Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮರ್ಚೆಂಟ್ಸ್ ಬ್ಯಾಂಕ್ ಗೆ 4.91 ಕೋಟಿ ರೂ. ಲಾಭ, : ಷೇರುದಾರರಿಗೆ ಶೇ. 25 ಲಾಭಾಂಶ ವಿತರಣೆ : ಸಹಕಾರ ರತ್ನ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ

---Advertisement---

ಸುದ್ದಿಒನ್, ಚಿತ್ರದುರ್ಗ, ಜು. 15 : ಜಿಲ್ಲೆಯ ಪ್ರತಿಷ್ಟಿತ ಬ್ಯಾಂಕೆಂದೇ ಹೆಸರಾಗಿರುವ ನಗರದ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕು ಭಾರತೀಯ ರಿಸರ್ವ್ ಬ್ಯಾಂಕಿನ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸಾಲ ವಿತರಣೆಯಲ್ಲಿ ಕುಂಠಿತವಾಗಿದೆ. ಇದು ಬ್ಯಾಂಕಿನ ವರಮಾನದ ಮೇಲೂ ನೇರ ಪರಿಣಾಮ ಉಂಟು ಮಾಡಿದೆ. ಇದರ ನಡುವೆಯೂ 2024-25ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು ತೆರಿಗೆ ಮತ್ತು ಅವಕಾಶಗಳ ಮುಂಚಿನ ಲಾಭವು 4.91 ಕೋಟಿ ಗಳಿಸಿದೆ. ಬ್ಯಾಂಕಿನ ಷೇರುದಾರರಿಗೆ ಶೇಕಡಾ 25 ರಷ್ಟು ಲಾಭಾಂಶ ನೀಡಲಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ಘೋಷಿಸಿದರು.

ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕಿನ 74ನೇ ಸರ್ವ ಸದಸ್ಯರ ಸಭೆಯನ್ನು ಉದ್ಗಾಟಿಸಿ, ಸಭೆಯ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕಿನಲ್ಲಿ 5,796 ಸದಸ್ಯರಿದ್ದು, 1.47 ಕೋಟಿ ಷೇರು ಬಂಡವಾಳ ಹೊಂದಲಾಗಿದೆ. 2024-25 ಸಾಲಿನ ಲಾಭದ ವಿಲೇವಾರಿ ನಂತರ ಬ್ಯಾಂಕಿನ ಸ್ವಂತ ಬಂಡವಾಳವು 46.59 ಕೋಟಿ ರೂ.ಗಳಾಗಿದೆ. ಇದೇ ವರ್ಷದ ಕಳೆದ ಮಾರ್ಚ್ 31ಕ್ಕೆ ಬ್ಯಾಂಕಿನ ಠೇವಣಿ 189.30 ಕೋಟಿ ರೂ.ಗಳಿರುತ್ತದೆ.

ಬ್ಯಾಂಕಿನ ಕಾರ್ಯ ವಿಧಾನದ ಮಾನದಂಡಗಳನ್ನು ಅಳೆಯುವಲ್ಲಿ ಎನ್.ಪಿ.ಎ. ಪ್ರಮುಖ ಪಾತ್ರ ವಹಿಸುತ್ತದೆ. ಒಟ್ಟಾರೆ ಬ್ಯಾಂಕಿನ ನಿವ್ವಳ ಎನ್.ಪಿ.ಎ. ಶೂನ್ಯ ಪ್ರಮಾಣದಲ್ಲಿರುವುದು ಬ್ಯಾಂಕಿನ ಸಧೃಡತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.

ಬ್ಯಾಂಕು 2010 ರಿಂದಲೂ ಷೇರುದಾರರಿಗೆ ಶೇ. 25 ಲಾಭಾಂಶ ವಿತರಿಸುತ್ತಾ ಬಂದಿದೆ. ಅಂತ್ಯ ಸಂಸ್ಕಾರ ನಿಧಿ ಹೆಚ್ಚಳ ಮಾಡಲಾಗಿದೆ. ಷೆಡ್ಯೂಲ್ಡ್ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ನೀಡುವ ಬಹುತೇಕ ಸೌಲಭ್ಯಗಳನ್ನು ನಮ್ಮ ಷೇರುದಾರರಿಗೆ ಹಾಗೂ ಗ್ರಾಹಕರಿಗೆ ನೀಡಲಾಗುತ್ತಿದೆ. ಇದಕ್ಕೆ ಎಲ್ಲಾ ಸದಸ್ಯರ ಸಹಕಾರ ಕಾರಣ ಎಂದು ತಿಳಿಸಿ, 2026ರ ಜೂನ್ ತಿಂಗಳಿನಲ್ಲಿ ಬ್ಯಾಂಕಿನ ಅಮೃತ ಮಹೋತ್ಸವ ನಡೆಯಲಿದ್ದು, ಎಂದಿನಂತೆ ಎಲ್ಲಾ ಸದಸ್ಯರು ಬೆಂಬಲ ನೀಡಬೇಕೆಂದು ಕೋರಿದರು.

ಸಭೆಯಲ್ಲಿ ಭಾಗವಹಿಸಿದ್ದ ಷೇರುದಾರರು ಬ್ಯಾಂಕಿಗೆ ಈ ಸಾಲಿನಲ್ಲಿ ಬಂದಿರುವ ಲಾಭಾಂಶ ಕಡಿಮೆಯಾದರೂ ಷೇರುದಾರರಿಗೆ ಶೇ. 25 ಲಾಭಾಂಶ ವಿತರಣೆ ಮಾಡುತ್ತಿರುವುದಕ್ಕೆ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ನೇತೃತ್ವದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಅಮೃತ ಮಹೋತ್ಸವ ಕಾರ್ಯಕ್ರಮದ ನೆನಪಿಗಾಗಿ ಷೇರುದಾರರಿಗೆ ಕೊಡುಗೆಯನ್ನು ನೀಡಬೇಕೆಂದು ವಿನಂತಿಸಿದರು.
ಷೇರುದಾರರಿಗೆ ಕೊಡುಗೆ ನೀಡುವ ಬದಲು ಅಮೃತ ಮಹೋತ್ಸವ ಸ್ಮರಣಾರ್ಥ ಕಟ್ಟಡವೊಂದನ್ನು ನಿರ್ಮಿಸಲೂ ಸಹಾ ಸಲಹೆ ನೀಡಿದರು.

ಶ್ರೀಮತಿ ಸೂರ್ಯರಾಜಶ್ರೀ ಪ್ರಾರ್ಥಿಸಿದರು. ಬ್ಯಾಂಕಿನ ನಿರ್ದೇಶಕ ರಘುರಾಮರೆಡ್ಡಿ ಸ್ವಾಗತಿಸಿದರು. ಮೃತ ಸದಸ್ಯರ ಹೆಸರನ್ನು ಬ್ಯಾಂಕಿನ ನಿರ್ದೇಶಕ ಪಿ.ಎಲ್.ಸುರೇಶ್‌ರಾಜು ವಾಚಿಸಿದರು. ಸಭೆಯ ಆಹ್ವಾನ ಪತ್ರಿಕೆಯನ್ನು ಸಿ.ಇ.ಓ. ಮಲ್ಲಿಕಾರ್ಜುನ ಕೆ.ಆರ್. ವಾಚಿಸಿದರು. 2024-25ನೇ ಸಾಲಿನ ಸರ್ವಸದಸ್ಯರ ನೋಟೀಸನ್ನು ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀಮತಿ ವಾಣಿ ವಾಚಿಸಿದರು, ಬ್ಯಾಂಕಿನ ನಿರ್ದೇಶಕ ಶ. ಮಂಜುನಾಥ ವಂದಿಸಿದರೆ, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಬ್ಯಾಂಕಿನ 25 ಹಿರಿಯ ಸದಸ್ಯರು, ಷೇರುದಾರರು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರ ಎಸ್.ಎಸ್.ಎಲ್.ಸಿ., ಮತ್ತು ಪಿ.ಯು.ಸಿ. ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಎಲ್.ಈ. ಶ್ರೀನಿವಾಸ್‍ಬಾಬು ಸೇರಿದಂತೆ ಇನ್ನಿತರ ನಿರ್ದೇಶಕರು, ಬ್ಯಾಂಕಿನ ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment