ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 19: ಜಿಲ್ಲೆಗೆ ಭದ್ರೆ ನೀರು ಹರಿಯುತ್ತಿದ್ದು, ಇದರ ಹಿಂದೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟ ನಡೆಸಿದವರು ನಮ್ಮೆಲ್ಲರಿಗೂ ಜೀವದಾನ ಕೊಟ್ಟಿದ್ದಾರೆಂದು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಪಟು ಸಾಧಿಕ್ ಹೇಳಿದರು.
ಜಿಲ್ಲೆಗೆ ಭದ್ರೆ ನೀರು ಪ್ರವೇಶದ ಹಿನ್ನೆಲೆಯಲ್ಲಿ ಭೋವಿ ಭೋವಿಗುರುಪೀಠದಿಂದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಭದ್ರೆ ಸಿಹಿ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವೆಲ್ಲರೂ ಚಿಕ್ಕ ಹುಡುಗರಿದ್ದಾಗಿನಿಂದಲೂ ಭದ್ರಾ ಮೇಲ್ದಂಡೆ ಜಾರಿ ಕುರಿತು ಕೇಳುತ್ತಲೇ ಬಂದಿದ್ದೇವು. ಇದೊಂದು ಸಾಧ್ಯವಿಲ್ಲ, ಜಾರಿಗೊಳ್ಳದ ಯೋಜನೆಯೆಂಬ
ತೀರ್ಮಾನಕ್ಕೆ ಬಂದಿದ್ದೇವು. ಆದರೆ, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಿ.ಕೋದಂಡರಾಮಯ್ಯ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಬಂಜಗೆರೆ ಜಯಪ್ರಕಾಶ್ ಸೇರಿ ಸಾವಿರಾರು ಮಂದಿ ನಿರಂತರ ಹೋರಾಟ ನಡೆಸಿದ ಫಲ ಭದ್ರೆ ನೀರು ಹರಿಯುತ್ತಿದೆ ಎಂದರು.
ನೀರು ಹರಿಯುವ ಪ್ರದೇಶದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಹಸಿರು ವೈಭವ ಉದ್ಭವವಾಗಲಿದೆ. ಆ ಭಾಗದ ರೈತರು, ಜನರ ಬದುಕು ಉನ್ನತಗೊಳ್ಳಲಿದೆ. ಇನ್ನಷ್ಟು ಪ್ರದೇಶಗಳ ಕೆರೆಗಳು
ಭದ್ರಾ ಯೋಜನೆ ವ್ಯಾಪ್ತಿಗೆ ಸೇರಿ ಇಡೀ ಜಿಲ್ಲೆ ಹಸಿರುಕರಣಗೊಳ್ಳಬೇಕಿದೆ ಎಂದು ತಿಳಿಸಿದರು.
ಮುಖಂಡ ಕುರುಬಹಳ್ಳಿ ಶಿವಣ್ಣ ಮಾತನಾಡಿ, ಭದ್ರಾ ನೀರು ಕೆಲವೇ ಭಾಗಗಳಿಗೆ ಹರಿಯುತ್ತಿದೆ. ಆದರೆ, ಬಹುಪ್ರದೇಶಗಳು ನೀರಾವರಿ ಯೋಜನೆಯಿಂದ ವಂಚನೆಗೊಳ್ಳಪಟ್ಟಿವೆ. ಈ
ತಾರತಮ್ಯ ಯೋಜನೆ ಸರಿಪಡಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ನಾವೆಲ್ಲರೂ ನಮ್ಮೂರಿಗೆ ನೀರು ಬೇಕೆಂದು ಕೇಳುತ್ತೇವೆ. ಆದರೆ, ಹೋರಾಟದಲ್ಲಿ ಪಾಲ್ಗೊಳ್ಳಲು ನಿರಾಸಕ್ತಿ ತೋರುತ್ತೇವೆ. ಪರಿಣಾಮ ಇಡೀ ಜಿಲ್ಲೆ ನೀರಾವರಿ ಯೋಜನೆಗೆ
ಒಳಪಡುವುದರಿಂದ ವಂಚಿತವಾಗಿದೆ. ಇನ್ಮುಂದಾದರೂ ನಾವೆಲ್ಲರೂ ಒಗ್ಗೂಡಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ಕೈಗೊಳ್ಳುವುದು ಅಗತ್ಯವೆಂದು ತಿಳಿಸಿದರು.
ಮಾದಿಗ ಸಮಾಜದ ಮುಖಂಡ ಎಂ.ಆರ್.ಶಿವರಾಜ್ ಮಾತನಾಡಿ, 30 ವರ್ಷಗಳ ಕಾಲ ಹೋರಾಟ ನಡೆಸಿ,
ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಎಂ.ಜಯಣ್ಣ, ಒಡೆಯರ್, ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಅವರ ಹೆಸರನ್ನು ಯೋಜನೆ ಹಾಗೂ ಕಾಲುವೆಗೆ ನಾಮಕರಣ ಮಾಡಬೇಕು. ಈ ಮೂಲಕ ಹೋರಾಟಗಾರರನ್ನು ಸ್ಮರಿಸುವ ಕೆಲಸ ಆಗಲಿ ಎಂದು ಹೇಳಿದರು.
ವಯಸ್ಕರ ಶಿಕ್ಷಣ ಇಲಾಖೆಯ ವೀರಣ್ಣ, ರಾಷ್ಪ್ರೀಯ ಕ್ರೀಡಾಪಟುಗಳಾದ ವಿಕ್ರಂ, ಶಿವಕುಮಾರ್, ಎಸ್.ಸಿದ್ದರಾಜು, ಶಂಕರ್, ಸತೀಶಬಾಬು, ದ್ವಾರಕನಾಥ್, ಮುಖಂಡರಾದ ಭವಾನಿ ಮಂಜಣ್ಣ, ತಿಪ್ಪೇಸ್ವಾಮಿ, ರಾಮಣ್ಣ ಇತರರಿದ್ದರು.













