Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಚಿವ ಸಂಪುಟ ವಿಸ್ತರಣೆ ಕಸರತ್ತು: ಇಂದು ದೆಹಲಿಯಲ್ಲಿ ಹೈಕಮಾಂಡ್-ರಾಜ್ಯ ನಾಯಕರ ಮಹತ್ವದ ಸಭೆ

---Advertisement---

ದೆಹಲಿ.ಜುಲೈ.28: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ಕಾಂಗ್ರೆಸ್ ಅಂಗಳದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ದೆಹಲಿಯಲ್ಲಿ ಇಂದು ನಿರ್ಣಾಯಕ ಸಭೆ ನಡೆಯುವ ಸಾಧ್ಯತೆಯಿದೆ.

ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಅಂತಿಮ ಸುತ್ತಿನ ಸಮಾಲೋಚನೆ ನಡೆಸಲಿದ್ದಾರೆ.

ಆಗಸ್ಟ್ 6ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು, ಅದಕ್ಕಿಂತ ಮುಂಚಿತವಾಗಿಯೇ ಸಂಪುಟ ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೈಕಮಾಂಡ್ ಮುಂದಾಗಿದೆ. ಸರ್ಕಾರ ರಚನೆಯಾಗಿ ಎರಡು ತಿಂಗಳು ಪೂರ್ಣಗೊಳ್ಳುತ್ತಿದ್ದರೂ 20 ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಸೋಮವಾರ ರಾತ್ರಿ ನಡೆಯಬೇಕಿದ್ದ ಸಭೆ ಮುಂದೂಡಲ್ಪಟ್ಟಿದ್ದರಿಂದ, ಮಂಗಳವಾರ ಪ್ರತ್ಯೇಕ ಚರ್ಚೆಗಳು ನಡೆಯಲಿವೆ. ಇಲ್ಲಿ ಸಿದ್ಧವಾಗುವ ಸಂಭವನೀಯ ಸಚಿವರ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಅನುಮೋದನೆಗೆ ರವಾನಿಸಲಾಗುತ್ತದೆ.

ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಖಾಲಿ ಇರುವ 20 ಸ್ಥಾನಗಳ ಪೈಕಿ 12ರಿಂದ 15 ಸ್ಥಾನಗಳನ್ನು ಯುವ ನಾಯಕರು ಹಾಗೂ ಹೊಸ ಮುಖಗಳಿಗೆ ನೀಡುವ ಸಾಧ್ಯತೆಯಿದೆ. ಇಲ್ಲಿ ಹೊಸ ಮುಖಗಳೆಂದರೆ ಕೇವಲ ಚೊಚ್ಚಲ ಬಾರಿಯ ಶಾಸಕರಷ್ಟೇ ಅಲ್ಲದೆ, ಮೂರಕ್ಕಿಂತ ಹೆಚ್ಚು ಬಾರಿ ಗೆದ್ದು ಆಡಳಿತಾತ್ಮಕ ಅನುಭವ ಹೊಂದಿರುವ ಶಾಸಕರನ್ನೂ ಪರಿಗಣಿಸಲಾಗುತ್ತದೆ. ಪ್ರಾದೇಶಿಕ ಸಮತೋಲನ, ಜಾತಿ ಸೂತ್ರ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಮಾನದಂಡವಾಗಿಟ್ಟುಕೊಂಡು ಪಟ್ಟಿ ತಯಾರಿಸಲಾಗಿದೆ.

ಸಚಿವರ ಅಂತಿಮ ಪಟ್ಟಿ ಸಿದ್ಧವಾದರೂ ಪ್ರಮಾಣವಚನ ಸ್ವೀಕಾರಕ್ಕೆ ರಾಜ್ಯಪಾಲರ ಪ್ರವಾಸ ಸಣ್ಣ ಮಟ್ಟದ ವಿಳಂಬ ತರಬಹುದು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಗುರು ಪೂರ್ಣಿಮೆ ನಿಮಿತ್ತ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದು, ಜುಲೈ 30ರ ರಾತ್ರಿ ಬೆಂಗಳೂರಿಗೆ ಮರಳಲಿದ್ದಾರೆ. ಹೀಗಾಗಿ, ಜುಲೈ 30ರ ನಂತರವೇ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ರಾಜಭವನದಲ್ಲಿ ನಡೆಯುವ ಸಾದ್ಯತೆಯಿದೆ ಎನ್ನಲಾಗಿದೆ.

Join WhatsApp

Join Now

Join Telegram

Join Now