Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರ ದೇಗುಲ : ಹೊಸದುರ್ಗದ ಶಬರಿ ವನ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ.ಸಂತೋಷ್ ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ, ಮೊ : 9342466936

 

ರಾಮಾಯಣದ ಸ್ಥಳಗಳ ಕುರುಹುಗಳನ್ನು ಕರ್ನಾಟಕದ ಬಹಳಷ್ಟು ಊರುಗಳಲ್ಲಿ ನಾವು ಕಾಣಬಹುದಾಗಿದೆ. ಕೆಲವು ದಾಖಲೆಗಳಲ್ಲಿ ಇದ್ದರೆ ಕೆಲವು ಜನಪದರ ಬಾಯಲ್ಲಿ ದಾಖಲಿಸಲ್ಪಡುತ್ತದೆ.

ಇಂತಹದ್ದೇ ಸ್ಥಳವು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಮಾಡದಕೆರೆ ಹೋಬಳಿಯ ದೊಡ್ಡಘಟ್ಟ ಗ್ರಾಮದಲ್ಲಿದೆ. ಈ ಸ್ಥಳವು ಸಂಪೂರ್ಣ ಎತ್ತರದ ಗುಡ್ಡಸಾಲು ಹಾಗೂ ಬೆಟ್ಟ ಪ್ರದೇಶಗಳಿಂದ ದಟ್ಟ ಅರಣ್ಯದಿಂದ ಆವರಿಸಿದೆ. ಎಂತಹ ಬಿರು ಬೇಸಿಗೆಯಲ್ಲಿ ಇಲ್ಲಿ ನೆಲವೇ ಕಾಣದಷ್ಟು ಎತ್ತರದ ಗಿಡಮರಗಳು ವ್ಯಾಪಿಸಿದೆ. ಇಂತಹ ಸುಂದರ ಸ್ಥಳದಲ್ಲಿ ಹಿಂದೆ ಶ್ರೀರಾಮ ಹಾಗೂ ಲಕ್ಷ್ಮಣನು ವನವಾಸದ ಕಾಲದಲ್ಲಿ ಸೀತಾಮಾತೆಯನ್ನು ಹುಡುಕುತ್ತಾ ಲಂಕೆಗೆ ಹೋಗುವಾಗ ಆತನ ಬರುವಿಗಾಗಿ ಕಾಯುತ್ತಾ ಆತನ ದರ್ಶನ ಪಡೆಯಲೇಬೇಕೆಂದು ಹಂಬಲಿಸುತ್ತಾ ಇದ್ದ ಶಬರಿಯ ಕಥೆಯನ್ನು ಪ್ರತಿಯೊಬ್ಬರೂ ರಾಮಾಯಣದಲ್ಲಿ ಕೇಳಿರುತ್ತೇವೆ.
ಈ ಶಬರಿಯು ತನ್ನ ಬಾಯಿಯಲ್ಲಿ ಬೋರೆಹಣ್ಣನ್ನು ಕಚ್ಚಿ ತಿಂದು  ಸಿಹಿಯಾಗಿರುವ ಹಣ್ಣನ್ನು ಮಾತ್ರ ಶ್ರೀರಾಮನಿಗೆ ನೀಡುತ್ತಾಳೆ. ಆಗ ಲಕ್ಷ್ಮಣನು ಇದನ್ನು ಆಕ್ಷೇಪಿಸುತ್ತಾನೆ. ಶ್ರೀರಾಮನು ಆಗ ಲಕ್ಷ್ಮಣನನ್ನು ತಡೆದು ನಮಗೆ ಸಿಹಿಯನ್ನು ಮಾತ್ರವೇ ನೀಡಲು ಬಯಸುವವರ ಮನಸ್ಸನ್ನು ಮಾತ್ರ ನಾವು ನೋಡಬೇಕೇ  ಹೊರತು ನೀಡುವ ವಿಧಾನವಲ್ಲ ಎಂದು ಉತ್ತರಿಸಿ ಶಬರಿಯ ಭಕ್ತಿಯನ್ನು ಮೆಚ್ಚುತ್ತಾನೆ.

 

ಶಬರಿವನ:
ದೊಡ್ಡಘಟ್ಟ ಗ್ರಾಮದಿಂದ 2 ಕಿ.ಮೀ ದೂರದ ಅರಣ್ಯದ ಬಳಿ ಇರುವ (ಡಿ.ಮಲ್ಲಾಪುರ ದಿಂದ ಒಂದು ಕಿಲೋಮೀಟರ್ )
ಆವರಣವೇ ರಾಮದೇವರ ತೋಪು. ಆದರೆ ಜನರು ಇದನ್ನು ಶಬರಿವನ ಎಂದು ಕರೆಯುತ್ತಾರೆ.‌ ಹಿಂದೆ ತ್ರೇತಾಯುಗದ ಕಾಲದಲ್ಲಿ ಶ್ರೀರಾಮ,ಲಕ್ಷ್ಮಣ,ಸೀತೆಯು ವನವಾಸದ ಸಮಯದಲ್ಲಿ ಶಬರಿಗೆ ಶ್ರೀರಾಮನು ದರ್ಶನ ನೀಡಿದನೆಂಬ ಐತಿಹ್ಯವಿದೆ. ಪ್ರತಿ ಶನಿವಾರ ಇಲ್ಲಿ ಪೂಜೆಗೆ ಹತ್ತಿರದ ಉರುಗಳ ಬಹಳಷ್ಟು ಭಕ್ತರು ಬರುತ್ತಾರೆ. ಇಲ್ಲಿನ ಆವರಣದಲ್ಲಿ ಒಂದು ಗುಂಡುಕಲ್ಲು ಹಾಗೂ ಬಾಗಿಲ ಬಳಿ ಸೀತಾ, ರಾಮ ,ಲಕ್ಷ್ಮಣರ ವಿಗ್ರಹವಿದೆ.

ಈ ತಾಣವೇ ಶಬರಿಯ ಸಮಾಧಿ ಎನ್ನಲಾಗುತ್ತದೆ.ಇದರ ಹತ್ತಿರವೇ ಗಂಗೆಬಾವಿಯಿದ್ದು,ಇದು ಎಂದಿಗೂ ಬತ್ತಿದ ನಿದರ್ಶನವಿಲ್ಲವೆಂದು ಹೇಳುತ್ತಾರೆ.ಹತ್ತಿರವೇ 200 ವರ್ಷಗಳಷ್ಟು ಹಿಂದಿನ ಬೃಹತ್ ಆಲದ ಮರವಿದೆ.ಇದು ರಾಮಾಯಣ ಕಾಲದ ಪವಿತ್ರ ಸ್ಥಳವೆಂದು ನಂಬಲಾಗುತ್ತದೆ. ಹಿಂದೆ ಇದರ ಬಳಿಯಲ್ಲಿ ಶಬರಿಯ ಮನೆ ಎಂದು ಹೇಳಲಾಗುವ ಜಾಗವಿದೆ.

ಗಿಳಿವಜ್ರ (ವಜ್ಜುರ): ಗ್ರಾಮದಿಂದ ದಕ್ಷಿಣಕ್ಕೆ ಎರಡು ಕಿಲೋಮೀಟರ್ ದೂರದಲ್ಲಿ ಇರುವ ಐತಿಹಾಸಿಕ ಪುಣ್ಯಸ್ಥಳವೇ ಗಿಳಿವಜ್ರ. ಇದನ್ನು ಸಣ್ಣ ವಜ್ರ ಎನ್ನಲಾಗುತ್ತದೆ.
ಇಲ್ಲಿನ ಬಾವಿಯಲ್ಲಿ ಕಾಣಿಸಿಕೊಳ್ಳುವ ಗಂಗಾಮಾತೆಯು ಮುಂದೆ ಅಂತರಗಂಗೆಯಾಗಿ ಹರಿದು ಹತ್ತಿರದ (ದೊಡ್ಡವಜ್ರ) ಹಾಲುರಾಮೇಶ್ವರ ಗಂಗೆಬಾವಿಯಲ್ಲಿ ಕಾಣಿಸಿಕೊಳ್ಳುತ್ತಾಳೆ ಎನ್ನಲಾಗುತ್ತದೆ. ಪಕ್ಕದಲ್ಲಿ 17 ನೇ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾದ ಈಶ್ವರ ದೇವಾಲಯ ಮತ್ತು 2 ಹೊಂಡಗಳಿವೆ.ಇದರ ಬಳಿಯಲ್ಲೇ ಏಳಳ್ಳ ಎಂಬ ಹಳ್ಳವಿದೆ. ಹತ್ತಿರದಲ್ಲೇ 200 ವರ್ಷಗಳಷ್ಟು ಹಳೆಯದಾದ ಬೃಹತ್ ಆಲದ ಮರವಿದೆ.
ಪ್ರತಿ ಶ್ರಾವಣಮಾಸದಲ್ಲಿ ಇಲ್ಲಿ ಪರೇವು ಆಚರಣೆ ಮಾಡಲಾಗುತ್ತದೆ. ಹಿಂದೆ ಇಲ್ಲಿ ಗಿಳಿಗಳ ಸಂಖ್ಯೆ ಅಧಿಕವಾಗಿದ್ದ ಕಾರಣಕ್ಕೆ ಇದಕ್ಕೆ ಗಿಳಿ ವಜ್ರ ಎಂಬ ಹೆಸರು ಬಂದಿದೆ.ಗ್ರಾಮವು ಘಟ್ಟದ‌ (ಗುಡ್ಡ ಸಾಲು) ಬಳಿಯಿದ್ದು, ಅಕ್ಕಪಕ್ಕದ ಜನವಸತಿಗಿಂತ ದೊಡ್ಡದಾಗಿದ್ದ ಕಾರಣಕ್ಕೆ ಈ ಗ್ರಾಮಕ್ಕೆ ದೊಡ್ಡಘಟ್ಟ ಎಂದು ಹೆಸರು ಬಂದಿದೆ.

ದೇವರಗುಡ್ಡ ಸಾಲುಗಳ ಪೂರ್ವಭಾಗದಲ್ಲಿರುವ ಈ ಗ್ರಾಮವು ಸುಂದರವಾದ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತದೆ. ಗ್ರಾಮದ ಸುತ್ತಲಿನ ಗುಡ್ಡ ಸಾಲುಗಳು ಹಾಗೂ ಹಸಿರು ತುಂಬಿದ ತೋಟಗಳ ವನಸಿರಿಯು ಎಂತಹವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಮಳೆಗಾಲದ ನಂತರ ಇಲ್ಲಿನ ಪರಿಸರ ಮಲೆನಾಡನ್ನು ನೆನಪಿಸುತ್ತದೆ. ಉತ್ತಮ ನೀರಿನ ಸೆಲೆಯಿಂದ ಹಾಗೂ ಹರಿದು ಬರುವ ಮೆಕ್ಕಲು ಮಣ್ಣಿನ ಕಾರಣಕ್ಕೆ ಗ್ರಾಮದ ಜಮೀನು ಉತ್ತಮ ಫಲವತ್ತತೆಯಿಂದ ಕೂಡಿದೆ.

ಗ್ರಾಮದ ಹತ್ತಿರ ಬಾರ್ದರೆ ಬಂಡೆ, ಮುತ್ತಿನಕಟ್ಟೆ ,
ದೊಡ್ಡಸಿದ್ದಪ್ಪನ ಕಟ್ಟೆ ,ಹೆಜ್ಜೇನುಕಲ್ಲು,ಹೊಂಗೆಕಟ್ಟೆ.. ಎಂಬ ಗುಡ್ಡದ ಸಾಲುಗಳಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...