಎಸ್ ವೈ ಸೋಮಶೇಖರ್ ರವರು ಈ ಭಾಗದಲ್ಲಿ ವ್ಯಾಪಕ ಅಧ್ಯಯನ, ಕ್ಷೇತ್ರ ಕಾರ್ಯ ನಡೆಸಿ ಗ್ರಾಮದ ಲಂಬಾಣಿಹಟ್ಟಿ ಗೆ ಹೋಗುವ ಎಡಭಾಗದಲ್ಲಿ ಇರುವ ಮರಡಿ ಗುಡ್ಡವೇ ಶಿಲಾಮಾನವನ ಶಿಲಾ ನೆಲೆಯಾಗಿತ್ತು ಎಂದು ಖಚಿತಪಡಿಸಿದ್ದಾರೆ.
ಇಂದಿಗೂ ಇಲ್ಲಿ ನಾಯಕ ಸಮುದಾಯದ ಕಲ್ಲುಬಾಣ ಹಾಗೂ ಸ್ಮಶಾನವನ್ನು ಕಾಣಬಹುದು. ಇಲ್ಲಿರುವ ನವಶಿಲಾಯುಗದ ಶಿಲಾಯುಧಗಳ ಕಾಲ ಸರಿಸುಮಾರು 5000 ವರ್ಷಗಳಷ್ಟು ಹಿಂದಿನದು. ಇಲ್ಲಿ ಒಟ್ಟು 15 ಕಲ್ಲಿನ ಕೊಡಲಿಗಳನ್ನು ಕಾಣಬಹುದು.ಇವು ತಾಲೂಕಿಗೆ ಸಂಬಂಧಿಸಿದಂತೆ ಅತಿ ಅಪರೂಪದ ಐತಿಹಾಸಿಕ ಸ್ಮಾರಕಗಳಾಗಿವೆ. ಇಂತಹ ಅಮೂಲ್ಯ ಸ್ಮಾರಕಗಳನ್ನು ರಕ್ಷಿಸುವ ಅಗತ್ಯತೆ ಇರುತ್ತದೆ.
ಸ್ಥಳೀಯರಿಗೆ ಮೊದಲಿಗೆ ಇವು ಪ್ರಾಚೀನ ಮಾನವನ ಶಿಲಾಯುಧಗಳು ಎಂಬ ಮಾಹಿತಿ ಇರಲಿಲ್ಲ. ಆದರೆ ಗ್ರಾಮದ ಕೆಲವು ಆಸಕ್ತ ಯುವಕರು ಇದನ್ನು ಗಮನಿಸಿ ಸಂಶೋಧಕರ ಗಮನಕ್ಕೆ ತಂದಾಗ ಅವುಗಳ ಐತಿಹಾಸಿಕ ಹಾಗೂ ಪ್ರಾಚೀನ ಮಹತ್ವವನ್ನು ತಿಳಿದು ಮತ್ತಷ್ಟು ತಮ್ಮ ಊರಿನ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಅಕ್ಕ ಪಕ್ಕದಲ್ಲಿ ಯಾವುದೇ ಹಳ್ಳಗಳು, ನೀರಿನ ಮೂಲ ಇಲ್ಲದಿದ್ದರೂ ಪ್ರಾಚೀನ ಮಾನವನು ಇಲ್ಲಿ ನೆಲೆಯನ್ನಾಗಿ ಈ ಸ್ಥಳವನ್ನು ಆಯ್ಕೆ ಮಾಡಿರುವುದು ಬಹಳಷ್ಟು ಆಶ್ಚರ್ಯ ತರಿಸುತ್ತದೆ. ಏಕೆಂದರೆ ನೀರಿನ ಸೆಳೆ ಇರುವ ಕಡೆ ಮಾತ್ರ ಮಾನವನು ಜೀವನ ನಡೆಸುತ್ತಿದ್ದನು. ಈ ಗ್ರಾಮದ ಮತ್ತಷ್ಟು ಕಡೆ ಇಂತಹ ಶಿಲಾಯುಧಗಳು ಇರುವ ಬಗ್ಗೆ ಸ್ಥಳೀಯರು ಹೇಳಿದರು ಮತ್ತಷ್ಟು ವ್ಯಾಪಕ ಅಧ್ಯಯನ, ಕ್ಷೇತ್ರಕಾರ್ಯ ಹಾಗೂ ಸ್ಥಳದ ಪರಿಶೀಲನೆ ಅಗತ್ಯತೆ ಇರುತ್ತದೆ ಬಹಳಷ್ಟು ಕಡೆಗಳಲ್ಲಿ ಈಗ ಕೃಷಿ ಚಟುವಟಿಕೆ ಕಾರ್ಯಗಳು ನಡೆದಿರುವ ಕಾರಣಕ್ಕೆ ಇಂತಹ ಶಿಲಾಯುಧಗಳು ಮಣ್ಣಿನ ಭಾಗಕ್ಕೆ ಸೇರಿರುವ ಸಾಧ್ಯತೆ ಇರುತ್ತದೆ.
ಇಂತಹ ಶಿಲಾಯುಧಗಳನ್ನು ಮಾನವನು ಬೇಟೆಗಾಗಿ, ಪ್ರಾಣಿಗಳ ಚರ್ಮ ಸುಲಿಯಲು, ಬಳ್ಳಿಗಳನ್ನು -ಗಿಡಗಳನ್ನು ಕತ್ತರಿಸಲು,ಮಾಂಸವನ್ನು ತುಂಡು ಮಾಡಲು,ಮರವನ್ನು ಕಡಿಯಲು.. ಈ ಕಲ್ಲಿನ ಕೊಡಲಿಗಳಿಗೆ ಮರದ ತುಂಡಿನ ಕಾವನ್ನು ಕಟ್ಟಿ ಕೊಡಲಿಯಂತೆ ಬಳಸುತ್ತಿದ್ದನು. ಕಲ್ಲಿನ ಕೊಡಲಿಯ ತುದಿ ಭಾಗದಲ್ಲಿ ಚೂಪಾಗಿರುವುದನ್ನು ಹಾಗೂ ಬಳಕೆ ಮಾಡಿದ ಬಗ್ಗೆ ಕುರುಹುಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಪ್ರಾಚೀನ ಕಾಲದಿಂದಲೂ ಕಾಲ್ಕೆರೆಯು ಒಂದು ಜನವಸತಿ ಪ್ರದೇಶವಾಗಿರುವುದು ಹೆಮ್ಮೆ ಮೂಡಿಸುವ ವಿಚಾರವಾಗಿದೆ. ಹತ್ತಿರದಲ್ಲಿ ದುಮ್ಮಿ ಗುಡ್ಡ ಹಾಗೂ ಗ್ರಾಮದಲ್ಲಿರುವ ಮರಡಿಗುಡ್ಡ ಬಿಟ್ಟರೆ ದೂರದವರೆಗೂ ವಿಶಾಲ ಸಮತಟ್ಟು ಭೂ ಪ್ರದೇಶವೇ ಸುತ್ತಲೂ ಕಂಡು ಬರುತ್ತದೆ. ಬೆಟ್ಟ ಗುಡ್ಡಗಳ ಸಾಲು ಕಿಲೋಮೀಟರ್ ಗಟ್ಟಲೆ ದೂರದಲ್ಲಿರುವುದು ಗಮನಿಸಬಹುದು.
ಗ್ರಾಮದಿಂದ ಪೂರ್ವಕ್ಕೆ ಎರಡು ಕಿಲೋಮೀಟರ್ ದೂರದಲ್ಲಿ ಹಿರೇಹಳ್ಳ ಹರಿಯುತ್ತದೆ. ಅದು ಬಿಟ್ಟರೆ ಇಲ್ಲಿ ಯಾವುದೇ ನೀರಿನ ಮೂಲಗಳಿಲ್ಲ. ಇಂತಹ ಕಲ್ಲಿನ ಕೊಡಲಿಗಳನ್ನು ಯಾರು ಹೇಗೆ ಸಂಗ್ರಹಿಸಿ ಗುಡಿಯಲ್ಲಿ ತಂದು ಇಟ್ಟಿರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಆದರೆ ಇವುಗಳು ಪೂಜನೀಯ ಸ್ಥಾನವನ್ನು ಪಡೆದು ಪ್ರಾಚ್ಯ ಮತ್ತು ಪುರಾತತ್ವ ದೃಷ್ಟಿಯಿಂದ ಒಂದು ಅನುಕರಣೀಯ ನಡೆಯಾಗಿದೆ. ಇದೇ ರೀತಿ ಚಿತ್ರದುರ್ಗ ತಾಲ್ಲೂಕು ತುರುವನೂರು ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಕೂಡ ಪ್ರಾಚೀನ ಶಿಲಾಯುಧಗಳನ್ನು ಮಂದಿರ ಕಟ್ಟಿ ಮಾರಿಕಾಂಬಾ ದೇವಿ ಎಂದು ಪೂಜಿಸಲಾಗುತ್ತದೆ.















