ಚಿತ್ರದುರ್ಗ. ಜೂ.17: ಅತಿಸಾರ ಭೇದಿ ನಿಯಂತ್ರಣಕ್ಕೆ ಓಆರ್‍ಎಸ್ ಮತ್ತು ಜಿಂಕ್ ಸೂಕ್ತ ಮದ್ದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ತಾಲೂಕಿನ ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐದು ವರ್ಷದ ಒಳಗಿನ ಮಕ್ಕಳಲ್ಲಿ ಅತಿಸಾರಭೇದಿ ಆಗುವ ಸಾಧ್ಯತೆಯಿದ್ದು, ಅತಿಯಾಗಿ ಮಗು ಕಿರಿಕಿರಿ ಉಂಟು ಮಾಡುವುದು, ಮಗುವಿನ ಕಣ್ಣುಗಳು ಒಳಗೆ ಹೋದಂತೆ ಇರುವುದು, ಮಗುವಿಗೆ ತುಂಬಾ ಬಾಯಾರಿಕೆಯಾಗುವುದು, ಮಗುವಿನ ಹೊಟ್ಟೆಯ ಚರ್ಮವನ್ನು ಚಿವುಟಿ ಎಳೆದುಬಿಟ್ಟಾಗ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರುವುದು ಇವು ನಿರ್ಜಲೀಕರಣದ ಲಕ್ಷಣಗಳಾಗಿದ್ದು, ಇಂತಹ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗೆ ತಕ್ಷಣವೇ ಆಸ್ಪತ್ರೆಗೆ ತೆರಳಬೇಕು ಎಂದರು.

ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷತಾ ಮಾತನಾಡಿ, ಜೂನ್ 16ರಿಂದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಅತಿಸಾರ ಭೇದಿ ಬಗ್ಗೆ ಮಾಹಿತಿ ನೀಡುತ್ತಾ, ಸರ್ಕಾರಿ ಆಸ್ಪತ್ರೆಗಳಲ್ಲಿ ಅತಿಸಾರ ಭೇದಿಗೆ ಓಆರ್‍ಎಸ್ ಮತ್ತು ಜಿಂಕ್ ಮಾತ್ರೆಗಳು ಲಭ್ಯವಿದ್ದು, ಸಾರ್ವಜನಿಕರು ಇವುಗಳ ಪ್ರಯೋಜನ ಪಡೆಯಬೇಕು. ಮಗುವಿಗೆ ಒಆರ್‍ಎಸ್ ಕುಡಿಸುವಾಗ ಮತ್ತು ಎದೆ ಹಾಲು ಉಣಿಸುವಾಗ ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಜನಸಂಖ್ಯಾ ಸ್ಥಿರತೆ ಕಾಪಾಡಲು ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳಾದ ಮಹಿಳೆಯರಿಗೆ ಕಾಪರ್ಟಿ, ಡಿಂಪಾ ಇಂಜೆಕ್ಷನ್, ಛಾಯ, ಮಾಲಾ ಏನ್ ಮಾತ್ರೆಗಳು ಹಾಗೂ ಪುರುಷರಿಗೆ ನಿರೋಧಗಳು ಮತ್ತು ಶಾಶ್ವತ ವಿಧಾನವಾದ ಪುರುಷರಿಗೆ ಎನ್‍ಎಸ್‍ವಿ ಶಸ್ತ್ರ ಚಿಕಿತ್ಸೆ ಲಭ್ಯ ಇದ್ದು, ಇವುಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಓಆರ್‍ಎಸ್ ತಯಾರಿಸುವ ಬಗ್ಗೆ, ಕೈ ತೊಳೆಯುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೃಷ್ಣಪ್ಪ, ಸಿದ್ದೇಶ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಮಮತಾ, ಜಿ.ಆರ್.ಆಶಾ, ಶಾರದಾ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















