Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರ ದೇಗುಲ : ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ.ಸಂತೋಷ್ ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ. ಮೊ : 9342466936

ಸುದ್ದಿಒನ್

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯವು ಪಂಚ ಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರಿಗೆ ಸಮರ್ಪಿತವಾದ ದೇವಾಲಯವಾಗಿದೆ. ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇಸ್ವಾಮಿಯವರ ಎರಡು ದೇವಾಲಯಗಳು ಇವೆ. ಇವುಗಳನ್ನು ಒಳಮಠ ಮತ್ತು ಹೊರಮಠಗಳೆಂದೇ ಕರೆಯುತ್ತಾರೆ. ಅದರಲ್ಲಿ ಈ ದಿನ ನಾವು ಒಳಮಠದ ಬಗ್ಗೆ ಪರಿಚಯ ಮಾಡಿಕೊಳ್ಳೋಣ.

ಒಳಮಠವು ಶ್ರೀ ತಿಪ್ಪೇರುದ್ರ ಸ್ವಾಮಿಯ ಗದ್ದುಗೆಯನ್ನು ಒಳಗೊಂಡ ದೇವಾಲಯವಾಗಿದೆ. ಹೊರಮಠವು ಸಮಾಧಿಯಾದ ಸ್ಥಳವಾಗಿದೆ. ಒಳಮಠದ ದೇವಾಲಯದಲ್ಲಿ ಗರ್ಭಗೃಹ ಅಂತರಾಳ ಸಭಾ ಮಂಟಪ ಮಹಾಮಂಟಪ ಮುಖಮಂಟಪ ಮಹಾದ್ವಾರ ಗೋಪುರ ಮತ್ತು ಪ್ರಾಕರ ಗೋಡೆಗಳನ್ನು ಒಳಗೊಂಡ ಸುಂದರ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಗದ್ದುಗೆಯ ಮೇಲೆ ಶ್ರೀ ತಿಪ್ಪೇರುದ್ರ ಸ್ವಾಮಿಗಳು ಸ್ಥಾಪಿಸಿದರೆಂದು ಹೇಳಲಾಗುವ ಲಿಂಗ ಮತ್ತು ಮುಖವಾಡವಿದೆ. ಗದ್ದುಗೆಯ ಮೇಲೆ ಮಂಟಪವಿದೆ, ಗರ್ಭಗೃಹವವು ಸರಳವಾಗಿದ್ದು ಯಾವುದೇ ಶಿಲ್ಪಗಳಿರುವುದಿಲ್ಲ. ಇಲ್ಲಿನ ಪೂಜೆ ಮಾಡುವವರು ತಿಪ್ಪೇರುದ್ರಸ್ವಾಮಿಯ ಆಪ್ತ ಶಿಷ್ಯರಾದ ಫಣಿಯಪ್ಪನ ವಂಶಸ್ಥರೆಂದು ಹೇಳಲಾಗುತ್ತದೆ. ಮಹಾಮಂಟಪದಲ್ಲಿ ನಾಲ್ಕು ಕಂಬಗಳಿದ್ದು, ಕಂಬಗಳನ್ನು ಬಹುಮುಖಗಳಲ್ಲಿ ಕಡೆಯಲಾಗಿದ್ದು ದಿಂಡಿನ ಮೇಲ್ಭಾಗದಲ್ಲಿ ಪುಷ್ಪ ಬೋದಿಗೆಗಳಿವೆ. ಮಹಾಮಂಟಪದ ಮಧ್ಯದ ನಾಲ್ಕು ಚಿತ್ರಕಾಂಡ ಕಂಬಗಳು ಕಪ್ಪುಶಿಲೆಯವು. ಇವುಗಳಲ್ಲಿ ಮತ್ಸ್ಯಾವತಾರ,ಪದ್ಮ,ವಿಷ್ಣು ಭೈರವ,ಕುದುರೆ ಸವಾರಿಯಲ್ಲಿರುವ ಯೋಧ, ವರಹಾವತಾರ,ಶಿವ -ಪಾರ್ವತಿ, ವೀರ, ನರ್ತನ ಶಿಲ್ಪ, ಸ್ತ್ರೀ ಪುರುಷ,ಆಂಜನೇಯ, ನರಸಿಂಹ ಮೊದಲಾದ ಉಬ್ಬು ಶಿಲ್ಪಗಳಿವೆ. ಮಹಾಮಂಟಪದ ಮೇಲಿನ ಭುವನೇಶ್ವರಿಯನ್ನು ಆಳವಾಗಿ ಕಡೆಯಲಾಗಿದೆ. ಇದರಲ್ಲಿ ಸುಂದರವಾಗಿ ಕಡೆಯಲಾದ ಮಗುಚಿದ ಹೂವಿನ ಮೊಗ್ಗಿನ ರಚನೆ ಇದೆ. ಗರ್ಭಗೃದ ಮೇಲೆ ಚಿಕ್ಕದಾದ ಶಿಖರವಿದ್ದು ಅದರ ಮೇಲೆ ಲೋಹದ ಕಳಸವನ್ನು ಪ್ರತಿಷ್ಠಾಪಿಸಿದ್ದಾರೆ . ದೇವಾಲಯದ ಮುಂಭಾಗದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಸುಂದರವಾದ ಶಿಲ್ಪ ಚಿತ್ರಣಗಳನ್ನು ಒಳಗೊಂಡ ಮಹಾದ್ವಾರದ ಮೇಲೆ ಸುಮಾರು 65 ಅಡಿ ಎತ್ತರದ 5 ಹಂತಗಳಿರುವ ಗೋಪುರವಿದೆ. ಇದರಲ್ಲಿ ಅನೇಕ ಗಾರೆ ಗಚ್ಚಿನ ಶಿಲ್ಪಗಳಿವೆ. ದೇವಸ್ಥಾನದ ಸುತ್ತಲೂ ಎತ್ತರದ ಪ್ರಾಕಾರವನ್ನು ನಿರ್ಮಿಸಲಾಗಿದೆ. ಪ್ರಾಕಾರದ ಮೇಲ್ಭಾಗದ ಕೈಪಿಡಿ ಗೋಡೆಯಲ್ಲಿ ಸುಂದರವಾದ ಅನೇಕ ಬಗೆಯ ಕಥಾನಕ ಪೌರಾಣಿಕ ಗಾರೆಶಿಲ್ಪಗಳನ್ನು ಕಾಣಬಹುದು.

ತಿಪ್ಪೇರುದ್ರ ಸ್ವಾಮಿಯನ್ನು ತಿಪ್ಪೇಸ್ವಾಮಿ,ತಿಪ್ಪಯ್ಯ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಈತನನ್ನು ಕುರಿತು ದಾಖಲೆಗಳಿಗಿಂತ ಹೆಚ್ಚಾಗಿ ಜನರ ಜನಪದ,ನಂಬಿಕೆ, ಆಚರಣೆ,ಸಂಪ್ರದಾಯಗಳಲ್ಲಿ ಹಾಗೂ ಮೌಖಿಕ ಹೇಳಿಕೆಗಳೇ ಹೆಚ್ಚಾಗಿ ಜನರ ಬಾಯಲ್ಲಿ ನಲಿದಾಡುತ್ತಿವೆ. ಈತನು ಕರ್ನಾಟಕದಲ್ಲಿ ಬರುವ ಪಂಚ ಗಣಾಧೀಶ್ವರರಲ್ಲಿ ಒಬ್ಬನಾಗಿರುವನು. ನಾಯಕನಹಟ್ಟಿ ಯನ್ನು ಆಳಿದ ಹಟ್ಟಿ ಪಾಳೇಗಾರರ ಕಾಲದಲ್ಲಿ ಅದರಲ್ಲೂ ಹಟ್ಟಿ ಮಲ್ಲಪ್ಪ ನಾಯಕರ ಕಾಲದಲ್ಲಿ ಅಂದರೆ ಹದಿನಾರನೇ ಶತಮಾನದಲ್ಲಿ ಈ ಯತಿಗಳು ಇಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತದೆ.
ತಿಪ್ಪೇರುದ್ರ ಸ್ವಾಮಿಯ ಪವಾಡ ಪುರುಷನೆಂದು ಅನೇಕ ಪವಾಡಗಳನ್ನು ಮಾಡಿದನೆಂಬುದು ತಿಳಿದು ಬರುತ್ತದೆ. ಈತನ ಮಾಡಿದಷ್ಟು ನೀಡು ಭಿಕ್ಷೆ ಕಾಯಕನಿಷ್ಠೆಗಳು ಈತ ಪ್ರಚಾರ ಪಡಿಸಿದ ಸತ್ಯದ ಮಾರ್ಗಗಳಾಗಿವೆ. ಸತ್ತ ಹೆಮ್ಮೆಯನ್ನು ಬದುಕಿಸುವ ಪವಾಡಗಳನ್ನು ಮಾಡಿದನೆಂದು ಕೂಡ ಹೇಳಲಾಗುತ್ತದೆ.ಅದೇ ಕುರಿತಾದ ಚಿತ್ರಪಟಗಳು ದೇವಾಲಯದಲ್ಲಿ ಹಾಕಲಾಗಿದೆ. ತಿಪ್ಪೇರುದ್ರಸ್ವಾಮಿ ನಾಯಕನಹಟ್ಟಿಗೆ ಬೇರೆ ಕಡೆಯಿಂದ ಬಂದವನು. ಸ್ಥಳೀಯವಾಗಿ ಆತನಿಗೆ ನೆಲೆ ಇರಲಿಲ್ಲ.ನೆಲೆಯನ್ನು ಆಶ್ರಯಿಸಿ ಇಲ್ಲಿನ ಮಾರಮ್ಮನ ಗುಡಿಯನ್ನು ಆಶ್ರಯಿಸಿದನೆಂದು ನಂತರ ತನ್ನ ಬೆತ್ತ ಹಾಗೂ ಜೋಳಿಗೆಯ ಮೂಲಕ ಗುಡಿಯನ್ನು ಆಕ್ರಮಿಸಿ ಮಾರಮ್ಮನನ್ನು ಚಿತ್ರದುರ್ಗ ತಾಲೂಕು ವಡ್ಡನಹಳ್ಳಿಗೆ ಕಳಿಸಿದರಂತೆ. ಈಗಿನ ಒಳಮಠವೇ ಹಿಂದೆ ಮಾರಮ್ಮನ ದೇವಾಲಯವಾಗಿದ್ದ ಬಗ್ಗೆ ಹೇಳಲಾಗುತ್ತದೆ. ಈ ಭಾಗದ ಎಲ್ಲಾ ಜಾತಿ ವರ್ಗಗಳ ದೈವವಾಗಿ ಆರಾಧನೆಗೆ ಒಳಪಟ್ಟಿರುವುದನ್ನು ಕಾಣಬಹುದು. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯು ಈ ಭಾಗದ ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಹಾಗೂ ಮಧ್ಯ ಕರ್ನಾಟಕದ ಬಹುದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಗೆ ಅಕ್ಕಪಕ್ಕದ ಜಿಲ್ಲೆ, ತಾಲೂಕುಗಳು, ಆಂಧ್ರಪ್ರದೇಶ, ತೆಲಂಗಾಣಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಬರುವ ಫಾಲ್ಗುಣ ಮಾಸದ ಚಿತ್ತಾ ನಕ್ಷತ್ರದಂದು ಜಾತ್ರೋತ್ಸವ ನೆರವೇರುತ್ತದೆ.

ಮರುದಿನ ಓಕುಳಿ,ನಂತರ ಬರುವ ಸೋಮವಾರದಂದು ಮರಿಪರಿಸೆ ಆಚರಿಸುವ ಪದ್ಧತಿ ಇಂದಿಗೂ ನಡೆದುಕೊಂಡು ಬರಲಾಗಿದೆ. ದೇವಾಲಯದ ಮುಂದೆ ಮುಂಭಾಗದಲ್ಲಿ ಒಣಕೊಬ್ಬರಿಯನ್ನು ಜಾತ್ರೆ ಹಾಗೂ ಇತರ ಸಂದರ್ಭಗಳಲ್ಲಿ ಹರಕೆ ರೂಪದಲ್ಲಿ ಸುಡಲಾಗುತ್ತದೆ.
ಚಿತ್ರದುರ್ಗ, ಚಳ್ಳಕೆರೆ ಜಗಳೂರು, ಮೊಳಕಾಲ್ಮೂರುಗಳಿಂದ ನೇರ ಬಸ್ ಸಂಪರ್ಕವಿದೆ. ದೇವಾಲಯದ ವತಿಯಿಂದ ಪ್ರತಿದಿನ ಮಧ್ಯಾಹ್ನ ಬಂದ ಭಕ್ತರಿಗೆ ಊಟದ ವ್ಯವಸ್ಥೆ ಇರುತ್ತದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ದೇವಾಲಯದ ವತಿಯಿಂದ ಛತ್ರದ ಹಾಗೂ ಸಮುದಾಯ ಭವನಗಳ ವ್ಯವಸ್ಥೆ ಹಾಗೂ ಬಂದ ಭಕ್ತರಿಗೆ ವಸತಿ ಸೌಲಭ್ಯಗಳ ಬೃಹತ್ ವಸತಿ ಸಮುಚ್ಚಯವಿದೆ.

*ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠ*
ನಾಯಕನಹಟ್ಟಿ ಗ್ರಾಮದ ಚಿಕ್ಕ ಕೆರೆಯ ಮುಂದೆ ಗ್ರಾಮದ ಉತ್ತರಕ್ಕೆ ಜಗಲೂರು ರಸ್ತೆಯಲ್ಲಿರುವ ಈ ದೇವಾಲಯವು 18ನೇ ಶತಮಾನದಲ್ಲಿ ನಿರ್ಮಿತವಾಗಿರುವ ಸಮಾಧಿ ಸ್ಥಳವಾಗಿದೆ. ಗರ್ಭಗೃಹ ಸಭಾ ಮಂಟಪ ಮತ್ತು ಪ್ರಾಕಾರ ಗೋಡೆಗಳಿಂದ ಕೂಡಿರುವ ದೇವಾಲಯವಿದು. ಗರ್ಭಗೃಹದಲ್ಲಿ ಶಿವಲಿಂಗ ಮತ್ತು ಇತ್ತೀಚಿಗೆ ಸ್ವಾಮಿಯ ಛಾಯಾಚಿತ್ರ ಇಟ್ಟು, ಆರಾಧಿಸಲಾಗುತ್ತದೆ. ಇಂಡೋ ಸಾರ್ಸೇನಿಕ್ ಶೈಲಿಯಲ್ಲಿ ಈ ದೇವಾಲಯದ ಮೇಲ್ಭಾಗಕ್ಕೆ ಗುಮ್ಮಟಾಕಾರದ ಶಿಖರ ನಿರ್ಮಿಸಲಾಗಿದೆ. ಪ್ರತಿ ಸೋಮವಾರ ದಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment