ಯುವ ನಿರ್ದೇಶಕ ಚಯನ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಮ್ಯಾರೇಜ್ ಪಾರ್ಟಿ’ ಚಿತ್ರವು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಶ್ರೀ ವಾರಾಹಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ವಿ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ಸದ್ಯ ಚಿತ್ರತಂಡ ಬಿಡುಗಡೆ ಮಾಡಿರುವ ಫಸ್ಟ್ ಲುಕ್ ಪೋಸ್ಟರ್ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಸಿನಿಮಾದ ಆಂತರ್ಯವನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾದ ಈ ಪೋಸ್ಟರ್, ಮೊದಲ ನೋಟದಲ್ಲೇ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಹಿಂದೆ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕರಾಗಿದ್ದ ‘ಅಧಿಪತ್ರ’ ಚಿತ್ರವನ್ನು ನಿರ್ದೇಶಿಸಿ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದ್ದ ಚಯನ್ ಶೆಟ್ಟಿ, ತಮ್ಮ ಎರಡನೇ ಸಿನಿಮಾದಲ್ಲಿ ಸಂಪೂರ್ಣ ಭಿನ್ನವಾದ ಹಾದಿ ತುಳಿದಿದ್ದಾರೆ. ಗಟ್ಟಿ ಕಥಾಹಂದರ ಹಾಗೂ ಭರಪೂರ ಹಾಸ್ಯದ ಮಿಶ್ರಣದೊಂದಿಗೆ ಈ ‘ಮ್ಯಾರೇಜ್ ಪಾರ್ಟಿ’ಯನ್ನು ಅವರು ಸಿದ್ಧಪಡಿಸಿದ್ದಾರೆ.
ಕರಾವಳಿ ಭಾಗದಲ್ಲಿ ನಡೆಯುವ ರಸವತ್ತಾದ ಕಥಾನಕವನ್ನು ಹೊಂದಿರುವ ಈ ಚಿತ್ರದ ಮೂಲಕ, ಈಗಾಗಲೇ ಒಂದಷ್ಟು ತುಳು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿರುವ ವಿನೀತ್ ಕುಮಾರ್ ನಾಯಕರಾಗಿ ಬಡ್ತಿ ಪಡೆದಿದ್ದಾರೆ. ಚಿತ್ರಕ್ಕೆ ಶ್ರೀಕಾಂತ್ ಅವರ ಛಾಯಾಗ್ರಹಣ ಹಾಗೂ ರಿತ್ವಿಕ್ ಮುರಳೀಧರ್ ಅವರ ಸಂಗೀತ ನಿರ್ದೇಶನವಿದೆ. ‘ಸು ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನದ ಜವಾಬ್ದಾರಿ ಹೊತ್ತಿದ್ದರೆ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ ಒದಗಿಸಿದ್ದಾರೆ.
ಚಿತ್ರದಲ್ಲಿ ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್ ಹಾಗೂ ಭೀಮ್ ರಾವ್ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಈ ಚಿತ್ರವು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲು ಸಜ್ಜಾಗಿದೆ.










