ವಿಭಿನ್ನ ಪ್ರೇಮಕಥೆಯ ಸುಳಿವು ನೀಡಿದ ‘ಲವ್ ಸೀಸನ್ಸ್’ ಸಿನಿಮಾ ಇದೀಗ ತನ್ನ ಮೊದಲ ಲಿರಿಕಲ್ ವೀಡಿಯೋ ಹಾಡನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆಯುತ್ತಿದೆ. ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ‘ಮಳೆಯಾಗೋ ಮೊದಲೇ’ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಎನ್.ಆರ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಈ ಹಾಡಿಗೆ “ಮಳೆಯಾಗೋ ಮೊದಲೇ ಕೊಡೆ ಹಿಡಿದು ಬರುವೆ…” ಎಂಬ ಮನಮೋಹಕ ಸಾಲುಗಳನ್ನು ಕಾಂತಾರಾ ಖ್ಯಾತಿಯ ಪ್ರಮೋದ್ ಮರವಂತೆ ರಚಿಸಿದ್ದಾರೆ. ವೀರ್ ಸಮರ್ಥ್ ಸಂಗೀತ ಸಂಯೋಜನೆಯ ಈ ಗೀತೆಗೆ ಸರೆಗಮಪ ಸೀಸನ್ 10 ಖ್ಯಾತಿಯ ಪ್ರಜ್ಞಾ ಮರಾಠೆ ಹಾಗೂ ಅರ್ಮಾನ್ ಮಲಿಕ್ ಧ್ವನಿ ನೀಡಿದ್ದಾರೆ.

ಟೀಸರ್ ಬಿಡುಗಡೆ ವೇಳೆ ಸಂಗೀತದ ಬಗ್ಗೆ ನೀಡಿದ್ದ ಭರವಸೆಯನ್ನು ಈ ಹಾಡು ಮತ್ತಷ್ಟು ಬಲಪಡಿಸಿದಂತಿದ್ದು, ಪ್ರೇಮಕಥೆಯ ಭಾವನಾತ್ಮಕ ಲೋಕವನ್ನು ಪರಿಚಯಿಸುತ್ತದೆ.ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಿಸಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಹಾಗೂ ಶ್ವೇತಾ ಕೊಗ್ಲೂರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್ ಸೇರಿದಂತೆ ಅನೇಕರು ತಾರಾಗಣದಲ್ಲಿ ಇದ್ದಾರೆ. ಮಧುರ ಸಂಗೀತದೊಂದಿಗೆ ‘ಲವ್ ಸೀಸನ್ಸ್’ ಸಿನಿಮಾ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದೆ.



















