Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಹಿತಕ್ಕಾಗಿ ಪಕ್ಷಾತೀತವಾಗಿ ಒಂದಾಗೋಣ: ದೆಹಲಿ ಸಂಸದರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಕರೆ

---Advertisement---

ದೆಹಲಿ.ಜುಲೈ.28: ರಾಜ್ಯದ ವಿಚಾರ ಬಂದಾಗ, ರಾಜ್ಯದ ಹಿತಕ್ಕಾಗಿ ನಾವೆಲ್ಲ ಒಟ್ಟಿಗೇ ಕೆಲಸ ಮಾಡೋಣ. ರಾಜ್ಯದ ಜನರ ಕಲ್ಯಾಣಕ್ಕಾಗಿ ಪಕ್ಷ ರಾಜಕಾರಣವನ್ನು ಪಕ್ಕಕ್ಕಿಡೋಣ. ಕೇಂದ್ರ ಸರ್ಕಾರದ ಮುಂದೆ ಬಾಕಿ ಉಳಿದಿರುವ ರಾಜ್ಯದ ನಾನಾ ಯೋಜನೆಗಳಿಗೆ ಅನುಮತಿ ದೊರಕಿಸಿಕೊಡಲು ನಿಮ್ಮ ಸಹಕಾರವನ್ನು ಬಯಸುತ್ತೇನೆ ಎಂದು ಸಿಎಂ ಡಿ.ಕೆ. ಶಿಕುಮಾರ್ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಸಂಸದರ ಸಭೆಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು,ನಾನು ಇತ್ತೀಚೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾಗ, ಈ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದರು. ಕರ್ನಾಟಕದಲ್ಲಿ ಆಲಮಟ್ಟಿ ಮತ್ತು ಹಾರಂಗಿ ಜಲಾಶಯ ಹೊರತುಪಡಿಸಿ ಉಳಿದ ಅಣೆಕಟ್ಟುಗಳು ಬಹುತೇಕ ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಲಕ್ಷಣಗಳಿವೆ. ರಾಜ್ಯದ ಈ ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದು ಅಗತ್ಯ ನೆರವು ಕೋರಿದ್ದೇನೆ. ಅದು ಸಿಗಲು ಜನಪ್ರತಿನಿಧಿಗಳ ಸಹಕಾರ ಬೇಕು ಎಂದರು.

ರಾಜ್ಯದಲ್ಲಿ ಗಂಭೀರ ಬರ ಪರಿಸ್ಥಿತಿ ಇರುವುದರಿಂದ, ಅಣೆಕಟ್ಟುಗಳಲ್ಲಿರುವ ನೀರಿನ ಪ್ರಮಾಣ ನೋಡಿ ಬೆಳೆ ಹಾಕಿ ಎಂದು ರೈತರಿಗೆ ಮನವಿ ಮಾಡಿದ್ದೇನೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ.

ತುಂಗಭದ್ರಾ ಕ್ರಸ್ಟ್ ಗೇಟ್ ಅಳವಡಿಕೆಯ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ನಾನು, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣದ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ, ಮೂವರೂ ಒಂದೆಡೆ ಸೇರಿದ್ದೆವು. ನಮ್ಮ ಮನವಿಗೆ ಓಗೊಟ್ಟು ಕೇಂದ್ರ ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 30 ಟಿಎಂಸಿ ನೀರು ಉಳಿಸಲು ತುಂಗಭದ್ರಾಗೆ ನವಿಲೆ ಸಮತೋಲನ ಜಲಾಶಯ ಕಟ್ಟಲು ಕೇಂದ್ರ ಸಚಿವರ ಸಮ್ಮುಖದಲ್ಲಿ ಮೂವರೂ ಸಿಎಂಗಳು ಒಪ್ಪಿದ್ದೇವೆ. ಜತೆಗೆ ಗೋದಾವರಿ, ಕೃಷ್ಣಾ, ಪೆನ್ನಾರ್, ಕಾವೇರಿ ನದಿಗಳ ಜೋಡಣೆ ಯೋಜನೆಗೂ ನಾವು ಸಮ್ಮತಿಸಿದ್ದು, ಇದೊಂದು ಐತಿಹಾಸಿಕ ತೀರ್ಮಾನವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಶ್ರೀ ವಿಜಯ್ ಅವರು ನನ್ನನ್ನು ಭೇಟಿ ಮಾಡಲು ಬಯಸಿದ್ದಾರೆ.

ಮೇಕೆದಾಟು ಯೋಜನೆ ಕುರಿತು ಸುಪ್ರೀಂ ಕೋರ್ಟ್ ಎರಡೂ ರಾಜ್ಯಗಳಿಗೆ ಅನುಕೂಲವಾಗುವ ತೀರ್ಪು ಕೊಟ್ಟಿದೆ. ಕರ್ನಾಟಕದ ಜಾಗದಲ್ಲಿ ಸಮತೋಲನ ಅಣೆಕಟ್ಟು ಕಟ್ಟಲು ಬೇರೆ ರಾಜ್ಯಗಳ ಅನುಮತಿ ಅನಗತ್ಯ ಹಾಗೂ ಆಕ್ಷೇಪ ವ್ಯಕ್ತಪಡಿಸಲು ಹಕ್ಕಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇಂದು ರಾಜ್ಯಸಭೆಯಲ್ಲೂ ಜಲಶಕ್ತಿ ಸಚಿವರು ತಮಿಳುನಾಡಿನ ಅನ್ಬುಮಣಿ ರಾಮದಾಸ್ ಅವರ ಪ್ರಶ್ನೆಗೆ ಉತ್ತರಿಸುವಾಗ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಇದಕ್ಕೆ ಕರ್ನಾಟಕದ ಪರವಾಗಿ ಧನ್ಯವಾದಗಳನ್ನು ಹೇಳುತ್ತೇನೆ.

ಕೃಷ್ಣಾ ನ್ಯಾಯಮಂಡಳಿಯ ನೀರು ಹಂಚಿಕೆ ತೀರ್ಮಾನ ಗೆಜೆಟ್ ನೋಟಿಫಿಕೇಶನ್ ಆಗಬೇಕಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿತ್ತು. ಅದನ್ನು ಇತ್ಯರ್ಥಪಡಿಸಲು ವಿಶೇಷ ಪೀಠ ಸ್ಥಾಪನೆಯ ಕುರಿತು ಇಂದು ಸುಪ್ರೀಂ ಕೋರ್ಟ್ನಲ್ಲಿ ತೀರ್ಮಾನವಾಗಿದೆ. ಮಹದಾಯಿ ಯೋಜನೆಯ ಅಡೆತಡೆ ನಿವಾರಣೆಗೆ ನ್ಯಾಯವಾದಿಗಳ ಜತೆ ಸಮಾಲೋಚನೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ನಮ್ಮ ರಾಜ್ಯದ ಬಾಕಿ ಯೋಜನೆಗಳ ನಿರ್ವಹಣೆಗೆ ಕರ್ನಾಟಕ ಭವನದಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ನಮ್ಮ ಯೋಜನೆಗಳ ಬೆಳವಣಿಗೆಗಳನ್ನು ಗಮನಿಸಲು ಪ್ರತ್ಯೇಕ ರೆಸಿಡೆಂಟ್ ಕಮಿಷನರ್ ಸೇರಿದಂತೆ ಹೊಸ ತಂಡ ರಚಿಸಲಾಗುವುದು ಎಂದು ತಿಳಿಸಿದ್ದಾರೆ.

Join WhatsApp

Join Now

Join Telegram

Join Now