ಸುದ್ದಿಒನ್, ಚಿತ್ರದುರ್ಗ, ಜೂನ್. 28 : ಕೋಟೆ ನಾಡು ಚಿತ್ರದುರ್ಗದಲ್ಲಿ ನಗರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ದಿವ್ಯ ನಿರ್ಲಕ್ಷ್ಯಕ್ಕೆ ಈಗ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ 15ನೇ ವಾರ್ಡ್ ವ್ಯಾಪ್ತಿಯ ನೂರ್ ಮೊಹಲ್ಲಾ (ಶ್ರೀ ಸಂಪಿಗೆ ಸಿದ್ದೇಶ್ವರ ಶಾಲೆ ಹಿಂಭಾಗ) ಪ್ರದೇಶದಲ್ಲಿ ನಗರಸಭೆಯು ವಿಚಿತ್ರ ಕಾರುಬಾರು ನಡೆಸುತ್ತಿದ್ದು, ಇಲ್ಲಿನ ಬೀದಿ ದೀಪಗಳು ಹಗಲಿನಲ್ಲಿ ರಾಜಾರೋಷವಾಗಿ ಉರಿಯುತ್ತಾ ವಿದ್ಯುತ್ ವ್ಯರ್ಥ ಮಾಡುತ್ತವೆ. ಆದರೆ ಜನರಿಗೆ ಬೆಳಕು ಬೇಕಾದ ರಾತ್ರಿ ಹೊತ್ತಿನಲ್ಲಿ ಮಾತ್ರ ಸಂಪೂರ್ಣವಾಗಿ ಆಫ್ ಆಗಿರುತ್ತವೆ!
ಈ ಪ್ರದೇಶದಲ್ಲಿ ಮಾತ್ರವಲ್ಲದೆ ನಗರದ ಬಹುತೇಕ ಪ್ರದೇಶಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿ ತಲುಪಿದ್ದು, ಬೀದಿ ದೀಪಗಳು ಹಗಲಿನಲ್ಲಿ ರಾಜಾರೋಷವಾಗಿ ಉರಿಯುತ್ತಾ ವಿದ್ಯುತ್ ಪೋಲು ಮಾಡುತ್ತಿವೆ. ಆದರೆ, ಸಾರ್ವಜನಿಕರಿಗೆ ಅತ್ಯಗತ್ಯವಾಗಿ ಬೆಳಕು ಬೇಕಾದ ರಾತ್ರಿಯ ಸಮಯದಲ್ಲಿ ಮಾತ್ರ ದೀಪಗಳು ಸಂಪೂರ್ಣವಾಗಿ ಆಫ್ ಆಗಿರುತ್ತವೆ.
ನಗರಸಭೆಯ ಈ ಬೇಜವಾಬ್ದಾರಿತನ ಕೆಲಸದಿಂದಾಗಿ ಸ್ಥಳೀಯ ನಿವಾಸಿಗಳು ಪ್ರತಿದಿನ ಪರದಾಡುವಂತಾಗಿದೆ.
ರಾತ್ರಿ ಹೊತ್ತು ರಸ್ತೆಯಲ್ಲಿ ಸಂಪೂರ್ಣ ಕತ್ತಲಿರುವುದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಓಡಾಡಲು ಭಯಪಡುವಂತಾಗಿದೆ. ಇವರ ಸುರಕ್ಷತೆಗೆ ಯಾರು ಹೊಣೆ? ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸಿದ್ದಾರೆ.
ಈ ವಿಚಿತ್ರ ಸಮಸ್ಯೆಯನ್ನು ಮನಗಂಡು, ಮಾನ್ಯ ಪೌರಾಯುಕ್ತರು ತಕ್ಷಣವೇ ಮಧ್ಯಪ್ರವೇಶಿಸಬೇಕು. ಕರ್ತವ್ಯ ಲೋಪ ಎಸಗಿರುವ ಸಂಬಂಧಪಟ್ಟ ಅಧಿಕಾರಿ ಹಾಗೂ ಎಂಜಿನಿಯರ್‌ಗಳಿಗೆ ಸೂಕ್ತ ಬಿಸಿ ಮುಟ್ಟಿಸಬೇಕು. ತಕ್ಷಣವೇ ರಾತ್ರಿ ವೇಳೆ ಬೀದಿ ದೀಪಗಳು ಬೆಳಗುವಂತೆ ವ್ಯವಸ್ಥೆ ಮಾಡಿ, ಸಾರ್ವಜನಿಕರ ಆತಂಕ ದೂರ ಮಾಡಬೇಕು ಎಂದು ಚಿತ್ರದುರ್ಗ ನಗರದ 15ನೇ ವಾರ್ಡ್‌ನ ನಿವಾಸಿಗಳು ಒತ್ತಾಯಿಸಿದ್ದಾರೆ.









