ಮೊಳಕಾಲ್ಮೂರು: ಬಿ.ಜಿ. ಕೆರೆ ಗ್ರಾಮದ ಬಾರ್ ಒಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಭೇದಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 96,000 ರೂಪಾಯಿ ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 02.08.2026 ರಂದು ಮೊಳಕಾಲ್ಮೂರು ತಾಲ್ಲೂಕಿನ ಬಸವೇಶ್ವರ ನಗರ ಬಿ.ಜಿ. ಕೆರೆ ಗ್ರಾಮದ ನಿವಾಸಿ ಸಿ. ಮಂಜುನಾಥ ತಂದೆ ಚಂದ್ರಣ್ಣ ಅವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ನೀಡಿದ್ದರು. ದಿನಾಂಕ 01.08.2026 ರ ರಾತ್ರಿ 11:00 ಗಂಟೆಯಿಂದ ದಿನಾಂಕ 02.08.2026 ರ ಬೆಳಗಿನ ಜಾವ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಬಿ.ಜಿ. ಕೆರೆ ಗ್ರಾಮದ ಮಾರುತಿ ಬಾರ್ & ರೆಸ್ಟೋರೆಂಟ್ನ ಶಟರ್ ಅನ್ನು ಯಾವುದೋ ಆಯುಧದಿಂದ ಮೇಲಕ್ಕೆ ಎತ್ತಿ, ಹಿಂಭಾಗದಲ್ಲಿ ಇದ್ದ ಶೋ ಕೇಸ್ ಗ್ಲಾಸ್ ಹೊಡೆದು ಒಳಪ್ರವೇಶಿಸಿದ್ದರು. ಬಳಿಕ ಕ್ಯಾಷ್ ಡ್ರಾನಲ್ಲಿದ್ದ 1,00,000 ರೂಪಾಯಿ ನಗದು ಹಣ ಹಾಗೂ ಡಿವಿಆರ್, ಹಾರ್ಡ್ ಡಿಸ್ಕ್ ಮತ್ತು 01 ಕ್ಯಾಮರಾವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಮೊ. ಸಂಖ್ಯೆ 176/2026, ಕಾಲಂ 331(4), 305(J) BNS-2023 ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಚಿತ್ರದುರ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಶಿವಕುಮಾರ್, ಚಳ್ಳಕೆರೆ ಮಾನ್ಯ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ಎಂ.ಜಿ. ಸತ್ಯನಾರಾಯಣರಾವ್ ಹಾಗೂ ಮೊಳಕಾಲ್ಮೂರು ವೃತ್ತದ ಸಿಪಿಐ ಶ್ರೀ ಆರ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಮೊಳಕಾಲ್ಮೂರು ಠಾಣೆಯ ಪಿ.ಎಸ್.ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಹಾಗೂ ಸಿಬ್ಬಂದಿಯವರಾದ ಓಬಣ್ಣ, ಗೋವಿಂದ, ಸತೀಶ್ ಬಿ.ಆರ್., ಚಿದಾನಂದ, ಹರೀಶ, ಬಸವರಾಜ ಹಿರೇಮಠ, ಪ್ರಭುದೇವ ಅವರನ್ನೊಳಗೊಂಡ ತಂಡವು, ರಾಂಪುರ ಠಾಣೆಯ ಪಿ.ಎಸ್.ಐ ಶ್ರೀ ಬಾಹುಬಲಿ ಎಂ. ಪಡನಾಡ, ಶ್ರೀ ಲಕ್ಷ್ಮಿನಾರಾಯಣ ಹಾಗೂ ರಾಂಪುರ ಠಾಣೆಯ ಸಿಬ್ಬಂದಿಯವರ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು.

ದಿನಾಂಕ 03.08.2026 ರಂದು ಅಮುಕುಂದಿ ಗ್ರಾಮದ ಹೊರವಲಯದಲ್ಲಿ ಕಳ್ಳತನದಲ್ಲಿ ಭಾಗಿಯಾಗಿದ್ದ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಯರದಮ್ಮನಹಳ್ಳಿ ಗ್ರಾಮದ ನಿವಾಸಿಗಳಾದ 1] ಹೆಚ್.ಎಸ್. ಶಿವರಾಜ ತಂದೆ ಲೇಟ್ ಶಿವಕುಮಾರ, 2] ಎನ್. ರಾಮಚಂದ್ರ ತಂದೆ ಅಂಜಿನಪ್ಪ ಹಾಗೂ 3] ಯಂಕಪ್ಪ ತಂದೆ ದೊಡ್ಡ ವೆಂಕಪ್ಪ ಎಂಬುವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಬಂಧಿತರಿಂದ ಕಳ್ಳತನ ಮಾಡಿದ್ದ 96,000 ರೂಪಾಯಿ ನಗದು ಹಣ, ಕೃತ್ಯಕ್ಕೆ ಬಳಸಿದ್ದ 02 ಕಟ್ಟರ್ ಹಾಗೂ 01 ಮೋಟಾರ್ ಬೈಕ್ ವಾಹನವನ್ನು ಪೊಲೀಸರು ಅಮಾನತ್ತು ಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು, ಐ.ಪಿ.ಎಸ್ ಅವರು ಶ್ಲಾಘಿಸಿದ್ದಾರೆ.










