ಬೆಂಗಳೂರು : ಕರ್ನಾಟಕಕ್ಕೆ ಮುಂಗಾರು ಮಳೆಯ ಅಧಿಕೃತ ಪ್ರವೇಶವಾಗಿದ್ದು, ರಾಜ್ಯದಾದ್ಯಂತ ವರುಣನ ಆರ್ಭಟ ಜೋರಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬಳ್ಳಾರಿ ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ಚರಂಡಿ ನೀರು ನುಗ್ಗಿ ದವಸ-ಧಾನ್ಯಗಳು ನಾಶವಾಗಿವೆ. ಪ್ರಮುಖ ಶೋರೂಮ್ ಒಂದರ ನೆಲಮಹಡಿಗೆ ನೀರು ನುಗ್ಗಿದ್ದರಿಂದ ನೂರಾರು ಬೈಕ್‌ಗಳು ಹಾಗೂ ಜನರೇಟರ್ ಜಲಾವೃತಗೊಂಡಿವೆ. ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದ ರಸ್ತೆಗಳು ಹಾಗೂ ಕಲಬುರಗಿಯ ಸೇಡಂ ಪಟ್ಟಣದ ಮುಖ್ಯ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಕೆಲವು ತಗ್ಗು ಪ್ರದೇಶಗಳ ಮನೆಗಳಿಗೂ ನೀರು ನುಗ್ಗಿದೆ.
ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಹಳ್ಳ ತುಂಬಿ ಹರಿದಿದ್ದರಿಂದ ಮನೆ, ಅಂಗಡಿಗಳು ಹಾಗೂ ಬಸ್ ನಿಲ್ದಾಣದ ಬಳಿಯ ದೇವಸ್ಥಾನದ ಕಟ್ಟಿ ಜಲಾವೃತಗೊಂಡಿದೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ಒಳಗೂ ನೀರು ನುಗ್ಗಿದ್ದರಿಂದ ಕಡತಗಳ ರಕ್ಷಣೆಗೆ ಸಿಬ್ಬಂದಿ ಪರದಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಅಂಡರ್ ಬ್ರಿಡ್ಜ್ ಹಾಗೂ ರಸ್ತೆಗಳು ಮುಳುಗಡೆಯಾಗಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಆವರಣದಲ್ಲಿ ಬೃಹತ್ ಮರ ಬಿದ್ದು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹಲ್ಯಾಳ ರಸ್ತೆಯಲ್ಲಿದ್ದ ಶಿಥಿಲಾವಸ್ಥೆಯ ಎರಡಂತಸ್ತಿನ ಖಾಸಗಿ ಕಚೇರಿ ಕಟ್ಟಡವೊಂದು ನೆಲಕ್ಕುರುಳಿದೆ. ಅದೃಷ್ಟವಶಾತ್ ಘಟನೆಯ ವೇಳೆ ಯಾರೂ ಇಲ್ಲದ ಕಾರಣ ಪ್ರಾಣಹಾನಿ ತಪ್ಪಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಡವಿಬಾವಿ ತಾಂಡಾದಲ್ಲಿ ಸರ್ಕಾರಿ ಶಾಲೆ ಜಲಾವೃತಗೊಂಡು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.









