ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಚಿತ್ರದುರ್ಗವೆಂದರೆ ನಮಗೆ ತಕ್ಷಣ ಕೋಟೆ, ಕಲ್ಲು ಬಂಡೆಗಳು, ಬೆಟ್ಟ ಗುಡ್ಡಗಳೇ ಕಣ್ಣ ಮುಂದೆ ಬರುತ್ತದೆ.ಚಿತ್ರ-ವಿಚಿತ್ರ ಆಕಾರದಲ್ಲಿ ನಿಂತಿರುವ ಕಲ್ಲುಗಳು ಕಂಡುಬರುತ್ತವೆ. ಒಂದೊಂದು ಕಲ್ಲು ಒಂದೊಂದು ಆಕಾರದಂತೆ ಕಾಣುತ್ತವೆ .ಅದರಲ್ಲೂ ಪ್ರಕೃತಿಯ ಗುರುತ್ವಾಕರ್ಷಣೆಯ ಬಲವನ್ನು ಮೀರಿಸಿ ನಿಂತಂತೆ ಇರುವ ಕೆಲವು ಬೃಹತ್ ಕಲ್ಲುಗಳು ಸಾವಿರಾರು ಟನ್ ತೂಕವಿದೆ.ಆ ಕಲ್ಲುಗಳು ಎಂದಿಗೂ ಮಿಸುಕಾಡಿದಂತೆ ಕಾಣುವುದಿಲ್ಲ.ಸಾವಿರಾರು ವರ್ಷಗಳಿಂದ ಈ ಕಲ್ಲುಗಳು ಹಾಗೇ ನಿಂತಿರುವುದು ಪ್ರಕೃತಿಯ ವೈಶಿಷ್ಟ್ಯವೇ ಸರಿ.ಇಂತಹ ಒಂದು ಕಲ್ಲು ಒಂಟೆ ಕತ್ತಿನ ಕಲ್ಲು.


ಒಂಟೆ ಕತ್ತಿನ ಕಲ್ಲು:
ಚಿತ್ರದುರ್ಗದ ಕೋಟೆಯ ಆಗ್ನೇಯ ದಿಕ್ಕಿನಲ್ಲಿರುವ ಕರುವರ್ತಿ ಈಶ್ವರ ಮಂದಿರದಿಂದ ದಾಟಿ ಮುಂದಕ್ಕೆ ಶ್ರೀರಾಮದೇವರ ಒಡ್ಡಿನ ಪಶ್ಚಿಮದ ಮೇಲ್ಭಾಗದ ಕೋಟೆ ಹತ್ತಿ ಸಿಗುವ ಸಣ್ಣ ಅಗಸೆ ಬಾಗಿಲಿನಿಂದ ಇಲ್ಲಿಗೆ ತಲುಪಬಹುದು. ಕುರುಚಲು ಗಿಡಗಳ ಮಧ್ಯದ ಕಾಲುದಾರಿಯಲ್ಲಿ ಸಾಗಿ ಮೇಲ್ಭಾಗದ ಮತ್ತೊಂದು ಅಗಸೆ ಬಾಗಿಲಿನಿಂದ ಹೋಗಬೇಕು.ಅಲ್ಲಿಯವರೆಗೆ ಮೆಟ್ಟಿಲು, ಕಾಲುದಾರಿಯಿದೆ.ಎಲ್ಲಿಯೂ ದಾರಿ ತಪ್ಪುವ ಸಾಧ್ಯತೆ ಇಲ್ಲ.ಒಂಟೆ ಕತ್ತಿನಂತೆ ಆಕಾರ ಹೊಂದಿರುವ ಕಾರಣ ಈ ಕಲ್ಲಿಗೆ ಈ ಹೆಸರು ಬಂದಿದೆ. ಕಾಲುದಾರಿಯಿಂದ ಮಾತ್ರವೇ ಇಲ್ಲಿಗೆ ತಲುಪಬೇಕು.
ದೂರದಿಂದ ನೋಡಿದರೆ ಸಣ್ಣ ಕಲ್ಲಿನಂತೆ ಕಂಡರೂ ಹತ್ತಿರಕ್ಕೆ ಹೋದಾಗ ಬೃಹತ್ ಬಂಡೆಯನ್ನು ನಾವು ಗಮನಿಸಬಹುದು.ಮೇಲ್ಭಾಗದಲ್ಲಿ ತಲುಪಿದಾಗ ಅತಿ ಜಾಗರೂಕತೆಯಿಂದ ಹತ್ತಿರ ಹೋಗಬೇಕು.ಒಬ್ಬ ಮನುಷ್ಯ ತಳ್ಳಲು ಸಾಧ್ಯವಾದಂತೆ ಕಂಡರೂ ನೈಜವಾಗಿ ಅದು ಅಸಾಧ್ಯ.ಇದರ ಎದುರೇ (ಪಕ್ಕದಲ್ಲಿ)ಕಾವಲು ಗೋಪುರ ಹಾಗೂ ಬತೇರಿ ಇದೆ.ಇಲ್ಲಿಂದ ಸುತ್ತಮುತ್ತಲಿನ ಚಿತ್ರದುರ್ಗ ನಗರ, ಚೇಳುಗುಡ್ಡ,ಗುಡ್ಡದ ರಂಗವ್ವನ ಗುಡ್ಡ, ಚಳ್ಳಕೆರೆ ರಸ್ತೆ, ಕೋಟೆಯ ಒಳ ಆವರಣ,ಹಿಂದಿನ ಅರಮನೆಯ ಪಾಳು ಬಿದ್ದ ನಿವೇಶನ, ತುಪ್ಪದ ಕೊಳ…ನೋಡಬಹುದು.ಮೇಲಿನಿಂದ ಕಾಣುವ ಸುಂದರ ವಾತಾವರಣ ಕಣ್ಣಿಗೆ ಖುಷಿ, ಮನಸ್ಸಿಗೆ ಆನಂದ ತರುತ್ತದೆ. ಹತ್ತಿ ಬಂದ ಆಯಾಸ ಬೀಸುವ ತಂಪಾದ ಗಾಳಿಗೆ ಮರೆತು ಹೋಗುತ್ತದೆ.ಜೊತೆಗೆ ಹತ್ತಾರು ವಿವಿಧ ಜಾತಿಯ ಪಕ್ಷಿಗಳು, ಮೊಲ, ಕಾಡು ಕೋಳಿ, ನವಿಲು,ಮುಂಗುಸಿ, ಉಡ….ಚಾರಣ ಮಾಡುವಾಗ/ ಹತ್ತುವಾಗ ನೋಡಬಹುದು. ಇದಕ್ಕಾಗಿ ಬೆಳಗಿನ ಹೊತ್ತು ಹೋಗಬೇಕು. ಚಾರಣಕ್ಕೆ 3-4 ಜನರು ಹೋದರೆ ಅನುಕೂಲ.
ಹೀಗೆ ಇಂತಹ ಸೂಕ್ಷ್ಮ ಜಾಗದಲ್ಲಿ ಕಲ್ಲು ನಿಂತಿರುವುದು ವಿಸ್ಮಯವಾಗಿವೆ ,ಆಶ್ಚರ್ಯ ತರಿಸುತ್ತದೆ .ಇಂತಹ ವಿಚಿತ್ರ ಆಕಾರದಲ್ಲಿ ನಿಂತ ಕಲ್ಲುಗಳನ್ನು ನೋಡಲು ಕಾಲ್ನಡಿಗೆಯಲ್ಲಿ ಸುತ್ತಮುತ್ತಲಿನ ಪ್ರದೇಶದ ಚಾರಣ ಮಾಡಿದರೆ ಕಣ್ಣಿಗೆ ಬೀಳುತ್ತದೆ.


















