Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಶುಭಸುದ್ದಿ ; ರಾಜ್ಯದ ವಿವಿಧ ಇಲಾಖೆಗಳ 4,723 ಹುದ್ದೆಗಳ ನೇರ ನೇಮಕಾತಿಗೆ KEA ಅಧಿಸೂಚನೆ ಪ್ರಕಟ

---Advertisement---

ಬೆಂಗಳೂರು.ಜುಲೈ.14: ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದ ಹಾಗೂ ಉಳಿಕೆ ಮೂಲ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಪ್ರತ್ಯೇಕವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 4,723 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇಲಾಖೆ ಮತ್ತು ಹುದ್ದೆಗಳ ವಿವರ:

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ: ಒಟ್ಟು 750 ಭೂಮಾಪಕರು (Surveyors) ಹುದ್ದೆಗಳಿದ್ದು, ಇವುಗಳಿಗೆ ಮಾಸಿಕ ₹37,500 ರಿಂದ ₹76,100 ವೇತನ ಶ್ರೇಣಿ ಇರಲಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ: ಒಟ್ಟು 2,314 ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿದ್ದು, ಇವುಗಳಿಗೂ ₹37,500 ರಿಂದ ₹76,100 ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

ಕಂದಾಯ ಇಲಾಖೆ: ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ಭರ್ತಿಗೆ ಅವಕಾಶವಿದ್ದು, ₹34,100 ರಿಂದ ₹67,600 ವೇತನ ಶ್ರೇಣಿ ಇರಲಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಇಲಾಖೆ: ಒಟ್ಟು 1,087 ಶಿಕ್ಷಕರ ಹುದ್ದೆಗಳಿದ್ದು (ಹಿಂಬಾಕಿ ಹುದ್ದೆಗಳು ಸೇರಿದಂತೆ), ₹54,175 ರಿಂದ ₹99,400 ವರೆಗೆ ಆಕರ್ಷಕ ವೇತನ ಶ್ರೇಣಿ ಇರಲಿದೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೆಳಗಿನಂತೆ ಗಡುವು ನೀಡಲಾಗಿದೆ:

ಗ್ರಾಮ ಆಡಳಿತ ಅಧಿಕಾರಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-07-2026 ಹಾಗೂ ಶುಲ್ಕ ಪಾವತಿಗೆ 31-07-2026 ಕೊನೆಯಾಗಿದೆ.

ಭೂಮಾಪಕರು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-08-2026 ಹಾಗೂ ಶುಲ್ಕ ಪಾವತಿಗೆ 10-08-2026 ಕೊನೆಯಾಗಿದೆ.

ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೇಬಲ್: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-08-2026 ಹಾಗೂ ಶುಲ್ಕ ಪಾವತಿಗೆ 11-08-2026 ಕೊನೆಯಾಗಿದೆ.

ಶಿಕ್ಷಕರು: ಆನ್‌ಲೈನ್ ಅರ್ಜಿ ಸಲ್ಲಿಕೆ ಜುಲೈ 15 ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು 13-08-2026 ಮತ್ತು ಶುಲ್ಕ ಪಾವತಿಗೆ 14-08-2026 ಕೊನೆಯ ದಿನಾಂಕವಾಗಿರುತ್ತದೆ.

ಪರೀಕ್ಷಾ ವಿಧಾನ ಮತ್ತು ಪ್ರಮುಖ ನಿಯಮಗಳು:

ಪರೀಕ್ಷಾ ಮಾದರಿ: ಈ ಎಲ್ಲಾ ಹುದ್ದೆಗಳ ನೇಮಕಾತಿಗಾಗಿ ಆಫ್‌ಲೈನ್ – ಒ.ಎಂ.ಆರ್. (OMR) ಮಾದರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಋಣಾತ್ಮಕ ಮೌಲ್ಯಮಾಪನ (Negative Valuation): ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕ್ಸ್ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದರಷ್ಟು ಅಂದರೆ 0.25 ಅಂಕಗಳನ್ನು ಕಳೆಯಲಾಗುತ್ತದೆ.

5ನೇ ಆಯ್ಕೆ/ವ್ಯತ್ಯಾಸ ಶೇಡ್ ಮಾಡಲು ನಿಯಮ: ಒ.ಎಂ.ಆರ್ ಪತ್ರಿಕೆಯಲ್ಲಿ ಉತ್ತರಿಸದೆ ಇರುವ ಪ್ರಶ್ನೆಗಳಿಗೆ 5ನೇ ಆಯ್ಕೆಯನ್ನು ಶೇಡ್ ಮಾಡುವುದು ಕಡ್ಡಾಯವಾಗಿದೆ. ಇದಕ್ಕೆ ಪರೀಕ್ಷೆಯ ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ 2 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಒಂದು ವೇಳೆ ಯಾವುದೇ ಆಯ್ಕೆಯನ್ನು ಶೇಡ್ ಮಾಡದಿದ್ದರೆ ಅಂತಹ ಪ್ರತಿ ಪ್ರಶ್ನೆಗೂ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ವಯೋಮಿತಿ, ಶೈಕ್ಷಣಿಕ ಅರ್ಹತೆ, ಶುಲ್ಕ ಹಾಗೂ ವರ್ಗವಾರು ಹುದ್ದೆಗಳ ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ (https://cetonline.karnataka.gov.in/kea) ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now