ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ ಎನ್.ತಿಪ್ಪಣ್ಣ ಅವರು ನಿನ್ನೆ (ಜುಲೈ 11ರಂದು) ಬೆಳಿಗ್ಗೆ 5 ಗಂಟೆ ಸುಮಾರಿಗೆ ಬಳ್ಳಾರಿಯ ಗಾಂಧಿನಗರದ ನಿವಾಸದಲ್ಲಿ ತಮ್ಮ 97ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದರು. ಇಂದು ಅವರ ಅಂತ್ಯಕ್ರಿಯೆ ತಾಲ್ಲೂಕಿನ ತುರುವನೂರು ಗ್ರಾಮದ ಅವರ ತೋಟದಲ್ಲಿ ಮಧ್ಯಾನ್ಹ 2: 30 ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಹಲವು ಮಠಾಧೀಶರು, ಪೂಜ್ಯರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಲಾಯಿತು.
ಗ್ರಾಮದ ಅವರ ನಿವಾಸದ ಬಳಿ ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಬೆಳಗ್ಗೆಯಿಂದಲೇ ತುರುವನೂರಿಗೆ ಸಾವಿರಾರು ಜನ ಆಗಮಿಸಿ ಅಗಲಿದ ಜನನಾಯಕನ ಅಂತಿಮ ದರ್ಶನ ಪಡೆದುಕೊಂಡರು. ಅವರು ನಡೆದು ಬಂದ ಹಾದಿಯೇ ಎಲ್ಲರಿಗೂ ಸ್ಪೂರ್ತಿ. ಈ ಸಂದರ್ಭದಲ್ಲಿ ಅವರ ಸಾಧನೆ, ಸಮಾಜಸೇವಾ ಕಾರ್ಯಗಳ ಬಗ್ಗೆ ನೆನೆದ ಜನತೆ ಕ್ಷಣಕಾಲ ಕಣ್ಣೀರಾದರು. ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಡೆದು ಬಂದ ಹಾದಿಯೇ ವೈಶಿಷ್ಟ್ಯ ಎಂಬುದಕ್ಕೆ ಅಂತಿಮ ದರ್ಶನ ಪಡೆದುಕೊಳ್ಳಲು ಗ್ರಾಮಕ್ಕೆ ಬಂದಿದ್ದ ಸಾವಿರಾರು ಜನ ಸಾಕ್ಷಿ ಎಂಬಂತಿತ್ತು.
ಮಧ್ಯಾಹ್ನ ಅವರ ನಿವಾಸದಿಂದ ಹೂಮಾಲೆಗಳಿಂದ ಶೃಂಗರಿಸಲಾದ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅವರ ತೋಟಕ್ಕೆ ಕೊಂಡೊಯ್ಯಲಾಯಿತು. ನಂತರ ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿತು. ಹಿರಿಯ ಜೀವಿಯನ್ನು ಕಳೆದುಕೊಂಡ ಅವರ ಒಡನಾಡಿಗಳು ನೋವು ಹೇಳ ತೀರದಂತಿತ್ತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಚಿವ ಡಿ. ಸುಧಾಕರ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಮಾಜಿ ಸಚಿವರಾದ ಹೆಚ್. ಏಕಾಂತಯ್ಯ ಮತ್ತು ಬಸವರಾಜ್ ಪಾಟೀಲ್ ಅನ್ವರ್, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಟಿ. ರಘುಮೂರ್ತಿ, ವೀರೇಂದ್ರ ಪಪ್ಪಿ, ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ, ತಿಪ್ಪೇಸ್ವಾಮಿ, ಬಳ್ಳಾರಿಯ ಸೋಮಶೇಖರ್ ರೆಡ್ಡಿ, ಕೆ.ಟಿ. ಕುಮಾರಸ್ವಾಮಿ, ಶಂಕರ್ ಬಿದರಿ ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಪ್ರಮುಖ ಗಣ್ಯರು, ಸಮಾಜದ ವಿವಿಧ ಘಟಕಗಳ ಅಧ್ಯಕ್ಷರುಗಳು, ಸದಸ್ಯರುಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದು ಅಗಲಿದ ಮುಖಂಡನಿಗೆ ಅಶ್ರುತರ್ಪಣೆ ಸಲ್ಲಿಸಿದರು.
ನಡೆದು ಬಂದ ದಾರಿ :
ನವೆಂಬರ್ 23,1928 ರಂದು ತಾಲ್ಲೂಕಿನ ತುರುವನೂರಿನಲ್ಲಿ ಜನಿಸಿದ ತಿಪ್ಪಣ್ಣ ಅವರು, ವೃತ್ತಿ ಜೀವನವೂ ಆರು ದಶಕಗಳಿಗೂ ಹೆಚ್ಚು ಕಾಲ ವಿಸ್ತರಿಸಿದೆ. ಈ ಅವಧಿಯಲ್ಲಿ ಎನ್.ತಿಪ್ಪಣ್ಣ ಅವರು ಕರ್ನಾಟಕದ ಕಾನೂನು, ರಾಜಕೀಯ ಮತ್ತು ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡರ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೊಂದಿಗೆ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ. ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದರು. ರಾಮಕೃಷ್ಣ ಹೆಗಡೆ ಅವರ ನಿಕಟವರ್ತಿಯಾಗಿದ್ದ ತಿಪ್ಪಣ್ಣ ಅವರು ಜನತಾದಳ ಟಿಕೆಟ್ ನಲ್ಲಿ ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಆದರೆ ಆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ನಂತರ ಜೆಡಿಎಯುನಲ್ಲಿ ಸೇವೆ ಸಲ್ಲಿಸಿದ್ದರು. ಮುಂದೆ ಜೆಡಿಎಸ್ ನಲ್ಲಿ ತಿಪ್ಪಣ್ಣ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದವರು. 2012ರಲ್ಲಿ ತಿಪ್ಪಣ್ಣ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದರು. ದಶಕಗಳ ಕಾಲ ವೀರಶೈವ ಲಿಂಗಾಯತ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡ ನಂತರ ಅವರು ಈ ಸ್ಥಾನವನ್ನು ವಿಶಿಷ್ಟವಾಗಿ ನಿರ್ವಹಿಸಿದ್ದರು.


















