ಬೆಂಗಳೂರು.ಜುಲೈ.15: ರಾಜ್ಯದಲ್ಲಿ ತುರ್ತು ವೈದ್ಯಕೀಯ ಸೇವೆಗೆ ಹೊಸ ಚೇತನ್ಯ ನೀಡಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇನ್ನು ಮುಂದೆ ಜೀವ ರಕ್ಷಕ 108 ಆಂಬುಲೆನ್ಸ್ ಕರೆ ಬಂದ ತಕ್ಷಣ ನಿಗದಿತ ಅವಧಿಯಲ್ಲಿ ಸ್ಥಳಕ್ಕೆ ತಲುಪದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ.
ಹೌದು,,ಕರೆ ಸ್ವೀಕರಿಸಿದ ಕೇವಲ 15 ನಿಮಿಷಗಳಲ್ಲಿ ಆಂಬುಲೆನ್ಸ್ ರೋಗಿಯ ಬಳಿ ಇರಬೇಕು, ಇಲ್ಲದಿದ್ದರೆ ಸಂಬಂಧಪಟ್ಟ ಸೇವಾ ಸಂಸ್ಥೆ ಅಥವಾ ಚಾಲಕರಿಗೆ ಬರೋಬ್ಬರಿ 5,000 ರೂಪಾಯಿ ದಂಡ ವಿಧಿಸುವ ಕಠಿಣ ನಿಯಮ ಜಾರಿಗೆ ತರಲು ಸರ್ಕಾರ ಸಜ್ಜಾಗಿದೆ. ಈ ಕುರಿತು ಸ್ವತಃ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ದೇಶದ ಇತರೆ ರಾಜ್ಯಗಳಲ್ಲಿ ಆಂಬುಲೆನ್ಸ್ ತಲುಪಲು ಸಾಮಾನ್ಯವಾಗಿ 20 ನಿಮಿಷಗಳ ಕಾಲಾವಕಾಶ ನೀಡಲಾಗಿರುತ್ತದೆ. ಆದರೆ ಕರ್ನಾಟಕ ಸರ್ಕಾರವು ಸಾರ್ವಜನಿಕರ ಪ್ರಾಣ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈ ಗಡುವನ್ನು 15 ನಿಮಿಷಕ್ಕೆ ಕಡಿತಗೊಳಿಸುವ ಸಾಹಸಕ್ಕೆ ಕೈಹಾಕಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಪೂರಕವಾಗಿ ರಾಜ್ಯಾದ್ಯಂತ ಹಳೆಯ ಹಾಗೂ ಸುಸ್ಥಿತಿಯಲ್ಲಿಲ್ಲದ ಆಂಬುಲೆನ್ಸ್ಗಳನ್ನು ಗುಜರಿಗೆ ಹಾಕಿ, ಅವುಗಳ ಜಾಗಕ್ಕೆ ಹೊಸ ವಾಹನಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದೆ.
ರಾಜಧಾನಿ ಬೆಂಗಳೂರಿನಂತಹ ಗಿಜಿಗುಡುವ ಟ್ರಾಫಿಕ್ ನಗರದಲ್ಲಿ 15 ನಿಮಿಷದ ಈ ಗಡುವು ಅತ್ಯಂತ ಕಠಿಣ ಸವಾಲಾಗಿದೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ. ಇದಕ್ಕಾಗಿ ಸೂಕ್ತ ಮಾರ್ಗ ನಿರ್ವಹಣೆ ಮತ್ತು ಸುಧಾರಿತ ತಂತ್ರಜ್ಞಾನದ ಬಳಕೆಯ ಕುರಿತು ಚಿಂತನೆ ನಡೆಸಲಾಗುತ್ತಿದೆ. ಬೇರೆ ರಾಜ್ಯಗಳಿಗಿಂತ ಭಿನ್ನವಾಗಿ ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ವೈದ್ಯಕೀಯ ನೆರವು ಸಿಗುವಂತೆ ಮಾಡುವುದೇ ಸರ್ಕಾರದ ಮುಖ್ಯ ಉದ್ದೇಶ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ನೂತನ ಕ್ರಾಂತಿಕಾರಿ ನಿಯಮವು ರಸ್ತೆ ಅಪಘಾತ ಹಾಗೂ ಹೃದಯಾಘಾತದಂತಹ ಗಂಭೀರ ಪರಿಸ್ಥಿತಿಗಳಲ್ಲಿ ಸಿಲುಕುವ ನೂರಾರು ಅಮೂಲ್ಯ ಜೀವಗಳನ್ನು ಸಕಾಲದಲ್ಲಿ ಉಳಿಸಲು ದಾರಿಯಾಗಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.







