ದಾವಣಗೆರೆ; ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಮೀಣ ಭಾಗದ ಜನ ನಲುಗಿ ಹೋಗಿದ್ದಾರೆ. ಎಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಎಷ್ಟೋ ಜನ ಮನೆ ಮಠ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಹಣ ಕೊಡುವಾಗ ಜನರಿಗೆ ಬಡ್ಡಿಯ ಬಗ್ಗೆ ಸರಿಯಾಗಿ ತಿಳಿಸಿ ಹೇಳುವ ಗೋಜಿಗೆ ಹೋಗಲ್ಲ. ಆದರೆ ಅಸಲು ತೀರಿಸಿ, ಬಡ್ಡಿಯನ್ನು ತೀರಿಸಿದರೂ ಮೈಕ್ರೋ ಫೈನಾನ್ಸ್ ನಿಂದ ತೆಗೆದುಕೊಂಡ ಸಾಲ ಮಾತ್ರ ತೀರಲ್ಲ. ಹೀಗಾಗ ಇವರುಗಳ ಕಾಟಕ್ಕೆ ಸರ್ಕಾರವೇ ಒಂದು ಕಾನೂನು ತಂದಿದೆ. ಸುಗ್ರಿವಾಜ್ಞೆ ಮೂಲಕ ಕಾನೂನು ತಂದಿದೆ. ಆದರೂ ಪ್ರಯೋಜನವೇ ಇಲ್ಲದಂತೆ ಆಗಿದೆ.
ದಾವಣಗೆರೆಯ ಚನ್ನಗಿರಿ ತಾಲೂಕಿನ ಶಿವಗಂಗಾಳ ಗ್ರಾಮದಲ್ಲಿರುವ ನಾಲ್ಕು ಕುಟುಂಬಗಳು ಮನೆಗೆ ಬೀಗ ಹಾಕಿ ಊರು ಬಿಟ್ಟಿವೆ. ಅದಕ್ಕೆ ಕಾರಣವೇ ಈ ಮೈಕ್ರೋ ಫೈನಾನ್ಸ್ ಕಂಪನಿಗಳು. ನಾಲ್ಕು ಕುಟುಂಬಗಳು 5 ಫೈನಾನ್ಸ್ ಕಂಪನಿಗಳಲ್ಲಿ ಸುಮಾರು ಸಾಲ ಮಾಡಿದ್ದರು. ಆದರೆ ಕಳೆದ 5 ತಿಂಗಳಿನಿಂದ ಸಾಲಗಾರರ ಕಾಟ ಹೆಚ್ಚಾಗಿದೆಯಂತೆ. ಇದರಿಂದ ಬೇಸತ್ತ ಇಡೀ ಕುಟುಂಬ ಊರು ತೊರೆದಿದೆ.
ಇದೀಗ ಊರು ತೊರೆದ ಕುಟುಂಬದವರನ್ನು ಮತ್ತೆ ಕರೆಸುವ ಪ್ರಯತ್ನವನ್ನ ಸಂಘ ಸಂಸ್ಥೆಗಳು ಮಾಡುತ್ತಿವೆ. ಅದಕ್ಕೂ ಮುನ್ನ ಗ್ರಾಮಕ್ಕೆ ಭೇಟಿ ನೀಡಿದ ರೈತ ಸಂಘ, ಫೈನಾನ್ಸ್ ಸಂಸ್ಥೆಯ ವಿರಿದ್ಧ ಆಕ್ರೋಶ ಹೊರ ಹಾಕಿದೆ. ಬೀಗ ಹಾಕಿದ ಮನೆಗಳ ಮುಂದೆ ನಿಂತು ಫೈನಾನ್ಸ್ ಸಂಸ್ಥೆ ಹಾಗೂ ಸರ್ಕಾರದ ವಿರುದ್ಧ ಬೇಸರ ಹೊರ ಹಾಕಿದೆ. ಕೂಡಲೇ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರ ಸುಗ್ರಿವಾಜ್ಞೆ ತಂದರೂ ಫೈನಾನ್ಸ್ ಕಂಪನಿಗಳಿಗೆ ಭಯವಿಲ್ಲ ಎಂದರೆ ಜನಕ್ಕೆ ಇನ್ನು ಆ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂಬುದೇ ಆಗಿದೆ. ಫೈನಾನ್ಸ್ ತೆಗೆದುಕೊಂಡವರು ಊರು ಬಿಡುವ ಬದಲು ಪೊಲೀಸ್ ಠಾಣೆಯಲ್ಲು ದೂರು ದಾಖಲಿಸಿದ್ದರೆ, ಪೊಲೀಸರೇ ಕ್ರಮ ತೆಗೆದುಕೊಳ್ಳುತ್ತಿದ್ದರು.











