Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹಸಿರ ಸೊಬಗಿನ ಕಕ್ಕೇರು

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಜೋಗಿಮಟ್ಟಿ ಚಿತ್ರದುರ್ಗ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಗಿರಿಧಾಮ ಮತ್ತು ಅರಣ್ಯ ಪ್ರದೇಶವಾಗಿದೆ.
ಈ ಮೀಸಲು ಅರಣ್ಯವು ಚಿತ್ರದುರ್ಗದಿಂದ ದಕ್ಷಿಣಕ್ಕೆ 10 ಕಿಲೋಮೀಟರ್ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಹರಡಿಕೊಂಡಿದೆ.
ವಿಶಾಲವಾಗಿ ಹರಡಿರುವ ಅರಣ್ಯ ಪ್ರದೇಶದಲ್ಲಿ ಅತ್ಯಂತ ಎತ್ತರದ ಗಿರಿ ಸಾಲುಗಳು ಕಂಡುಬರುತ್ತವೆ. ಮಳೆಗಾಲದಲ್ಲಿ ಮಲೆನಾಡನ್ನು ಮೀರಿಸುವಂತಹ ಹಸಿರು ವಾತಾವರಣ ಇಲ್ಲಿ ಕಾಣುತ್ತದೆ.

ಕಿಲೋಮೀಟರ್ ಗಟ್ಟಲೆ ಅತ್ಯಂತ ಎತ್ತರದ ಗಿರಿಸಾಲುಗಳು ಕಂಡುಬಂದರೂ ಅಲ್ಲಿ ಯಾವುದೇ ಎತ್ತರದ ಮರಗಿಡಗಳು ಬೆಳೆಯುವುದಿಲ್ಲ. ಕುರುಚಲು ಕಾಡು ಅದರಲ್ಲೂ 15 ಅಡಿಗಿಂತ ಕಡಿಮೆ ಎತ್ತರದ ಮರಗಳೇ ಇಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಭೌಗೋಳಿಕ ಲಕ್ಷಣ ಹಾಗೂ ಇಲ್ಲಿನ ಪರಿಸರವೇ ಇದಕ್ಕೆಲ್ಲ ಪ್ರಮುಖ ಕಾರಣವಾಗಿದೆ. ಇಂತಹ ಗಿರಿ ಸಾಲುಗಳ ನಡುವೆ ನಡಿಗೆಯ ಚಾರಣ ಒಂದು ನೆನಪಿನಲ್ಲಿ ಉಳಿಯುವಂತಹ ಸುಂದರ ಅನುಭವ ನೀಡುತ್ತದೆ.
ರಾಜ್ಯದ ಅತ್ಯಂತ ತಂಪಾದ ಸ್ಥಳಗಳಲ್ಲಿ ಇದು ಒಂದಾಗಿದೆ.
ಸಸ್ಯವರ್ಗವು ಒಣಕಾಡು ಮತ್ತು ಪೊದೆಸಸ್ಯವಾಗಿದೆ.

ಜೋಗಿಮಟ್ಟಿ ಅರಣ್ಯ ಮೀಸಲು ಪ್ರದೇಶವು 30 ರಿಂದ 50 ಗ್ರಾಮಗಳ ನಡುವೆ ಆಸುಪಾಸಿನಲ್ಲಿ ಹರಡಿಕೊಂಡಿದ್ದರೂ ಕಕ್ಕೇರು, ದೊಡ್ಡಾಪುರ..ಈ ಎರಡು ಗ್ರಾಮಗಳು ಜೋಗಿಮಟ್ಟಿಯ ಮಧ್ಯ ಭಾಗದಲ್ಲಿ ನೆಲೆಗೊಂಡಿದ್ದು ಸಂಪೂರ್ಣ ಗ್ರಾಮ ಜೋಗಿಮಟ್ಟಿ ಗಿರಿ ಸಾಲುಗಳ ನಡುವೆ ಒಂದು ಪುಟ್ಟ ದ್ವೀಪದಂತೆ ಕಂಡುಬರುತ್ತದೆ.
ಕಕ್ಕೇರು ಗ್ರಾಮವು ಮಳೆಗಾಲ ಹಾಗೂ ಅದರ ನಂತರದ ದಿನಗಳಲ್ಲಿ ಊಟಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಯಾವುದೋ ಒಂದು ಪುಟ್ಟ ಜಾಗದಂತೆ ಗೋಚರಿಸುತ್ತದೆ.
ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರು ಹೊದ್ದ ಗಿರಿ ಸಾಲುಗಳು, ನಯನ ಮನೋಹರ ಹಸಿರ ದೃಶ್ಯಾವಳಿ ಎಂತಹವರನ್ನು ಮಂತ್ರ ಮುಗ್ಧಗೊಳಿಸಿ ಇಲ್ಲಿನವರು ಅದೆಷ್ಟು ಅದೃಷ್ಟವಂತರು ಎಂಬ ಭಾವನೆ ಮೂಡಿಸಿ ಬಿಡುತ್ತದೆ. ಮಲೆನಾಡಿನಲ್ಲಿ ಇಂತಹ ಜಾಗವಿದ್ದರೆ ನಮಗೆ ಅಂತಹ ವಿಶೇಷತೆ ಏನು ಕಂಡುಬರುವುದಿಲ್ಲ.
ಆದರೆ ಚಿತ್ರದುರ್ಗದಂತಹ ಸಂಪೂರ್ಣ ಬರಪೀಡಿತ ಹಾಗೂ ತೀವ್ರ ಮಳೆ ಕೊರತೆಯ ಪ್ರದೇಶದಲ್ಲಿ ಇಂತಹ ಹಸಿರು ತುಂಬಿದ ಭೂ ಸ್ವರ್ಗ ಇರುವುದು ಆಶ್ಚರ್ಯ ತರಿಸುತ್ತದೆ.

ಜಿಲ್ಲೆಯ ಅತ್ಯಂತ ಎತ್ತರದ ಗಿರಿ ಶಿಖರ ಭೈರಪ್ಪನ ಗುಡ್ಡ (3,863 ಅಡಿ ), ಈಚಲು ಗುಡ್ಡ (3804ಅಡಿ ) ಕಕ್ಕೇರು ಗ್ರಾಮದ ಮುಂದುವರಿದ ಭಾಗವಾದ ದೊಡ್ಡಾಪುರ ಗ್ರಾಮದಲ್ಲಿ ಕಂಡು ಬರುತ್ತದೆ. ಆಕಾಶಕ್ಕೆ ಎದೆಯೊಡ್ಡಿ ನಿಂತ ಬೃಹತ್ ಬೆಟ್ಟಗಳು ನೋಡುಗರನ್ನು ಚಕಿತಗೊಳಿಸುತ್ತದೆ.
ವರ್ಷದ ಆರಕ್ಕೂ ಅಧಿಕ ತಿಂಗಳು ಇಲ್ಲಿ ಮಂಜು ಮುಸುಕಿರುತ್ತದೆ. ಭೈರಪ್ಪನ ಬೆಟ್ಟದ ಮೇಲೆ ಭೈರವೇಶ್ವರ ಸ್ವಾಮಿಯ ಪಾದಗಳು ಮೂಡಿರುವುದು ಒಂದು ಆಸ್ತಿಕರ ದೈವಿ ತಾಣವಾಗಿದೆ.

ಪ್ರಕೃತಿಯ ಸೌಂದರ್ಯವನ್ನು ಹತ್ತಿರದಿಂದ ನೋಡುವ ಬಯಕೆಯುಳ್ಳವರು ದೂರ ದೂರದ ಊರುಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಹೋಗುವ ಬದಲು ತಮ್ಮ ಚಿತ್ರದುರ್ಗ ತಾಲೂಕಿನಲ್ಲಿಯೇ ಇರುವ ಇಂತಹ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ.

ಸುತ್ತಲೂ ತಂಪಾದ ಗಾಳಿ, ಹಸಿರಿನಿಂದ ಕಂಗೊಳಿಸುವ ಮರಗಿಡಗಳು, ಹಕ್ಕಿಗಳ ಕಲರವ ಮತ್ತು ಮಂಜಿನಿಂದ ಆವೃತವಾದ ಬೆಟ್ಟಗಳು ಮನಸ್ಸಿಗೆ ಅಪಾರ ಸಂತೋಷವನ್ನು ನೀಡುತ್ತವೆ. ಚಿತ್ರದುರ್ಗದಿಂದ ಹೊಳಲ್ಕೆರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಚಿತ್ರದುರ್ಗದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಜಾನುಕೊಂಡ, ಗೊಡಬನಹಾಳು ನಂತರ ಸಿಗುವ ಮಹದೇವನಕಟ್ಟೆ ಗ್ರಾಮದಿಂದಲೇ ಜೋಗಿಮಟ್ಟಿಯ ಸೌಂದರ್ಯ ಅನಾವರಣಗೊಳ್ಳುತ್ತಾ ಸಾಗುತ್ತದೆ. ಇಲ್ಲಿಂದಲೇ ನಾವು ಚಾರಣ ಪ್ರಾರಂಭಿಸಿ ನಡೆಯುತ್ತಾ ಕಕ್ಕೇರು ಗ್ರಾಮಕ್ಕೆ ತಲುಪಬಹುದು. ಗುಂಪಲ್ಲಿ ಹೋದರೆ ಮತ್ತಷ್ಟು ಖುಷಿ ಸಿಗುತ್ತದೆ.‌ ಕಕ್ಕೇರು ಗ್ರಾಮದಿಂದ ಮುಂದುವರೆದು ದೊಡ್ಡಾಪುರ ಗ್ರಾಮಕ್ಕೆ ತಲುಪಿ ಅಲ್ಲಿಂದ ಕೆನ್ನೆಡಲು ಗ್ರಾಮದ ಹಾದಿಯುದ್ಧಕ್ಕೂ ಸಾಗಿದರೆ ಬೆಟ್ಟಸಾಲುಗಳು, ಹಸಿರು ತುಂಬಿದ ವನರಾಶಿ ಯಾವುದೋ ಒಂದು ಸ್ವರ್ಗದ ಊರಿಗೆ ಬಂದಂತೆ ಭಾವನೆ ಮೂಡಿಸಿಬಿಡುತ್ತದೆ.

ಆಸಕ್ತಿಯುಳ್ಳವರು ಗ್ರಾಮದ ಮಾರ್ಗದರ್ಶಕರ ಜೊತೆಗೆ ಭೈರಪ್ಪನ ಬೆಟ್ಟವನ್ನು ಏರಬಹುದು. ಭೈರಪ್ಪನ ಚಾರಣದ ಆರಂಭದಲ್ಲಿ ಸಮತಟ್ಟಾದ ದಾರಿಯಲ್ಲಿ ನಡೆಯುತ್ತಾ ನಿಧಾನವಾಗಿ ಬೆಟ್ಟದ ಮೇಲಕ್ಕೆ ಸಾಗಬೇಕು. ದಾರಿ ಏರುತ್ತಿದ್ದಂತೆ ದೇಹದಲ್ಲಿ ಆಯಾಸ ಕಾಣಿಸಿಕೊಳ್ಳುತ್ತದೆ. ಆದರೆ ಸುತ್ತಲಿನ ಪ್ರಕೃತಿ ಸೌಂದರ್ಯವು ಆ ಆಯಾಸವನ್ನು ಮರೆಸುತ್ತದೆ.

ದಾರಿಯುದ್ದಕ್ಕೂ ಸಿಗುವ ಗಿಡಗಳು, ಕಾಡುಹೂವುಗಳು, ಬಂಡೆಗಳು ಮತ್ತು ವಿವಿಧ ಪಕ್ಷಿಗಳ ನಾದವು ಚಾರಣಿಗರಿಗೆ ಹೊಸ ಅನುಭವವನ್ನು ನೀಡುತ್ತವೆ. ಕೆಲವೆಡೆ ಕಲ್ಲುಬಂಡೆಗಳನ್ನು ಏರಿ, ಕೆಲವೆಡೆ ಇಳಿಜಾರಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾ ಸಾಗಬೇಕಾಗುತ್ತದೆ.
ಬೆಟ್ಟದ ತುದಿಯನ್ನು ತಲುಪಿದಾಗ ಕಾಣುವ ದೃಶ್ಯ ಅತ್ಯಂತ ಮನಮೋಹಕವಾಗಿರುತ್ತದೆ. ಕೆಳಗೆ ಹರಡಿಕೊಂಡಿರುವ ಹಸಿರು ಹೊಲಗಳು, ದೂರದಲ್ಲಿ ಕಾಣುವ ಹಳ್ಳಿಗಳು, ತಿರುವುಮುರುವಾದ ರಸ್ತೆಗಳು ಮತ್ತು ನೀಲಿ ಬಣ್ಣದಲ್ಲಿ ಗೋಚರಿಸುವ ದೂರದ ಬೆಟ್ಟಗಳು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ. ಮೋಡಗಳು ಬೆಟ್ಟಗಳ ನಡುವೆ ತೇಲುತ್ತಿರುವ ದೃಶ್ಯವು ಪ್ರಕೃತಿಯ ಅದ್ಭುತವನ್ನು ಪರಿಚಯಿಸುತ್ತದೆ. ತಂಪಾದ ಗಾಳಿಯನ್ನು ಆಸ್ವಾದಿಸುತ್ತಾ ಅಲ್ಲಿಯೇ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವುದು ಚಾರಣದ ವಿಶೇಷ ಅನುಭವವಾಗಿದೆ. ಬೆಟ್ಟದ ಚಾರಣವು ಕೇವಲ ಮನರಂಜನೆಯಲ್ಲ, ಅದು ಆತ್ಮವಿಶ್ವಾಸ, ಸಹನೆ, ಧೈರ್ಯ ಮತ್ತು ತಂಡಭಾವನೆಯನ್ನು ಬೆಳೆಸುತ್ತದೆ. ಪ್ರಕೃತಿಯನ್ನು ಕಲುಷಿತಗೊಳಿಸದೆ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿಯನ್ನೂ ಇದು ನಮಗೆ ಕಲಿಸುತ್ತದೆ. ಆದ್ದರಿಂದ ಬೆಟ್ಟದ ಚಾರಣವು ಮರೆಯಲಾಗದ ಅಂತಹ ಅದ್ಭುತ ಅನುಭವ ನೀಡುವುದಂತೂ ಖಂಡಿತ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now